ಸಾವಿತ್ರಿಬಾಯಿ ಪುಲೆ ಎಂಬ ಅಕ್ಷರದವ್ವ..

Share and Enjoy !

Shares

ಸಾವಿತ್ರಿಬಾಯಿ ಪುಲೆ ಎಂಬ ಅಕ್ಷರದವ್ವ..

 

ಕೇವಲ ಮೇಲ್ವರ್ಗದವರಿಗೆ   ಮೀಸಲಾಗಿದ್ದ ಶಿಕ್ಷಣವನ್ನು ಶೋಷಿತ ಸಮುದಾಯಗಳಿಗೆ ಮುಟ್ಟಿಸುವ ಮೂಲಕ ಹೊಸ ಯುಗಕ್ಕೆ ನಾಂದಿ ಹಾಡಿದಂತಹ ಮಹಾನ್ ಚೇತನ ಸಾವಿತ್ರಿಬಾಯಿ ಪುಲೆ ಜನ್ಮದಿನದ ಸಂಭ್ರಮವಿಂದು.

ಜನವರಿ 3, 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ‘ನೈಗಾಂನ್’ನಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ ಅವರ ತಂದೆ ನವಸೆ ಪಾಟೀಲ್‌, ತಾಯಿ ಲಕ್ಷ್ಮೀಬಾಯಿ. ಅಂದಿನ ಕಾಲದ ಪದ್ಧತಿಯಂತೆ ಜ್ಯೋತಿಬಾ ಫುಲೆ ಅವರೊಂದಿಗೆ ಸಾವಿತ್ರಿಬಾಯಿ ಅವರ ಬಾಲ್ಯ ವಿವಾಹ ನಡೆಯಿತು.  ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ 8 ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ 13 ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು.

ಪತಿ ಜ್ಯೋತಿಬಾ ಪುಲೆ ಅವರ ಸಹಾಯದಿಂದಾಗಿ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಪೂರೈಸಿದ ಸಾವಿತ್ರಿಬಾಯಿ ನಂತರ ಸ್ಕಾಟಿಷ್ ಮಿಷನರಿ ಶಾಲೆಯಲ್ಲಿ ಏಳನೇ ತರಗತಿವರೆಗೆ ಅಧ್ಯಯನ ಕೈಗೊಂಡರು. ಇದಾದ ನಂತರ ಹೆಚ್ಚಿನ ಶಿಕ್ಷಣವನ್ನು ಅವರು ಜ್ಯೋತಿಬಾ ಅವರ ಸ್ನೇಹಿತರಾದ ಸಖರಂ ಯಶ್ವಂತ್ ಪರಂಜಪೆ ಮತ್ತು ಕೇಶವ್ ಶಿವರಾಮ್ ಭಾವಲ್ಕರ್ ಅವರ ಹತ್ತಿರ ಪಡೆದರು. ಇದೇ ವೇಳೆ ಸಾವಿತ್ರಿಬಾಯಿ ಎರಡು ಬೋಧನಾ ಕೋರ್ಸ್ಗಳನ್ನು ಸಹ ಪೂರ್ಣಗೊಳಿಸಿದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಸಾವಿತ್ರಿಬಾಯಿ ಪುಣೆಯಲ್ಲಿ ಜ್ಯೋತಿಬಾ ಅವರ ಮಾರ್ಗದರ್ಶಕ ಸಗುನಾಬಾಯ್ ಅವರೊಂದಿಗೆ ಮಕ್ಕಳಿಗೆ ಕಲಿಸಲು ಪ್ರಾರಂಭಿಸಿದರು. ನಂತರ ಈ ಮೂವರು ಭೀಡೆ ವಾಡಾದಲ್ಲಿ ಶಾಲೆಯನ್ನು ಪ್ರಾರಂಭಿಸಿದರು, ಫುಲೆ ದಂಪತಿಗಳ ಕಾರ್ಯಕ್ಕೆ ಯಾವಾಗಲೂ ಬೆಂಬಲಿಸುತ್ತಿದ್ದ ತಾತ್ಯಾ ಸಾಹೇಬ್ ಬಿಡೆ ಅವರ ಮನೆಯಲ್ಲಿ ಶಿಕ್ಷಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.

1847ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕರ ತರಬೇತಿ ಪಡೆದರು. ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಹಿಂದೂ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ. ಅವರು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನೂ ತೂರುತ್ತಿದ್ದರು. ಇದರಿಂ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು.

ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ- ನಮ್ಮ ಮೇಲೆ ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು.

