ಬಳ್ಳಾರಿ:- ಕೊಪ್ಪಳ ಜಿಲ್ಲೆ ಕೆರೆಹಳ್ಳಿಯ ತಿರುಗಲ್ ತಿಮ್ಮಪ್ಪ ಐತಿಹಾಸಿಕ ತಾಣದಲ್ಲಿ ಪತ್ರಕರ್ತರ ಕುಟುಂಬದವರಿಗೆ ದುಷ್ಕರ್ಮಿಗಳು ತೊಂದರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕವು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ವಿ.ಜಗನ್ಮೋಹನರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಮೋಕಾ ಮಲ್ಲಯ್ಯ ಅವರು ಮಾತನಾಡಿ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಅವರು ತಮ್ಮ ಕುಟುಂಬದೊಂದಿಗೆ ನಿನ್ನೆಯ ದಿನ ಕೊಪ್ಪಳ ಜಿಲ್ಲೆ, ತಾಲೂಕಿನ ಕೆರೆಹಳ್ಳಿ ಗ್ರಾಮದ ಬಳಿ ಇರುವ ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ತೇರಿನ ಹನುಮಪ್ಪ ಐತಿಹಾಸಿಕ ಪುಣ್ಯ ಕ್ಷೇತ್ರ ವೀಕ್ಷಣೆ ಹಾಗೂ ದರ್ಶನ ಪಡೆಯಲು ಹೋಗಿದ್ದರು. ಹೋಗಿ ಬರುವ ಸಂದರ್ಭದಲ್ಲಿ ಬಂಗ್ಲೆ ಮಲ್ಲಿಕಾರ್ಜುನ ಅವರ ಕಾರು ಗುಡ್ಡದ ಬಳಿಯಿಂದ ರಸ್ತೆಗೆ ಇಳಿಯದಂತೆ ಯಾರೋ ದುಷ್ಕರ್ಮಿಗಳು ಆಳೆತ್ತರದ ಕಲ್ಲು ಮತ್ತು ಮಣ್ಣಿನ ಗುಡ್ಡೆ ಹಾಕಿ ತೊಂದರೆ ನೀಡಿದ್ದಾರೆ. ಅವರ ಆಪ್ತರಾದ ವೀರಣ್ಣ ಕೋಮಲಾಪುರ ಮತ್ತು ವಸಂತ್ ಶಿಳ್ಳೆಕ್ಯಾತರ್ ಇವರ ಬೈಕ್ ನಲ್ಲಿನ ಪೆಟ್ರೋಲ್ ಸಹಿತ ತೆಗೆದಿದ್ದಾರೆ. ಮೇಲ್ನೋಟಕ್ಕೆ ಇವರ ಮೇಲೆ ಹಲ್ಲೆ ಅಥವಾ ಹತ್ಯೆ ನಡೆಸಲು ಹೊಂಚು ಹಾಕಿರಬಹುದು ಎಂದು ತೋರುತ್ತದೆ. ಅದೃಷ್ಟವಶಾತ್ ಬಂಗ್ಲೆ ಮಲ್ಲಿಕಾರ್ಜುನ ಅವರು ತಮ್ಮ ಕುಟುಂಬದೊಂದಿಗೆ ಭಾರೀ ಅವಘಡದಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಈ ಕುರಿತು ಕೊಪ್ಪಳ ಜಿಲ್ಲೆ, ತಾಲೂಕು ವ್ಯಾಪ್ತಿಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ದೂರು ಆಧರಿಸಿ ಕೂಡಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಬಂಗ್ಲೆ ಮಲ್ಲಿಕಾರ್ಜುನ ಮತ್ತು ಕುಟುಂಬದವರಿಗೆ ಸೂಕ್ತ ರಕ್ಷಣೆ ನಿಡಬೇಕು. ಅವರ ಪರಿಚಯಸ್ಥರಾದ ವೀರಣ್ಣ ಕೋಮಲಾಪುರ ಮತ್ತು ವಸಂತ್ ಸಿಳ್ಳೆಕ್ಯಾತರ್ ಅವರಿಗೂ ರಕ್ಷಣೆ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ನಿವೇದಿಸಿಕೊಳ್ಳುತ್ತಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯ, ತೊಂದರೆ ಕೊಡುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿದಿನ ಭಯ ಮತ್ತು ಆತಂಕಗಳ ನಡುವೆ ಪತ್ರಕರ್ತರು ಜೀವಿಸುವಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ಪತ್ರಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ರಕ್ಷಣೆ ಕೊಡಬೇಕೆಂದು ಕೋರಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈವೇಳೆ ಪತ್ರಕರ್ತರಾದ ಯಾಳ್ಪಿ ವಲಿಬಾಷಾ, ರವಿ ವಿ., ಬಜಾರಪ್ಪ, ಗುರುಶಾಂತ್, ವೀರೇಶ್ ಕರೂರು, ರವೀಂದ್ರ, ಅರ್ಥ್ ಕಿಂಗ್ ಜಗಧೀಶ್, ಎಂ.ಇ.ಜೋಷಿಗಿರಿ, ಸಂಘಟನೆಯ ಮುಖಂಡರಾದ ಅದ್ದಿಗೆರೆ ರಾಮಣ್ಣ, ಲಕ್ಷ್ಮೀ ನಾರಾಯಣ ಯಾದವ್ ಇದ್ದರು.