“ಬಿಡದ ರಾಗ” ಕೃತಿಯ ಎಲ್ಲಾ ಕವನಗಳೂ ಸಾಹಿತ್ಯಾಸಕ್ತರನ್ನು ಓದಿಸಿಕೊಂಡು ಹೋಹೋಗುತ್ತವ
ಕೃತಿ : ಬಿಡದರಾಗ (ಕವಿತೆಗಳು).
ಲೇಖಕಿ : ಭವಾನಿಗೌಡ(ಭುವಿ), ವಿಜಯಪುರ.
ಪ್ರಕಟಣೆ : ಮಾಣಿಕ್ಯ ಪ್ರಕಾಶನ (ರಿ.), ಹಾಸನ.
ಪ್ರಥಮ ಮುದ್ರಣ : ೨೦೨೦.
ಒಟ್ಟು ಪುಟಗಳು : ೧೨೬.
ಮುಖಬೆಲೆ : ೧೦೦/-.
ವಿಮರ್ಶೆ : ಶ್ರೀಮತಿ ವಿನೋದಾ ಕರಣಂ, ಸಾಹಿತಿ ಹಾಗೂ ಉಪನ್ಯಾಸಕರು, ಬಳ್ಳಾರಿ.
ಕೃತಿಯ ಪ್ರತಿಗಳಿಗಾಗಿ ಸಂಪರ್ಕ ಸಂಖ್ಯೆ : ೯೭೩೯೮೭೮೧೯೭.
ಕನ್ನಡ ನಾಡು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿದ್ದು, ಪಂಪನ ಕಾಲದಿಂದಲೂ ಅನೇಕ ಕವಿಗಳನ್ನು ಕಂಡಿದೆ. ಕವಿತೆ ಅಥವಾ ಕಾವ್ಯ ಎನ್ನುವುದು ದಾರ್ಶನಿಕತೆಯನ್ನು ಸೃಷ್ಟಿಸುವ ಸಾಹಿತ್ಯಿಕ ಪ್ರಭೇದ. ಈ ಕವಿತೆಗಳು ಪ್ರಸ್ತುತ ಸಂದರ್ಭದಲ್ಲಿ ಉದಯೋನ್ಮುಖ ಬರಹಗಾರರಿಗೆ ಆತ್ಮ ತೃಪ್ತಿಯಿಂದ ಸಂಭ್ರಮಿಸಲು ಅನುವುಮಾಡಿಕೊಡುತ್ತಿವೆ. ಹೀಗಾಗಿ ಇಂದು ಅಗಣಿತ ಸಂಖ್ಯೆಯಲ್ಲಿ ಬರಹಗಾರರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಸಾರಸ್ವತ ಲೋಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಭುವಿ* ಎಂಬ ಕಾವ್ಯ ನಾಮದಿಂದ ಕವಯಿತ್ರಿಯಾಗಿ ಗುರುತಿಸಿಕೊಂಡಿರುವ ಭವಾನಿ ಗೌಡ ಅವರು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗುಣವಂತೆ ಎಂಬ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದವರು. ಪ್ರಸ್ತುತ ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವನ, ಚುಟುಕು, ಪ್ರಬಂಧ, ಲೇಖನ ಮೊದಲಾದ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಇವರು *ಮಾಣಿಕ್ಯ ಪ್ರಕಾಶನ* ದ ಮೂಲಕ *ಬಿಡದ ರಾಗ* ಕವನ ಸಂಕಲನವನ್ನು ಪ್ರಕಟಿಸುವುದರೊಂದಿಗೆ ಸಾರಸ್ವತ ಲೋಕಕ್ಕೆ ಕವಯಿತ್ರಿಯಾಗಿ ಪಾದಾರ್ಪಣೆ ಮಾಡಿದ್ದಾರೆ.
