ಅಂಜಿಕೆಯಿಲ್ಲದ ಅಂತರಾಳದ ಮಾತುಗಳು

Share and Enjoy !

Shares
Listen to this article

*ಒಂದು ಮುನ್ನೋಟ*
ವಿಜಯಪುರದ ಶ್ರೀಮತಿ *ಮಮತಾ ಗುಮಶೆಟ್ಟಿ* ಯವರು ಸ್ನಾತಕೋತ್ತರ ಪದವೀಧರರು. ಸಾಹಿತ್ಯ ಆಸಕ್ತಿ ಹೊಂದಿರುವ ಇವರು ಸದಾ ವಿದ್ಯಾರ್ಥಿನಿಯಾಗಿ ಅಧ್ಯಯನ, ಅಧ್ಯಾಪನ ಮತ್ತು ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಮಮತೆಯ ಅಮರ ಕಾವ್ಯ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರಲ್ಲದೇ, ಸಾಹಿತ್ಯದ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ.

ಸಮೃದ್ಧವಾಗಿ ಬೆಳೆದು ಬಂದಿರುವ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಲೇಖನಗಳು ಸಹ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿವೆ. ಲೇಖನಗಳ ಮೂಲಕ ವಸ್ತುನಿಷ್ಠ ವಿಷಯಗಳ ಕುರಿತಾಗಿ ಮನದ ಭಾವನೆಗಳನ್ನು ನಿರ್ಭೀಡೆಯಿಂದ ಅರುಹಬಹುದು ಹಾಗೇ ಮಮತಾರವರ ಆಯ್ದ ಲೇಖನಗಳನ್ನು ಹೊತ್ತ *ಅಂಜಿಕೆಯಿಲ್ಲದ ಅಂತರಾಳದ ಮಾತುಗಳು* ಸುಮಾರು ಹನ್ನೊಂದು ಲೇಖನಗಳನ್ನು ಹೊಂದಿದ್ದು ವಿವಿಧ ವಿಷಯಗಳನ್ನು ಅನಾವರಣಗೊಳಿಸುವಂತಿವೆ.

ಈ ಕೃತಿಯಲ್ಲಿ *ಮಮತಾರವರು* ವಿಷಯಗಳ ವಿಶ್ಲೇಷಣೆ ಮಾಡುತ್ತಾ ತಮ್ಮ ನಿಲುವುಗಳನ್ನು ತಿಳಿಸುತ್ತಾ , ಇಂದಿನ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಹಜವಾದ ಅಭಿವ್ಯಕ್ತಿಯ ಮೂಲಕ ಉಪಯುಕ್ತ ಮಾಹಿತಿಯನ್ನು ನೀಡುತ್ತಾ ಸಾಗಿರುವುದು ವಿಶೇಷ. *ಮಹಿಳಾ ಪರವಾದ ನಿಲುವು* ಇವರ ಲೇಖನಗಳಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು.

ಮನುಷ್ಯರ ಮನಸ್ಸು ವಿಕಾಸವಾದಂತೆ ಅವರು ಹೊಸ ಹೊಸ ಹಂಬಲಗಳನ್ನು ಪಡೆಯುತ್ತಾ ಹೋಗುತ್ತಾರೆ. ಹೊಸ ಸಂಸ್ಕಾರಗಳನ್ನು ಹೊಂದುತ್ತಾರೆ. ಅಂದಂದಿನ ಮಟ್ಟಿಗೆ ಯೋಚಿಸುವ ವ್ಯಕ್ತಿಗಳು ತಾವು ಕಂಡ ಚೆಲುವನ್ನೋ, ಉಂಡ ನೋವು ನಲಿವನ್ನೋ ಇತರರಿಗೂ ತಿಳಿಯಪಡಿಸುವ ಸಾಮಾಜಿಕ ಪ್ರೇರಣೆಯಿಂದ ಹಾಗೂ ಕೀರ್ತಿಯ ಹಂಬಲಿಕೆಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ. ಇದಕ್ಕೆ ಮಮತಾರವರು ಹೊರತಾಗಿಲ್ಲ. ಇವರಿಗೂ ಲೇಖನಗಳನ್ನು ಬರೆಯಲು ಮನಸ್ಸೇ ಮುಖ್ಯ ಪ್ರೇರಣೆಯಾಗಿದೆ. ಇವರು ಮನಸ್ಸೊಂದಿದ್ದರೆ ಮಾರ್ಗವು ಉಂಟು ಎಂಬ ಜನಪದರ ಹೇಳಿಕೆಯನ್ನಾಧರಿಸಿ ಹಲವು ಉದಾಹರಣೆಗಳ ಮೂಲಕ ಅಕ್ಷರಗಳಿಗೆ ಜೀವ ತುಂಬಿದ್ದಾರೆ.
ಜಗದ ಚಟುವಟಿಕೆಗಳಿಗೆ ರವಿಯೇ ಕಾರಣವಾದಂತೆ ಮಾನವರ ಎಲ್ಲ ಚಟುವಟಿಕೆಗಳಿಗೂ ಮನವೇ ಕಾರಣ ಎಂಬುವದನ್ನು ತಮ್ಮದೇ ದಾಟಿಯಲ್ಲಿ ವಿವರಿಸಿದ್ದಾರೆ.

