ಸಿರುಗುಪ್ಪ:- ತಾಲೂಕಿನಲ್ಲಿ ಮಟ್ಕಾ ಹಾವಳಿ ಹೆಚ್ಚಾಗಿದ್ದು, ಬಡವರು ಮಧ್ಯಮವರ್ಗದವರು ಮಟ್ಕಾ ಜೂಜಾಟಕ್ಕೆ ಹಣ ಸುರಿದು ಹಾಳಾಗುತ್ತಿದ್ದಾರೆ. ಮಟ್ಕಾ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮಾಜಿ ತಾ.ಪಂ.ಸದಸ್ಯ ಬಿ.ರಾಮನಾಯಕ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮಟ್ಕಾ ಬರೆಯುವವರ ಸಂಖ್ಯೆ ಹೆಚ್ಚಾಗಿದ್ದು, ಬಡ ಮತ್ತು ಮಧ್ಯಮ ವರ್ಗದವರು ಮಟ್ಕಾ ಜೂಜಾಟವಾಡಿ ದಿವಾಳಿಯಾಗುತ್ತಿದ್ದಾರೆ. ಮಟ್ಕಾದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಲಾಭವಿಲ್ಲದಿದ್ದರೂ ಕೆಲವರು ತಮ್ಮ ಪತ್ನಿಯರ ತಾಳಿ ಮಾರಿ ಮಟ್ಕಾ ಆಡಿದ ಪ್ರಸಂಗಗಳು ನಡೆಯುತ್ತಿವೆ, ಇದರಿಂದಾಗಿ ಬಡವರು, ಕೂಲಿ ಕಾರ್ಮಿಕರು, ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಟ್ಕಾ ಜೂಜಾಟ ಕಾನೂನು ಬಾಹಿರವಾಗಿದ್ದರೂ ಕೆಲವು ಮಟ್ಟಾ ಬುಕ್ಕಿಗಳು ಪ್ರಭಾವಿ ರಾಜಕಾರಣಿಗಳ ಪ್ರಭಾವದಿಂದ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಆದರೆ ಇದನ್ನು ತಡೆಯಲು ಸ್ಥಳಿಯ ಪೊಲೀಸರು ಮುಂದಾಗದಿರುವುದು ಸರಿಯಾದ ಕ್ರಮವಲ್ಲ.
ಮಟ್ಕಾ ಹಾವಳಿಯ ದಾಸರಾಗಿರುವ ಸಾರ್ವಜನಿಕರು ಸಾವಿರಾರು ಹಣ ಸುರಿದು ಮಟ್ಕಾ ಆಡುತ್ತಿರುವುದರಿಂದ ಸಾರ್ವಜನಿಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ, ಆದ್ದರಿಂದ ಮಟ್ಕಾ ಬರೆಯುವವರ ಮತ್ತು ಪಟ್ಟಿ ತೆಗೆದುಕೊಳ್ಳುವವರ ಮೇಲೆ ದಾಳಿ ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಅಲ್ಲದೆ ತಾಲೂಕಿನಲ್ಲಿ ಮಟ್ಕಾ ಹಾವಳಿ ತಡೆಯುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದೆಂದು ಹೇಳಿದರು.