ಪರಿಸರದಲ್ಲಿ ಆಗುವ ಋತುಮಾನದ ಬದಲಾವಣೆಗಳು, ಪ್ರಕೃತಿ ವಿಕೋಪ, ಸ್ತ್ರೀಯರ ನೋವು ನಲಿವುಗಳು, ತಾಯಿ ಮಮತೆ, ಶೋಷಣೆ, ನೆಲ ಜಲ, ಭಕ್ತಿ ಮೊದಲಾದ ಅಂಶಗಳನ್ನು ಹೊತ್ತ ಈ ಕವನ ಸಂಕಲನಕ್ಕೆ ತುಮಕೂರಿನ ವಿದ್ಯಾ ವಾಚಸ್ಪತಿ ಡಾ. ಕವಿತಾಕೃಷ್ಣರವರು ಮುನ್ನುಡಿಯನ್ನೂ ಹಾಗೂ ಹಾಸನದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್.ಉಪ್ಪಾರ್ ಅವರು ಬೆನ್ನುಡಿಯನ್ನು ಬರೆದು ಹಾರೈಸಿದ್ದಾರೆ.
ಈ ಕೃತಿಯ ಶೀರ್ಷಿಕೆಯ ಕವನವಾದ *ಬಿಡದ ರಾಗ* ದಲ್ಲಿ ಏಸು ಕಾಡತಾವ ಗೆಳತಿ
ಹಂಸ ಹಕ್ಕಿಗಳು ಈಸುತ
ಬೇಸರವ ಕಳೆಯಲೋಸುಗ
ಒಬ್ಬಾರೆ ಕುಂತರೂ ಬಿಡದೆ .. ಎನ್ನುವಲ್ಲಿ ಜಾನಪದ ಸೊಗಡಿನ ಸಾಹಿತ್ಯ ಹಿತವೆನಿಸುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಕುರಿತಾಗಿ ಬರೆದ *ಕನ್ನಡದ ಕಾಶ್ಮೀರ* ಕವಿತೆಯಲ್ಲಿ ಆ ಭಾಗದ ಪ್ರಕೃತಿಯ ವರ್ಣನೆ, ಕಡಲು, ನದಿಗಳು, ಆಳರಸರು, ಜಾನಪದ ಕಲೆ ಮತ್ತು ಸಂಸ್ಕ್ರತಿ, ಅಲ್ಲಿನ ಕವಿಗಳು, ತೀರ್ಥ ಕ್ಷೇತ್ರಗಳು ಮೊದಲಾದ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ನಿರ್ಭಯಾಳ ಸಾವಿನ ದುರಂತವನ್ನು ನೆನಪಿಸಿಕೊಳ್ಳುವ ಭವಾನಿಗೌಡ ಅವರು ಅತ್ಯಾಚಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಾ
*ನೀರೆಯೆಂದರೆ ನರಿಯಾಗುವ ನರಗೆ*
*ನಾರಿ ಮುನಿದು ಮಾರಿಯಾಗಬೇಕು*
*ಕ್ರೂರತೆಗೆ ನರ ಕತ್ತರಿಪ ಸಬಲೆಯಾಗಿ*
*ನೀರಿಲ್ಲದ ಊರಲ್ಲಿ ತ್ರಾಣರೆನಿಸಬೇಕು*/ ಹೆಣ್ಣೇ ಮೈಯೆಲ್ಲಾ ಕಣ್ಣಾಗು.
ಎನ್ನುತ್ತಾರೆ.
*ಪಾತ್ರಧಾರಿ* ಕವನದಲ್ಲಿ
ಹೆಣ್ಣು ಬರೀ ಪದವಲ್ಲ
ಮನೆಯ ಬೆಳಗೋ ನಂದಾದೀಪ
ಬಣ್ಣ ಭಾವನೆ ತುಂಬಿ ಹೊಳೆಯ ಬಲ್ಲ
ಹೆತ್ತೊಡಲ ತಣಿಪ ರೂಪ
ಎನ್ನುತ್ತಾ ಹೆಣ್ಣಿನ ಮಹತ್ವವನ್ನು ಸುಂದರವಾಗಿ ಬಣ್ಣಿಸಿದ್ದಾರೆ.