ಮಾನವ ಸಂಘ ಜೀವಿ. ಉತ್ತಮ ಬಾಂಧವ್ಯಗಳ ಮೂಲಕ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ. ಹಾಗಾಗಿ ಕರ್ಣ ದುರ್ಯೋಧನರ ಗೆಳೆತನ ,ಕೃಷ್ಣ ಸುಧಾಮನ ಗೆಳೆತನವನ್ನು ಉದಾಹರಿಸುತ್ತಾ, ಸ್ನೇಹಕ್ಕೆ ಪ್ರೀತಿಗೆ ಸಾವಿಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ನಾರಿಯು ಸರ್ವ ಶ್ರೇಷ್ಠಳು.ಹೆರೆವ ತಾಯಿಯಾಗಿ ಪೊರೆವ ತಾಯಿಯಾಗಿ ಪುರುಷನ ಅಸ್ತಿತ್ವಕ್ಕೆ ಕಾರಣರಾಗಿ ತ್ಯಾಗಮೂರ್ತಿಯಾಗಿ ಮಹತ್ವದ ಪಾತ್ರ ನಿರ್ವಹಿಸುವ ಹೆಣ್ಣು ಅಶಕ್ತರು ಅಲ್ಲ,ಅಬಲೆಯೂ ಅಲ್ಲ. ಭಾರತವು ದೇವತೆಗಳ ನಾಡು ಇಲ್ಲಿ ಸಂಪತ್ತಿನ ದೇವತೆ,ವಿದ್ಯಾ ದೇವತೆ, ಶಕ್ತಿ ದೇವತೆ, ಹೆಣ್ಣೇ. ನೆಲ ಜಲ ಮರಗಿಡ ಸೇರಿದಂತೆಯೆ ಪ್ರಕೃತಿಯನ್ನು ಹೆಣ್ಣು ಎಂದೇ ಭಾವಿಸಲಾಗುತ್ತದೆ ನಾರಿ ಪೂಜ್ಯಾರ್ಹಳು ಎಂಬ ಸ್ತ್ರೀ ಪರ ಧೋರಣೆ ಅವರ ಲೇಖನದಲ್ಲಿ ಸಂದರ್ಭೋಚಿತ ಎನ್ನಬಹುದು.

ಭಾರತದಲ್ಲಿ ಮುಸ್ಲಿಂ ಮಹಿಳೆಯರು ಸೇರಿದಂತೆ ಕಿತ್ತೂರು ಚನ್ನಮ್ಮ ಲಕ್ಷ್ಮಿಬಾಯಿ ಮೊದಲಾದ ಅನೇಕ ಮಹಿಳೆಯರು ರಾಜ್ಯಭಾರ ಮಾಡಿದ್ದಾರೆ ಇಂದಿರಾ ಗಾಂಧಿ, ಮೀರಾ ಕುಮಾರಿ, ಕಲ್ಪನಾ ಚಾವ್ಲಾ, ಬಚೇಂದ್ರಿ ಪಾಲ್, ಕಿರಣ್ ಬೇಡಿ,ಸುಷ್ಮಾ ಸ್ವರಾಜ್, ಲತಾ ಮಂಗೇಶ್ಕರ್ ,ಮೊದಲಾದ ಹೆಮ್ಮೆಯ ನಾಯಕಿಯರನ್ನು ಲೇಖನಗಳ ಮೂಲಕ ನೆನಪಿಸಿಕೊಳ್ಳುತ್ತಾರೆ.

ಯೋಗದಿಂದ ರೋಗ ಮುಕ್ತಿ ಎಂಬುವುದನ್ನು ತಮ್ಮದೆ ದಾಟಿಯಲ್ಲಿ ಹೇಳುತ್ತಾ ಯೋಗದ ಮಹತ್ವವನ್ನು ವಿವರಿಸುತ್ತಾರೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಲೇಖನಗಳ ಮೂಲಕ ಪ್ರಸ್ತುತ ದಿನಗಳಲ್ಲಿ, ಜನರು ಅಂತರ್ಜಾಲದ ಪ್ರಭಾವಕ್ಕೊಳಗಾಗಿ ಕಂಪ್ಯೂಟರ್ ಮೊಬೈಲ್ಗಳಲ್ಲಿ ಕಾಲಹರಣ ಮಾಡುತ್ತಾ ಸಂಬಂಧಗಳನ್ನು ಮರೆಯುತ್ತಿದ್ದಾರೆ. ಆದ್ದರಿಂದ ಯಾವುದೇ ವಸ್ತುವಿನ ಬಳಕೆಯು ಇತಿಮಿತಿಯಲ್ಲಿರಬೇಕು ಎನ್ನುತ್ತಾರೆ ಮಮತಾರವರು. ಭಾರತದ ವೀರ ಸುಪುತ್ರರು ಲೇಖನದಲ್ಲಿ ರಾಜ ಮಹಾರಾಜರಿಂದ ಹಿಡಿದು ಸ್ವಾತಂತ್ರ್ಯ ಹೋರಾಟಗಾರರ ಮತ್ತು ಗಡಿ ಕಾಯುವ ಸೈನಿಕರನ್ನು ಹೆಮ್ಮೆಯಿಂದ ಸ್ಮರಿಸುತ್ತಾರೆ. ಅಲ್ಲದೆ ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುವ ಶಿಕ್ಷಣದ ಮಹತ್ವವನ್ನು ಕುರಿತಾಗಿ ಪರಿಪೂರ್ಣ ಬುದುಕಿಗೆ ಶಿಕ್ಷಣ ಅಗತ್ಯ ಎಂಬ ಲೇಖನ ಉತ್ತಮ ಮಾಹಿತಿಯನ್ನು ಒದಗಿಸಿದ್ದಾರೆ.

