ಹಮಾಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲು ಮನವಿ

Share and Enjoy !

Shares

ಸಿರುಗುಪ್ಪ.:- ತಾಲೂಕಿನ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಬೇಕು ಮತ್ತು ಕಾರ್ಮಿಕರಿಗೆ ಕೋವಿಡ್ ಪರಿಹಾರವನ್ನು ಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಮತ್ತು ಸಿ.ಐ.ಟಿ.ಯು. ತಾಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಮಂಜುನಾಥಸ್ವಾಮಿಯವರ ಮುಖಾಂತರ ಶಾಸಕ ಎಂ.ಎಸ್.ಸೋಮಲಿಂಗಪ್ಪರಿಗೆ ಮನವಿ ಸಲ್ಲಿಸಿದರು.

ಸಿ.ಐ.ಟಿ.ಯು ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್ ಮಾತನಾಡಿ ನಗರದ 70ಕ್ಕೂ ಹೆಚ್ಚು ರೈಸ್‍ಮಿಲ್‍ಗಳಲ್ಲಿ, ಎ.ಪಿ.ಎಂ.ಸಿ.ಯಲ್ಲಿ, ನಗರದ ರಸ್ತೆಗಳಲ್ಲಿ, ಎಫ್.ಸಿ.ಗೋದಾಮ್‍ನಲ್ಲಿ, ತರಕಾರಿ ಮಾರುಕಟ್ಟೆಯಲ್ಲಿ, ಒಂಟೆತ್ತಿನ ಬಂಡಿಯಲ್ಲಿ ಹಮಾಲಿ ಕೆಲಸ ಮಾಡುವ ಸುಮಾರು 10ಸಾವಿರಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯವರು ಕೈಬಿಟ್ಟಿದ್ದು, ಸರಿಯಾದ ಕ್ರಮವಲ್ಲ, ಇವರು ಕೂಡ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಾಗಿದ್ದಾರೆ. ಆದ್ದರಿಂದ ಇವರಿಗೂ ಕಾರ್ಮಿಕ ಇಲಾಖೆಯಿಂದ ಆಹಾರದ ಕಿಟ್‍ಗಳನ್ನು ವಿತರಿಸಲು ಸರ್ಕಾರದೊಂದಿಗೆ ಶಾಸಕರು ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು.
ಕೋವಿಡ್ ಸಮಯದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಸರ್ಕಾರ ಘೋಷಣೆ ಮಾಡಿದ ರೂ.2 ಸಾವಿರ ಪರಿಹಾರ ತಾಲೂಕಿನ ಹಮಾಲಿ ಕಾರ್ಮಿಕರಿಗೆ ಕೊಡಿಸಲು ಶಾಸಕರು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು, ಅಲ್ಲದೆ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಇ.ಎಸ್.ಐ. ಆಸ್ಪತ್ರೆ ತೆರೆಯಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.ಮುಖಂಡರಾದ ಬಿ.ಎಲ್.ಈರಣ್ಣ, ಹೆಚ್.ತಿಪ್ಪಯ್ಯ, ಹೆಚ್.ಬಿ.ಓಬಳೇಶಪ್ಪ, ಲಕ್ಷ್ಮಣ್ಣ, ಮಲ್ಲಯ್ಯ, ಹುಸೇನ್‍ಸಾಬ್, ನೂರುಲ್ಲಾ, ಆರ್.ಮಲ್ಲಯ್ಯ, ಸುನೀಲ್ ಪಾಸ್ವಾನ್, ಅಸ್ಕರ್ ನೂರುಲ್ಲಾ, ಶಾಮಿದ್‍ಸಾಬ್, ಮಂಜು, ಟಿ.ಈರಣ್ಣ, ಭಾಷ ಇನ್ನಿತರರು ಇದ್ದರು.

Share and Enjoy !

Shares