*ಎಲ್ಲೆಲ್ಲೂ ಸಂಭ್ರಮ ಕವನದಲ್ಲಿ* ಶ್ರಾವಣ ಮಾಸದ ಚೆಲುವನ್ನೂ, *ಮಿಗಿಲಾದ ಸಂಭ್ರಮ* ದಲ್ಲಿ ಋತುಗಳ ಬದಲಾವಣೆಯೊಂದಿಗೆ ಅನುಭವಿಸಿದ ಮನಸ್ಸಿನ ಸಂಭ್ರಮವನ್ನು ಬಣ್ಣಿಸಿದ್ದಾರೆ.
ಪುರಾಣ ಕಾಲದಿಂದಲೂ ಹೆಣ್ಣು ಶೋಷಣೆಯ ಕೇಂದ್ರ ಬಿಂದುವಾಗಿದ್ದಾಳೆ ಎಂಬುದನ್ನು ಮನಗಂಡ ಭುವಿಯವರು
“ದೃಷ್ಟಿಯಲ್ಲೇಕೆ ಇಷ್ಟೊಂದು ಮೋಹ
ಸೋದರಿಯೆಂಬ ನೋಟ ಬೀರಬಾರದೇಕೆ?
ಭಾವನೆಯಲ್ಲೇಕೆ ಇಷ್ತೊಂದು ದಾಹ
ಹಾಲುಣಿಸಿ ದಾಹ ತೀರಿಸಿದ ಅವ್ವ ಕಾಣಿಸಲಾರಳೇಕೆ?”/ *ಆರ್ತನಾದ*
ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿದ್ದರೂ, ಲೈಂಗಿಕ ಶೋಷಣೆಯನ್ನು ಅನುಭವಿಸುತ್ತಿದ್ದಾರೆಂಬುದನ್ನು ಕೆಲವೇ ಸಾಲುಗಳಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.
ಹೀಗೇ ಕೆಲವು ವಿಷಯಗಳೊಂದಿಗೆ, ಚಿಂತನ ಮಂಥನಗಳಿಂದ ಕೂಡಿದ ಈ ಬಿಡದ ರಾಗ ಕೃತಿಯ ಎಲ್ಲಾ ಕವನಗಳೂ ಸಾಹಿತ್ಯಾಸಕ್ತರನ್ನು ಓದಿಸಿಕೊಂಡು ಹೋಗುತ್ತವೆ. ಕೆಲವೊಂದು ಕವನಗಳಲ್ಲಿ ಪ್ರಾಸ ಗಮನ ಸೆಳೆದರೆ, ಇನ್ನೂ ಕೆಲವು ಕವನಗಳು ಲಯಬದ್ಧವಾಗಿದ್ದು ಗಾಯಕರ ಗಮನ ಸೆಳೆಯುವಂತಿವೆ. ಮುಖ್ಯವಾಗಿ ಸುಲಭವಾಗಿ ಅರ್ಧೈಸಿಕೊಳ್ಳಬಹುದಾದ ಪದ ಬಳಕೆಯೊಂದಿಗೆ ಕವಯಿತ್ರಿ ಈ ಕೃತಿ ರಚನೆ ಮಾಡಿದ್ದಾರೆ.
ಸಾಹಿತ್ಯದ ಆಳಗಲ ಸಾಗರದಂತಿರುವುದರಿಂದ, ಹಿರಿಯ ಕವಿಗಳ ಸಾಹಿತ್ಯದ ಅಧ್ಯಯನದೊಂದಿಗೆ ಇನ್ನಷ್ಟು ಕವಿತೆಗಳನ್ನು ಸೃಜಿಸಬಲ್ಲ ಕವಯಿತ್ರಿಯಾಗಿ, ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಗಳಿಸಲಿ ಎಂದು ಆಶಿಸುತ್ತೇನೆ.
*ಶ್ರೀಮತಿ ವಿನೋದಾ ಕರಣಂ*
*ಸಾಹಿತಿ ಹಾಗೂ ಉಪನ್ಯಾಸಕರು, ಬಳ್ಳಾರಿ*