ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬೆನ್ನು ನೋವಿನ ಕಾರಣಕ್ಕಾಗಿ ಚಿಕಿತ್ಸೆಗೆ ಬಂದ ಮಹಿಳೆಗೆ ಸರಿಯಾಗಿ ಚಿಕಿತ್ಸೆ ನೀಡದೆ ಇಂಜೆಕ್ಷನ್ ನೀಡಿದ ಕಾರಣ ಸಾವನ್ನಪ್ಪಿದ್ದಾರೆಂದು ಕುಟುಂಬದವರು ಶವವನ್ನು ಆಸ್ಪತ್ರೆ ಮುಂದಿಟ್ಟು ಸಿಬ್ಬಂದಿ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಪಟ್ಟಣದ ಕುರುದಗಡ್ಡಿ ಏರಿಯಾದ ನಿವಾಸಿ ಶಾಂತಮ್ಮ ಎಂಬ ಮಹಿಳೆಗೆ ಬೆನ್ನುನೋವು ಎಂದು ಅವರ ಪತಿ ಬೆಳಗ್ಗೆ 11ಘಂಟೆ ಸುಮಾರಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದರು. ಸಿಬ್ಬಂದಿಯು ಚಿಕಿತ್ಸೆ ನೀಡಿ ರಕ್ತ ಪರೀಕ್ಷೆ ಮಾಡಿಸುವಂತೆ ತಿಳಿಸಿ ಇಂಜೆಕ್ಷನ್ ನೀಡಿದರು. ನಂತರ 5ರಿಂದ10 ನಿಮಿಷದಲ್ಲಿ ಮಹಿಳೆ ತನ್ನ ನಾಲಿಗೆಯನ್ನು ಕಡಿದುಕೊಂಡು ಆರೋಗ್ಯದಲ್ಲಿ ಏರುಪೇರಾಗಿರುವುದಾಗಿ ಮೃತ ಮಹಿಳೆಯ ಮಗ ಶ್ರೀಕಾಂತ ಪತ್ರಿಕೆಗೆ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಇಂತಹ ಘಟನೆ ಜರುಗಿದೆ ಎಂದು ಮೃತ ಮಹಿಳೆಯ ಕುಟುಂಬದವರು ವೈದ್ಯರ ಹಾಗೂ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.