ಬಳ್ಳಾರಿ :ಶಾಂತಿಯುತ ಗಣೇಶೋತ್ಸವಕ್ಕೆ ಕೈ ಜೋಡಿಸಿ:ಎಎಸ್ಪಿ ಲಾವಣ್ಯ

Share and Enjoy !

Shares
Listen to this article

ವಾರ್ಡ್‍ಗೆ ಒಂದರಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ; ಗಣೇಶ ಹಬ್ಬ ಪೂರ್ವಸಿದ್ಧತಾ ಸಭೆ

 

ಬಳ್ಳಾರಿ:ಕೋವಿಡ್ ಮಾರ್ಗಸೂಚಿ ಅನ್ವಯ ಪ್ರತಿ ವಾರ್ಡ್‍ಗೆ ಒಂದು ಗಣೇಶ ಮೂರ್ತಿ ಮಾತ್ರ ಪ್ರತಿಷ್ಠಾಪನೆ ಮಾಡಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಅವರು ಹೇಳಿದರು.

ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಗರದ ಗಾಂಧಿನಗರ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಸೆಂಟನೆರಿ ಹಾಲ್‍ನಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಂದು ವಾರ್ಡಿಗೆ ಒಂದು ಗಣೇಶ ಮೂರ್ತಿ ಮಾತ್ರ ಪ್ರತಿಷ್ಠಾಪನೆ ಮಾಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು. ಸಾರ್ವಜನಿಕ  ಪ್ರದೇಶಗಳಲ್ಲಿ 4 ಅಡಿ ಮತ್ತು ಮನೆಯಲ್ಲಿ 2 ಅಡಿ ಗಣೇಶ ಮೂರ್ತಿಯನ್ನು ಕೂರಿಸಲು ಅವಕಾಶ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮಾಡಬೇಕು. ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶವಿಲ್ಲ.  ಪ್ರತಿಷ್ಠಾಪನೆಯ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಷೇಧಿಸಲಾಗಿದ್ದು, ಎಲ್ಲಾ ಸಾರ್ವಜನಿಕರು ಸಹಕರಿಸುವ ಮೂಲಕ ಶಾಂತಿಯುತ ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಎಂದು ಹೇಳಿದರು.

ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಐದು ದಿನದೊಳಗೆ ಎಲ್ಲಾ ಕಾರ್ಯವನ್ನು ಪೂರ್ಣಗೊಳಿಸಬೇಕು. ಪಾಲಿಕೆ ನಿಗದಿ ಪಡಿಸಿದ ಸ್ಥಳಗಳಲ್ಲಿ ವಿಸರ್ಜನೆ ಮಾಡಿ, ಕೋವಿಡ್ ಬಗ್ಗೆ ಮಕ್ಕಳಿಗೆ ಯಾವುದೇ ರೀತಿಯ ಅರಿವಿರುವುದಿಲ್ಲ. ಮಕ್ಕಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿ. ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶವಿದ್ದು, ಲಸಿಕೆ ಪಡೆಯದವರಿಗೆ ಲಸಿಕೆ ಹಾಕಿಸುವ ಕಾರ್ಯ ಮಾಡಿ. ಗಣೇಶನ ಮೂರ್ತಿ ಇಡುವ ಸ್ಥಳದಲ್ಲಿ ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಬಳ್ಳಾರಿ ಉಪವಿಭಾಗದ ಡಿವೈಎಸ್ಪಿ ರಮೇಶ್ ಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರೊಬೇಷನರಿ ಡಿವೈಎಸ್ಪಿ ಮಹೇಶ್ ಕುಮಾರ್,  ಟ್ರಾಫಿಕ್ ಇನ್ಸ್‍ಪೆಕ್ಟರ್ ನಾಗರಾಜ, ಗಾಂಧಿನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಎಂ.ಹಾಲೇಶಪ್ಪ, ಮಹಾನಗರ ಪಾಲಿಕೆಯ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು  ಸಾರ್ವಜನಿಕರು ಇದ್ದರು.

 

Share and Enjoy !

Shares