ವಿಜಯನಗರ ವಾಣಿ ಸುದ್ದಿ ಬಳ್ಳಾರಿ
ಬಳ್ಳಾರಿ:ಕೋವಿಡ್ ಲಾಕ್‍ಡೌನ್‍ನಿಂದ ಸ್ಥಗಿತವಾಗಿದ್ದ ಶಾಲೆಗಳು ಮತ್ತೇ ಆರಂಭವಾಗಿದ್ದು,ಮಕ್ಕಳು ಸಂತಸದಿಂದ ಶಾಲೆಗೆ ಆಗಮಿಸಿದ್ದಾರೆ. ಈ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂಬುದರ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ.ಡಿ.ಪವಿತ್ರಾ ಅವರು ಜಿಲ್ಲೆಯ ವಿವಿಧೆಡೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದ ಬಾಲಕೀಯರ ಪ್ರೌಢಶಾಲೆ, ವಾಡ್ರ್ಲಾ ಪದವಿ ಪೂರ್ವ ಕಾಲೇಜು, ಸಿರಿವಾರ ಸರಕಾರಿ ಪ್ರೌಢ ಶಾಲೆ, ಸಂಗನಕಲ್ಲು ಬಸವೇಶ್ವರ ಪ್ರೌಢಶಾಲೆಗಳಿಗೆ ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಕ್ಕಳ ಸುರಕ್ಷತೆಗೆ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಯಾವ ರೀತಿ ಪಾಲನೆ ಮಾಡಲಾಗುತ್ತಿದೆ ಎಂಬುದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಹಾಗೂ ಶಾಲೆಯ ಮುಖ್ಯಗುರುಗಳಿಂದ ಕೇಳಿ ತಿಳಿದುಕೊಂಡರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರೆಹಮತ್ ಉಲ್ಲಾ ಅವರು ಮಕ್ಕಳ ಸುರಕ್ಷತೆಗೆ ಸರಕಾರದ ಮಾರ್ಗಸೂಚಿ ಅನ್ವಯ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳೊಂದಿಗೆ ಅವರು ಸಂವಾದ ನಡೆಸಿದರು.