ಬಳ್ಳಾರಿ,: ಹೊಸಪೇಟೆಯಿಂದ ಹಂಪಿಗೆ ಹೋಗುವ ದಾರಿಯ ಇಕ್ಕೆಲಗಳಲ್ಲಿ ಬಾಳೆ ತೋಟಗಳದೇ ಸಾಮ್ರಾಜ್ಯ. ತುಂಗಭದ್ರಾ ನದಿಗೆ ಅಣೆಕಟ್ಟು ನಿರ್ಮಾಣವಾದಾಗಿನಿಂದ ಸುಗಂಧಿ ಮತ್ತು ಸಕ್ಕರೆ ಬಾಳೆ ತಳಿಗಳ ಕೃಷಿ ಅವ್ಯಾಹತವಾಗಿ ನಡೆಯುತ್ತಿದೆ.
ಸೊರಗು ರೋಗ ನಿರೋಧಕ ಸುಗಂಧಿ ಬಾಳೆಯ ನೂರಾರು ತೋಟಗಳು ಇಲ್ಲಿವೆ. ದೊಡ್ಡ ಗಾತ್ರದ ಗೊನೆಗಳ, ಕೊಂಚ ಹುಳಿ ರುಚಿಯ ಸುಗಂಧಿ ಮಾರುಕಟ್ಟೆ ಬೆಲೆ ಮಾತ್ರ ಸದಾ ಇಳಿಮುಖ. ಕೆಜಿಗೆ 10 ರೂಪಾಯಿ ಸಿಕ್ಕರೆ ಹೆಚ್ಚು ಎಂಬ ಪರಿಸ್ಥಿತಿ. ಲಾಕ್‍ಡೌನ್ ಸಂದರ್ಭದಲ್ಲಂತೂ ಸುಗಂಧಿ ಬೆಳೆಗಾರನ ಗೋಳು ಹೇಳ ತೀರದಾಗಿತ್ತು.
ಇದನ್ನು ಗಮನದಲ್ಲಿಟ್ಟುಕೊಂಡು ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆಯ ಸಹಾಯಕ ಸಂಸ್ಥೆ ಸ್ಮೆಕ್, ಬಳ್ಳಾರಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಬಾಳೆ ಬೆಳೆಗಾರರಿಗೆ ಮತ್ತು ಮಹಿಳಾ ಸಂಘದ ಸದಸ್ಯರಿಗೆ ಪರಿಚಯಿಸಲು ಹಂಪಿ ಬಳಿಯ ಕೃೃೃೃಷ್ಣ ಪುರ ಗ್ರಾಮದ ಕೃಷಿಕ ಫಣಿಶಾಹಿಯವರ ಬಾಳೆ ತೋಟದಲ್ಲಿ ತರಬೇತಿ ಕಾರ್ಯಕ್ರಮ ಏರ್ಪಡಿಸಿತ್ತು.
ಕೃಷಿ ವಿಜ್ಞಾನ ಕೇಂದ್ರದ ಆಹಾರ ತಜ್ಞೆ ಡಾ.ಶಿಲ್ಪಾ ಹೆಚ್. ಅವರು ಬಾಳೆ ಕಾಯಿ ಹುಡಿ (ಬಾಕಾಹು) ಮಾಡುವ ಹಂತಗಳನ್ನು ಪ್ರಾತ್ಯಕ್ಷತೆ ಮೂಲಕ ತೋರಿಸಿಕೊಟ್ಟರು. ಹೊಸಪೇಟೆ, ಕಂಪ್ಲಿ ಭಾಗಗಳ ಆಸಕ್ತ ರೈತರು ಹಾಗೂ ಕೃμÁ್ಣಪುರ, ಆನೆಗುಂದಿ ಮತ್ತು ಬುಕ್ಕಸಾಗರದ ಮಹಿಳಾ ಸಂಘಗಳು ಬಾಕಾಹು ಮಾಡುವ ಬಗೆಯನ್ನು ಕಲಿತರು. ಅಲ್ಲದೆ ಬಾಕಾಹು ಬಳಸಿ ತಯಾರಿಸಿದ ಖಾಕ್ರ, ಸೇವ್, ಖಾರ, ಗವ್ವುಲಿನ ಹೊಸರುಚಿ ಸವಿದರು.
ಇದೇ ಸಮಯದಲ್ಲಿ ಪಡ್ರೆಯವರು ಬರೆದಿರುವ ‘ಬಾಳೆಕಾಯಿ ಸೋತಾಗ ಊರುಗೋಲಾದ ಬಾಕಾಹು’ ಪುಸ್ತಕವನ್ನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ರಮೇಶ್ ಬಿ.ಕೆ ಬಿಡುಗಡೆ ಮಾಡಿದರು. ಮೊದಲ ಪ್ರತಿಯನ್ನು ಬಾಕಾಹುವನ್ನು ಮಾಡಿಗೆದ್ದ ಹೊಸೇಟೆಯ ಬಾಳೆ ಕೃಷಿಕ ಕಾಳಿದಾಸರಿಗೆ ನೀಡಲಾಯಿತು. ಪುಸ್ತಕದ ಪರಿಚಯವನ್ನು ಮಲ್ಲಿಕಾರ್ಜುನ ಹೊಸಪಾಳ್ಯ ಮಾಡಿದರು.
ಬಾಕಾಹು ತರಬೇತಿಯ ಮುಂದಿನ ಹೆಜ್ಜೆಯಾಗಿ ಕೃμÁ್ಣಪುರ ಮತ್ತು ಬುಕ್ಕಸಾಗರದ ಮಹಿಳಾ ಸಂಘದ ಸದಸ್ಯರು 100 ಕೆಜಿ ಬಾಕಾಹು ಮಾಡಲು ಮುಂದಾಗಿದ್ದಾರೆ. ತರಬೇತಿಯಲ್ಲಿ ಹಾಜರಿದ್ದ ಹಂಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ 25 ಗೊನೆ ಸುಗಂಧಿ ಬಾಳೆಯನ್ನು ಮಹಿಳಾ ಗುಂಪಿಗೆ ಕೊಡುಗೆಯಾಗಿ ನೀಡಲು ಮುಂದೆ ಬಂದರು. ಬಾಕಾಹು ತಯಾರಿಕೆಗೆ ಅಗತ್ಯವಾದ ಡ್ರೈಯರ್ ಅಳವಡಿಸಲು ಫಣಿಶಾಹಿ ಒಪ್ಪಿದರು.
ಬಾಕಾ ಉಪ್ಪಿಟ್ಟು ತಯಾರಿಸಿ, ಬಾಯಿ ಚಪ್ಪರಿಸಿದ ರೈತರು ಮತ್ತು ಮಹಿಳೆಯರು ಮನೆಯಲ್ಲೂ ನಿರಂತರ ಬಳಸುವ ಪ್ರತಿಜ್ಞೆ ಮಾಡಿದರು. ವಿಜಯನಗರ-ಬಳ್ಳಾರಿ ಜಿಲ್ಲೆಗಳ ಮೊದಲ ಬಾಕಾಹು ತರಬೇತಿ ಇದಾಗಿದೆ. ತರಬೇತಿಯಲ್ಲಿ ಡಾ.ರವಿ ಎಸ್., ಜಿ.ಕೃಷ್ಣಪ್ರಸಾದ್, ಬಾಲಕೃಷ್ಣರಾಜ್, ಮಂಜುಳಾ, ಚಂದ್ರವರ್ಮರಾಜ ಮತ್ತು ಇತರರು ಉಪಸ್ಥಿತರಿದ್ದರು.