ವಿಜಯನಗರವಾಣಿ ಸುದ್ದಿ
ಕುರುಗೋಡು:ದೇಶದಲ್ಲಿ ಪೌರಕಾರ್ಮಿಕರು ಅತ್ಯಂತ ನೋವಿನ ಹಾಗೂ ಕಷ್ಟದ ಜೀವನ ನೆಡಸುತ್ತಿದ್ದು ಸರ್ಕಾರದಿಂದ ಸಿಗುವ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ . ಇದರಿಂದಾಗಿ ಪೌರಕಾರ್ಮಿಕರ ಬದುಕು ಅತಂತ್ರವಾಗಿದ್ದು ,ವಿದ್ಯಾಭ್ಯಾಸ, ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.ಇದು ವಿಷಾಧನೀಯ ಎಂದು ರಾಜ್ಯ ಪೌರಕಾರ್ಮಿಕರ ಜಿಲ್ಲಾ ಸಂಯೋಜಕ ಕಂದುಕೂರು ರಾಮುಡು ತಿಳಿಸಿದರು.
ಅವರು ಕುರುಗೋಡಿನ ವಾಲ್ಮೀಕಿ ಭವನದಲ್ಲಿ ಪುರಸಭೆ ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಮಾನವ ಮಲ ಹೋರುವ ನೇಮಕಾತಿ, ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013 ಪ್ರಕಾರ ನೊಂದಾಯಿಸುವ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮಲ ಹೋರುವ ಕಾರ್ಮಿಕರನ್ನು ಗುರುತಿಸಿ ಪುನರ್ ವಸತಿ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದ್ದು. ಮಲ ಹೋರುವ ಪದ್ದತಿ ಮಾಡಿಸುವ ಸಾರ್ವಜನಿಕಕರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರಿಗೆ ವಸತಿ ಸ್ಥಳ ನೀಡಿ ಜೊತಗೆ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ 5.5 ಲಕ್ಷರೂಗಳು ಮತ್ತು ಕೇಂದ್ರ ಸರಕಾರದಿಂದ 1.5 ಲಕ್ಷ.ರೂಗಳು ನೀಡುತ್ತಾರೆ. ಮಹಿಳೆಯರಿಗೆ ದ್ವಿಚಕ್ರ ವಾಹನಕ್ಕೆ ಶೇ.70% ಸಬ್ಸಿಡಿ ನೀಡುತ್ತಾರೆ. ಮಕ್ಕಳ ಶಿಕ್ಷಣಕ್ಕೆ ಅನುದಾನ ನೀಡುತ್ತಾರೆ. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರತಿಯೊಬ್ಬ ಪೌರಕಾರ್ಮಿಕರು ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ನಂತರ ಕುರುಗೋಡು ಪುರಸಭೆಯ ಪೌರಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪರುಶರಾಮ, ಪರಿಸರ ಅಧಿಕಾರಿ ಪ್ರಹ್ಲಾದ್‍ರೆಡ್ಡಿ, ಪುರಸಭೆ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಇದ್ದರು.