ಬಳ್ಳಾರಿ ಜಿಲ್ಲೆ
ಸಿರುಗುಪ್ಪ: ಕನ್ನಡದ ಅಸ್ಮಿತೆ ಉಳಿಯಬೇಕಾದರೆ ಪ್ರತಿಯೊಬ್ಬರು ಕನ್ನಡದಲ್ಲಿಯೇ ವ್ಯವಹರಿಸಬೇಕು, ವ್ಯವಹಾರಿಕ ಮತ್ತು ಆಡಳಿತಾತ್ಮಕವಾಗಿ ಸರ್ಕಾರ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಆಗ ಮಾತ್ರ ಕನ್ನಡ ಮತ್ತಷ್ಟು ಕಂಪು ಸೂಸಲು ಅನುಕೂಲವಾಗುತ್ತದೆ ಎಂದು ರಂಗ ಭೂಮಿ ಕಲಾವಿದ ಬೀರಳ್ಳಿ ರಾಮರೆಡ್ಡಿ ತಿಳಿಸಿದರು.
ನಗರದ ಗುರುಭವನದಲ್ಲಿ ಸಿರುಗುಪ್ಪದ ಸ್ವರಾಂಲಕಾರ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ ರಿ., ವತಿಯಿಂದ ಭಾನುವಾರ ಕ.ಸಾ.ಪ. ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಮತ್ತು ತಾ.ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿಗೆ ಸನ್ಮಾನ ಸಮಾರಂಭ ಮತ್ತು ಹಿರಿಯ ರಂಗ ಕಲಾವಿದ ಎಂ.ಬಸಪ್ಪರಿಗೆ ಸನ್ಮಾನ, ರಂಗ ಗೀತೆಗಳ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯ, ಸಂಗೀತ, ರಂಗಭೂಮಿ, ಬಯಲಾಟ ಮುಂತಾದ ಕಲೆಗಳು ನಮ್ಮ ನಾಡಿನ ಸಾಂಸ್ಕೃತಿಕ ಮೌಲ್ಯವುಳ್ಳ ಕಲೆಗಳಾಗಿದ್ದು, ಇವುಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕನ್ನಡ ಉಳಿದರೆ ಮಾತ್ರ ನಾವು ನೀವು ಎಲ್ಲರೂ ಉಳಿಯಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಪ್ರೀತಿಸಬೇಕೆಂದು ಕರೆ ನೀಡಿದರು.
ಬಸವಭೂಷಣ ಸ್ವಾಮೀಜಿ, ಸ್ವರಾಲಂಕಾರ ಸಾಂಸ್ಕೃತಿಕ ಬಯಲಾಟ ಕಲಾಟ್ರಸ್ಟ್ ರಿ., ತಾ.ಅಧ್ಯಕ್ಷ ಜಿ.ವೀರನಗೌಡ, ಕೃಷಿ ವಿಜ್ಞಾನಿ ಡಾ.ಎಂ.ಎ.ಬಸವಣ್ಣೆಪ್ಪ, ಕ.ಸಾ.ಪ. ಜಿಲ್ಲಾಧ್ಯಕ್ಷ ಸಿದ್ದರಾಮಕಲ್ಮಠ, ತಾ.ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ, ಪ್ರಾ.ಶಾ.ಶಿ.ಸಂಘದ ತಾ.ಅಧ್ಯಕ್ಷ ಶ್ರೀಧರ, ನಿವೃತ್ತ ಉಪನ್ಯಾಸಕ ಶಿವಕುಮಾರ ಬಳಿಗರ್, ಚೇತನ್‌ಕುಮಾರ್, ರಂಗ ಕಲಾವಿದ ಎಂ.ಬಸಪ್ಪ, ಶಾಂತಮೂರ್ತಿ ಗವಾಯಿ, ಮಲ್ಕಪುರ ಮಹಾದೇವಸ್ವಾಮಿ, ದಳವಾಯಿ ಅಂಬಣ್ಣ ಮುಖಂಡರಾದ ಮಲ್ಲಿಕಾರ್ಜುನಗೌಡ, ಕೆ.ಜಿ.ನರಸಿಂಹುಲು ಇನ್ನಿತರರು ಇದ್ದರು.