ಕೇಂದ್ರ ಕಾರಾಗೃಹದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಜಾಗೃತಿ ಶಿಬಿರ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನಹರಿಸಿ:ನ್ಯಾ.ಪುಷ್ಪಾಂಜಲಿ ದೇವಿ

Share and Enjoy !

Shares
Listen to this article

 

ಬಳ್ಳಾರಿ: ಆರೋಗ್ಯವೇ ಮಹಾಭಾಗ್ಯ. ಎಲ್ಲರೂ ತಮ್ಮ ಆರೋಗ್ಯದ ಕಡೆ ವಿಶೇಷ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಹೆಚ್. ಪುಷ್ಪಾಂಜಲಿ ದೇವಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರಾಗೃಹ ಮತ್ತು ಬಂಧಿಖಾನೆ ಇಲಾಖೆ, ಗಾಂಧಿನಗರ ನಗರ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ನಗರದ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ಬಂಧಿಗಳ ಆರೋಗ್ಯ ತಪಾಸಣೆ ಮತ್ತು ಜಾಗೃತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದ ಯಾವುದೋ ಆಕಸ್ಮಿಕ ಘಟನೆಯಿಂದ ಸೆರೆವಾಸ ಅನುಭವಿಸುತ್ತಿದ್ದೀರಿ ಎಂದು ಹೇಳಿದ ಅವರು ಇಂತಹ ವ್ಯಕ್ತಿಗಳಿಗೂ ಸಹ ಆರೋಗ್ಯದ ಸೇವೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದರು.
ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಆರೋಗ್ಯ ಇಲಾಖೆಯ ಎಲ್ಲ ವೈದ್ಯರು, ಸಿಬ್ಬಂದಿ ವರ್ಗ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇವತ್ತಿನ ಈ ತಪಾಸಣಾ ಶಿಬಿರದಲ್ಲಿ ಎಲ್ಲರೂ ತಪ್ಪದೇ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಕಡೆ ಗಮನಹರಿಸಿ ಎಂದು ಕೈದಿಗಳಿಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಮಾತನಾಡಿ ಕತ್ತಲೆಯಿಂದ ಬೆಳಕಿನಡೆ ಸಾಗಬೇಕಾದ ನಾವು ಜೀವನದಲ್ಲಿ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಸನ್ನಡತೆಯಿಂದ ಬದುಕಬೇಕು. ನಿಮಗಿರುವ ಯಾವುದೇ ಆರೋಗ್ಯ ತೊಂದರೆಗಳನ್ನು ಶಿಬಿರದಲ್ಲಿ ವೈದ್ಯರಿಗೆ ತಿಳಿಸಿ ಅಗತ್ಯ ಚಿಕಿತ್ಸೆ ಪಡೆಯಿರಿ. ಕೋವಿಡ್ ಲಕ್ಷಣ ಇರುವವರು ಗಂಟಲು ದ್ರವ ಪರೀಕ್ಷೆ ಮಾಡಿಸಿ ಮತ್ತು ಎಲ್ಲರೂ ಕೋವಿಡ್ ಲಸಿಕೆ ಪಡೆಯಿರಿ ಎಂದು ವಿನಂತಿಸಿದರು.
ಕಾರಾಗೃಹ ಅಧೀಕ್ಷಕರಾದ ಡಾ.ಮಲ್ಲಿಕಾರ್ಜುನ ಬಿ.ಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರಾಗೃಹ ಪರಿವರ್ತನಾ ಮಂದಿರ, ಪರಿವರ್ತನೆಯಿಂದ ಮಾನವನಾಗು, ನಿಮ್ಮ ಜೀವನದ ಹಿಂದಿನ ಘಟನೆಗಳನ್ನು ಮರೆತು ಸಧೃಡವಾಗಿರಲು ಎಲ್ಲರೂ ತಪ್ಪದೇ ಆರೋಗ್ಯ ಪರೀಕ್ಷಿಸಿಕೊಳ್ಳಿ ಎಂದರು.
ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ, ಡಾ.ದೇವೆಂದ್ರ ಆಚಾರ್ಯ, ಡಾ. ಎಸ್.ಕೆ.ಗುಪ್ತಾ, ಡಾ.ಜುಬೇದ್ ಅಹ್ಮದ್, ಡಾ.ಅವಿನಾಶ್, ಡಾ.ಸುಧಾರಾಣಿ, ದಂತ ತಜ್ಞರಾದ ಡಾ.ಪ್ರಿಯಾಂಕ, ಡಾ.ಚಿತ್ರಾ, ಎಫ್‍ಫಿಎಐನ ವ್ಯವಸ್ಥಾಪಕರಾದ ವಿಜಯಲಕ್ಷ್ಮಿ, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡ್ಯಾಪ್ಕೊ ಮೇಲ್ವಿಚಾರಕ ಗೀರಿಶ್, ಹಿರಿಯ ಔಷಧಾಧಿಕಾರಿ ಬೈಲಪ್ಪ ಸೇರಿದಂತೆ ಇತರ ಸಿಬ್ಬಂದಿ ಇದ್ದರು.
ಶಿಬಿರದಲ್ಲಿ ಒಟ್ಟು 559 ಪುರುಷ ಖೈದಿಗಳು, 20 ಮಹಿಳಾ ಖೈದಿಗಳಿಗೆ ತಪಾಸಣೆ ಮಾಡಲಾಯಿತು. ಮಹಿಳಾ ಖೈದಿಗಳಿಗೆ ಸ್ತನಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಸೇರಿದಂತೆ ಶಿಬಿರದಲ್ಲಿ ರಕ್ತದೊತ್ತಡ, ಹೆಚ್.ಐ.ವಿ, HBsAg ಟೆಸ್ಟ್, ದಂತ ಪರೀಕ್ಷೆ, ಕೋವಿಡ್ ಸ್ವಾಬ್ ಡ್ರಾಪ್ಟ್, ನೇತ್ರ ಹಾಗೂ ಕ್ಷಯರೋಗದ ಪರೀಕ್ಷೆ ಸೇರಿದಂತೆ ಸಾಮಾನ್ಯ ರೋಗಿಗಳಿಗೆ ಸ್ಥಳದಲ್ಲಿಯೇ ಅಗತ್ಯ ಔಷಧಿ ವಿತರಿಸಲಾಯಿತು ಮತ್ತು ವಿವಿಧ ಆರೋಗ್ಯ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

Share and Enjoy !

Shares