 

1851 ರ ಹೊತ್ತಿಗೆ ಬಾಲಕಿಯರಿಗೆ ಪುಲೆ ದಂಪತಿಗಳು ಮೂರು ಶಾಲೆಗಳನ್ನು ತೆರೆದರು. ಇದರಲ್ಲಿ ಸುಮಾರು 150 ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿತ್ತು. ವಿಶೇಷವೆಂದರೆ ಕಡಿಮೆ ದಿನಗಳಲ್ಲಿ ಈ ಶಾಲೆಗಳು ಸರ್ಕಾರಿ ಶಾಲೆಗಳಿಗಿಂತಲೂ ಹೆಚ್ಚಿನ ಖ್ಯಾತಿ ಪಡೆದವು. ವಿಶೇಷವೇನೆಂದರೆ ಈ ಶಾಲೆಗಳು ಪುರುಷ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಮಹಿಳಾ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲಾಯಿತು. ಆದರೆ ಸಾವಿತ್ರಿಬಾಯಿ ಇಂತಹ ಸಮಾಜಪರ ಕಾರ್ಯಗಳು ಆಗಿನ ಸಂಪ್ರದಾಯವಾದಿಗಳಿಗೆ ಹಿಡಿಸಲಿಲ್ಲ. ಬಹುಶಃ ಇದೇ ಕಾರಣಕ್ಕಾಗಿ ಅವರು ವಿದ್ಯಾರ್ಥಿಗಳಿಗೆ ಕಲಿಸಲು ಹೋದಾಗ ಆಗಾಗ್ಗೆ ಸಗಣಿ ಹಾಗೂ ಕಲ್ಲುಗಳನ್ನು ಅವರಿಗೆ ಎಸೆಯುತ್ತಿದ್ದರು. ಇನ್ನೊಂದೆಡೆ ಸ್ವತಃ ದಂಪತಿಗಳ ಪೋಷಕರು ಕೂಡ  ಪ್ರೋತ್ಸಾಹ ನೀಡಲಿಲ್ಲ. ಇದರಿಂದಾಗಿ ಅವರು ಮನೆಯಿಂದ ಹೊರಗೆ ಉಳಿಯಬೇಕಾಗಿ ಬಂತು.

ಇದಾದ ನಂತರ ಜ್ಯೋತಿಬಾ ಅವರ ಸ್ನೇಹಿತ ಉಸ್ಮಾನ್ ಶೇಖ್ ಅವರ ಮನೆಗೆ ತೆರಳಿದರು. ಉಸ್ಮಾನ್ಗೆ ಫಾತಿಮಾ ಬೇಗಂ ಶೇಖ್ ಎಂಬ ಸಹೋದರಿ ಇದ್ದಳು, ಆಗಲೇ ಶಿಕ್ಷಣ ಪಡೆದಿದ್ದ ಮತ್ತು ಸಾವಿತ್ರಿಬಾಯಿಯ ಜೀವಮಾನದ ಒಡನಾಡಿಯಾಗಿದ್ದಳು. ಶೇಖ್ ಅವರನ್ನು ಭಾರತದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ ಎಂದು ಪರಿಗಣಿಸಲಾಗಿದೆ, ಮತ್ತು ಅವರು ಸಾವಿತ್ರಿಬಾಯಿ ಅವರೊಂದಿಗೆ ಸೇರಿ 1849 ರಲ್ಲಿ ಶೇಖ್ ಅವರ ಮನೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಎರಡು ಶೈಕ್ಷಣಿಕ ಟ್ರಸ್ಟ್ಗಳು, ಸ್ಥಳೀಯ ಸ್ತ್ರೀ ಶಾಲೆ, ಪುಣೆ ಮತ್ತು ಸೊಸೈಟಿ ಫಾರ್ ಪ್ರೋಮೋಟಿಂಗ್ ದಿ ಎಜುಕೇಶನ್ ಆಫ್ ಮಹರ್ಸ್, ಮಾಂಗ್ಸ್, ಮತ್ತು ಎಟ್ಸೆಟೆರಾಸ್ ನ್ನು 1850 ರ ದಶಕದಲ್ಲಿ ದಂಪತಿಗಳು ಪ್ರಾರಂಭಿಸಿದರು. ಪುಲೆ ದಂಪತಿಗಳಿಬ್ಬರು ಸೇರಿ ತಮ್ಮ ಜೀವಿತಾವಧಿಯಲ್ಲಿ ಒಟ್ಟು 18 ಶಾಲೆಗಳನ್ನು ತೆರೆದರು. ಮುಂದೆ ಪುಲೆ ದಂಪತಿಗಳ ಅಕಾಲಿಕ ಮರಣದ ನಂತರ ಶಾಲೆಗಳನ್ನು ಫಾತಿಮಾ ಬೇಗಂ ನೋಡಿಕೊಂಡರು.

