2023 ರ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ

Share and Enjoy !

Shares
Listen to this article

ವಿಜಯನಗರ ವಾಣಿ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ವರ್ಷಗಳು ಬಾಕಿ ಉಳಿದಿವೆ. ರಾಜ್ಯ ರಾಜಕಾರಣದಲ್ಲಿರುವ ಬಿಕ್ಕಟ್ಟಿನ ವಾತಾವರಣ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಅಖಾಡಕ್ಕೆ ಇಳಿಯಲು ಈಗಲೇ ಸಜ್ಜುಗೊಳ್ಳುವಂತೆ ಮಾಡಿದೆ. ಅದರಲ್ಲೂ ಜೆಡಿಎಸ್ ಪಕ್ಷ ಸದ್ಯದ ರಾಜಕೀಯ ಸನ್ನಿವೇಶದ ಲಾಭ ಪಡೆಯುವ ನಿಟ್ಟಿನಲ್ಲಿ ತಂತ್ರಗಳನ್ನು ರೂಪಿಸಲು ಶುರುಮಾಡಿದೆ. ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪಕ್ಷದ ಕಾರ್ಯತಂತ್ರವನ್ನು ರೂಪಿಸುತ್ತಿದ್ದು ಸರಣಿ ಸಭೆಗಳನ್ನು ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಪ್ರಯತ್ನದಲ್ಲಿದ್ದಾರೆ.

ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬುವವರಿಗೆ ಕೊಡ್ತಾರಾ ದಳಪತಿಗಳು ಉತ್ತರ

ಜೆಡಿಎಸ್ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಹೇಳಿಕೊಂಡು ಬಂದಿದ್ದಾರೆ. ಅದರಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪದೇ ಪದೇ ಜೆಡಿಎಸ್‌ ಪಕ್ಷವನ್ನು ಕೆಣಕುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾನವಾದ ಹಿನ್ನೆಲೆಯಲ್ಲಿ ಅದು ಜೆಡಿಎಸ್‌ಗೆ ಲಾಭವಾಗಿ ಎಚ್‌ಡಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಹೆಚ್ಚು ಕಾಲ ಉಳಿಯಲಿಲ್ಲ. ಇದೀಗ ಇನ್ನೆರಡು ವರ್ಷದಲ್ಲಿ ಮತ್ತೆ ಚುನಾವಣೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಶಕ್ತಿ ತೋರಿಸಲು ದಳಪತಿಗಳು ಸಜ್ಜಾಗುತ್ತಿದ್ದಾರೆ.

ಇದೇ ವಿಚಾರವಾಗಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಅಂತಾರೆ. 2023 ಕ್ಕೆ ಜೆಡಿಎಸ್ ಇರಲ್ಲ ಅಂತಾರೆ. ಯಾರ್ ಮಾತಾಡಿದ್ರು ಅಂತ ನಾನು ಮಾತಾಡೊಲ್ಲ. ಆದ್ರೆ ಹಾಗೆ ಹೇಳಿರೋರಿಗೆ ಎಚ್ಚರಿಕೆ ಕೊಡ್ತೀನಿ.ಹೋರಾಟ ಮಾಡಿ ಪಕ್ಷದ ಅಸ್ಥಿತ್ವ ಉಳಿಸಿಕೊಂಡು ನಾವು ಅಧಿಕಾರಕ್ಕೆ ಬರೋಕೆ ಕೆಲಸ ಮಾಡ್ತೀವಿ. ವಿರೋಧಿಗಳಿಗೆ ಈ ಮೂಲಕ ತಿಳಿಸುತ್ತೇನೆ ಎಂಬ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ನೀರಾವರಿ ಯೋಜನೆ ಪರ ಹೋರಾಟ, ಪಾದಯಾತ್ರೆಯ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ

ರಾಜ್ಯದ ನೀರಾವರಿ ಯೋಜನೆಗಳಿಗೆ ಉಂಟಾಗಿರುವ ಅಡ್ಡಿ ಆತಂಕಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಜೆಡಿಎಸ್‌ ಮುಂದಾಗಿದೆ. ಮೇಕೆದಾಟು, ಕೃಷ್ಣಾ ಮೇಲ್ಡಂಡೆ, ಮಹದಾಯಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಜೆಡಿಎಸ್ ಹೋರಾಟ ನಡೆಸಲಿದೆ. ಸ್ವತಃ ಎಚ್‌ಡಿ ದೇವೇಗೌಡರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಪಾದಯಾತ್ರೆ ಪ್ರಾರಂಭ ಮಾಡಲು ಜೆಡಿಎಸ್ ನಿರ್ಧಾರ ಮಾಡಿದೆ.

ಮತ್ತೊಂದು ಕಡೆಯಲ್ಲಿ ರೈತರ ಮನಗೆಲ್ಲಲು ಜೆಡಿಎಸ್ ಸಿದ್ಧತೆ ನಡೆಸುತ್ತಿದೆ. ಸ್ವತಃ ತಾನೇ ರೈತನಾಗಿ ರೈತರ ಸಂಕಷ್ಟದ ಜೊತೆಗೆ ನಿಲ್ಲುವ ತಂತ್ರ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಾಡುತ್ತಿದ್ದಾರೆ. ತಮ್ಮ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯುವ ಮೂಲಕ ಹೆಚ್ಚಿನ ಸಮಯವನ್ನು ಅಲ್ಲೇ ಕಳೆಯುತ್ತಿದ್ದಾರೆ. ಈ ಮೂಲಕ ರೈತರಿಗೂ ಒಂದು ಸಂದೇಶ ನೀಡುವುದು ಅವರ ಉದ್ದೇಶವಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ನೀರಾವರಿ, ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆ ಮಾಡುವ ಮೂಲಕ 2023 ರ ವಿಧಾನಸಭೆ ಚುನಾವಣೆಗೆ ದಳಪತಿಗಳು ಸಜ್ಜಾಗುತ್ತಿದ್ದಾರೆ.

Share and Enjoy !

Shares