ಬಂಗಾರಮಯವಿ ಬದುಕು ಲೇಖನದಲ್ಲಿ ಪುರಂದರದಾಸರ ಮಾನವ ಜನ್ಮ ದೊಡ್ಡದು ಎಂಬ ಸಾರವನ್ನು ಎತ್ತಿ ಹಿಡಿಯುತ್ತಾ,ಆತ್ಮವಿಶ್ವಾಸ, ಹೃದಯವಂತಿಕೆ,ಮಾನವೀಯತೆ, ಧನಾತ್ಮಕ ಆಲೋಚನೆ, ಸಹನಾ ಶಕ್ತಿ, ನಂಬಿಕೆ , ಸಹಕಾರ, ಸಹಬಾಳ್ವೆ, ಮೊದಲಾದ ಸದ್ಗುಣಗಳ ಮೂಲಕ ಬದುಕನ್ನು ಸಾರ್ಥಕಗೊಳಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಈ ಶತಮಾನದ ಮಾದರಿಯಾಗಿರುವ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ತನ್ನ ಹೆಜ್ಜೆ ಗುರುತನ್ನು ಮೂಡಿಸಿದ್ದಾಳೆ ಎಂಬುದನ್ನು ಸೂಕ್ತವಾಗಿ ವಿವರಿಸಿದ್ದಾರೆ ಮಮತಾರವರು.

ಈ ರಾಷ್ಟ್ರದ ಒಟ್ಟು ಆದಾಯದಲ್ಲಿ ಮಹಿಳೆಯರದೇ ಸಿಂಹ ಪಾಲು ಇದ್ದರೂ ಹೆಚ್ಚಾಗಿ ಅನುಭವಿಸುವವರು ಪುರುಷರು. ಆದರೂ ಮಹಿಳೆಯರು ಲೈಂಗಿಕ ಕಿರುಕುಳ ಮತ್ತು ಶೋಷಣೆಯಿಂದ ಇನ್ನೂ ಬಿಡುಗಡೆ ಹೊಂದಿಲ್ಲ ಎಂಬ ವಿಷಾದವನ್ನು ಲೇಖಕಿ ವ್ಯಕ್ತಪಡಿಸಿದ್ದಾರೆ.

*ಅಂಜಿಕೆ ಇಲ್ಲದ ಅಂತರಾಳ* ದ ಮಾತುಗಳು ಲೇಖನದಲ್ಲಿ ವಚನಗಾರ್ತಿಯರ ದಿಟ್ಟ ನಿಲವು ಕರುನಾಡಿನ ವೀರ ಮಹಿಳೆಯರ ಛಲ ಮೊದಲಾದವುಗಳನ್ನು ವಿವರಿಸಿದ್ದಾರೆ .

ಹೀಗೆ ಬಾಳಿನ ಅನುಭವವು ಸಾಮಾಜಿಕ ಕಳಕಳಿಯಿಂದಾಗಿ ಲೇಖನಗಳ ರೂಪ ಪಡೆದಿವೆ. ಲೋಕದ ಅನುಭವಗಳಿಗೆ ಲೇಖಕಿ ಇನ್ನಷ್ಟು ಸ್ಪಂದಿಸಲಿ. ಆಪ್ತತೆಯಿಂದ ಲೇಖನ ಬರೆಯುವ ಮಮತಾ ಅವರು ಕನ್ನಡ ಸಾಹಿತ್ಯ ಲೋಕವನ್ನು ಮತ್ತಷ್ಟು ಸುತ್ತಿದರೆ, ಭರವಸೆಯ ಸಾಹಿತಿ ಆಗುವುದರಲ್ಲಿ ಯಾವ ಸಂದೇಹವಿಲ್ಲ. ನಿರಂತವಾಗಿ ಬರೆಯುವ ಹಾದಿಯಲ್ಲಿ ಅವರು ಸಾಗಲಿ ಎಂದು ಹಾರೈಸುವೆ.
ವಿನೋದಾ ಕರಣಂ
ಉಪನ್ಯಾಸಕರು ಸಾಹಿತಿಗಳು ಹಾಗೂ ವಕೀಲರು

Share and Enjoy !

Shares