ಕೊಪ್ಪಳ ಜಿಲ್ಲೆ
ಕಾರಟಗಿ : ರೈತರ ಬೆಳೆ ಪರಿಹಾರ ತ್ವರಿತ ರೀತಿಯಲ್ಲಿ ಹಣ ಜಮಾ ಮಾಡುವಂತೆ ಹಾಗೂ ಭೂ ಕಾಯ್ದೆ ಎಪಿಎಂಸಿ ಕಾಯ್ದೆಯನ್ನು ಅಧಿಕೃತವಾಗಿ ಹಿಂಪಡೆದು ಯಥಾಸ್ಥಿತಿ ಸ್ಥಿತಿ ಹಿಂದೆ ಇದ್ದ ನಿಯಮಗಳು ಜಾರಿಯಾಗುವಂತೆ ಆದೇಶಿಸಬೇಕೆಂದು ಕರ್ನಾಟಕ ರೈತ ಸಂಘದಿಂದ ನ.26ರಂದು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಂತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬೆಳೆಯು ಸಂಪೂರ್ಣವಾಗಿ ಹಾನಿಯಾಗಿದೆ, ಅವರಿಗೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಹಾನಿಗೆ ತ್ವರಿತಗತಿಯಲ್ಲಿ ಪರಿಹಾರವನ್ನು ನೀಡಬೇಕು. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷೆಯನ್ನು ಕೂಡಲೇ ಮುಗಿಸಿ, ಸೂಕ್ತ ಪರಿಹಾರದ ಹಣವು ಜಮಾವಾಗಲೇ ಬೇಕು ಎಂದರು.
ನಂತರ ತಾಲೂಕ ವಲಯ ಕೇಂದ್ರ ಅಧ್ಯಕ್ಷ ನಾರಾಯಣ ಈಡಿಗೇರ ಮಾತನಾಡಿ ಈ ನಮ್ಮ ಕರ್ನಾಟಕ ರೈತ ಸಂಘದ ಹೋರಾಟವು ರೈತರ ಪರವಾಗಿದ್ದು ರೈತರ ಬೆಳೆಹಾನಿಗೆ ಕೂಡಲೇ ತ್ವರಿತಗತಿಯಲ್ಲಿ ಸರ್ಕಾರ ಪರಿಹಾರವನ್ನು ನೀಡಬೇಕು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಭೂ ಕಾಯಿದೆ ಹಾಗೂ ಎಪಿಎಂಸಿ ಕಾಯ್ದೆಗಳನ್ನು ಹಿಂಪಡೆದದ್ದು ಸಂತಸದಾಯಕ ವಿಚಾರವಾಗಿದೆ. ಈ ಕಾಯ್ದೆಯನ್ನು ಹಿಂಪಡೆದಿದ್ದರೂ ಅಧಿಕೃತವಾಗಿ ಆದೇಶ ಹೊರಡಿಸಿಲ್ಲ ಆದ್ದರಿಂದ ಕೂಡಲೇ ಆದೇಶ ಹೊರಡಿಸಿ ಹಿಂದೆ ಇದ್ದ ನಿಯಮಗಳು ಯಥಾವತ್ತಾಗಿ ಮುಂದುವರೆಯಲಿದೆ ಎಂದು ಘೋಷಣೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಪದಾಧಿಕಾರಿಗಳಾದ ರಮೇಶ ಭಂಗಿ, ರವಿಕುಮಾರ್, ತಿಪ್ಪಣ್ಣ, ನಾರಾಯಣ, ಅಂಬಣ್ಣ, ಹುಸೇನ್ ಸಾಬ್, ಬುಡ್ಡಪ್ಪ, ವಿರುಪಣ್ಣ, ಹಿರೇಹುಚ್ಚಪ್ಪ, ಪಕೀರಪ್ಪ, ವೀರೇಶ, ಪರಸಪ್ಪ, ಶರಣಪ್ಪ, ಪರಶುರಾಮ, ಸುರೇಶ, ಯಂಕೋಬ, ಹನುಮಂತಪ್ಪ, ವಿರುಪಣ್ಣ ಇದ್ದರು.