 

ಸಾವಿತ್ರಿಬಾಯಿಯವರ  ಈ ಎಲ್ಲ ಸಾಮಾಜಿಕ ಕಾರ್ಯಗಳ ನಡುವೆಯೂ ಕವಿಯತ್ರಿ ಕೂಡ ಆಗಿದ್ದರು.1854ರಲ್ಲಿ ಕಾವ್ಯ ಫಲೆ (ಕಾವ್ಯ ಅರಳಿದೆ) ಕವನ ಸಂಕಲನದ ಮೂಲಕ 19ನೇ ಶತಮಾನದ ಸಮಾಜವನ್ನು ಚಿತ್ರಿಸುವ ಪ್ರಯತ್ನ ಮಾಡಿದರು. 1891ರಲ್ಲಿ ಭವನ ಕಾಶಿ ಸುಬೋಧ ರತ್ನಾಕರ (ಅಪ್ಪಟ ಮುತ್ತುಗಳ ಸಾಗರ) ಜ್ಯೋತಿಬಾ ಅವರನ್ನು ಒಳಗೊಂಡು ಬರೆದ ಆತ್ಮಕತೆ, 1892ರಲ್ಲಿ ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿ ಹಾಗೂ ಕಜ್‌೯ (ಸಾಲ) ಸಾವಿತ್ರಿ ಬಾಯಿಯವರ ಸಾಹಿತ್ಯ ರಚನೆಯಿಂದ ಹೊರಹೊಮ್ಮಿದ ಸಾಮಾಜಿಕ ಕೃತಿಗಳು.

ಗೋ, ಗೆಟ್ ಎಜುಕೇಶನ್ ಎಂಬ ಕವಿತೆ ಕೆಳ ಜಾತಿಯವರು ತಮ್ಮನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಶಿಕ್ಷಣ ಒಂದೇ ಮಾರ್ಗ ಎನ್ನುವ ಸಂದೇಶವನ್ನು ಸಾರಿದರು.

 

ಸಾಮಾಜಿಕ ಬದಲಾವಣೆಯನ್ನು ತಳಮಟ್ಟದಿಂದಲೇ ಬದಲಾಗಬೇಕೆಂದು ಬಯಸಿದ್ದ ಅವರು, ಆಗಿನ ಕಟು ಸಂಪ್ರದಾಯ ನೀತಿ ಪದ್ಧತಿಗಳನ್ನು ತಿರಸ್ಕರಿಸಿದರು. ಅವರ  ಕಾರ್ಯಗಳಿಗೆ ಪತಿ ಜ್ಯೋತಿ ಬಾಫುಲೆ ಬೆಂಬಲವಾಗಿ ನಿಂತರು. ಸಾವಿತ್ರಿಬಾಯಿಯವರು ಹಳೆಯ ಸಂಪ್ರದಾಯಗಳಿಗೆ ಅಂತ್ಯಹಾಡಿ, ಅಂತರಜಾತಿ ವಿವಾಹವನ್ನು ಪ್ರೋತ್ಸಾಹಿಸಿ ಅಂತ ದಂಪತಿಗಳಿಗೆ ಆಶ್ರಯವನ್ನು ನೀಡಿದರು. ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ.

ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ.  1860ರ ದಶಕದಲ್ಲಿ ವಿಧವೆಯರ ತಲೆಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ, ವಿವಾಹಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು.ಸಾವಿತ್ರಿಬಾಯಿ ಅವರು ಗರ್ಭಿಣಿ ವಿಧವೆಯರು ಮತ್ತು ಅತ್ಯಾಚಾರಕ್ಕೊಳಗಾದವರಿಗೆ ಸಹಾಯ ಮಾಡಲು ಬಲ್ಹತ್ಯಾ  ಪ್ರತಿಬಂಧಕ್ ಗೃಹವನ್ನು ಪ್ರಾರಂಭಿಸಿದರು,  ಒಂದು ವೇಳೆ ತಾಯಂದಿರು ಬಯಸದಿದ್ದರೆ ಅಥವಾ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಮಕ್ಕಳನ್ನು ಸಹ ನೋಡಿಕೊಳ್ಳುತ್ತಿದ್ದರು. ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು.

ಮುಂದೆ ಜೀವನವನ್ನು ಬಹುಸಂಖ್ಯಾತ ಸಮುದಾಯದ ದಲಿತರು, ಮಹಿಳೆಯರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಮುಡಿಪಾಗಿಟ್ಟರು. ಆದರೆ ಅವರ ಈ ಎಲ್ಲ ಶೋಷಿತ ಸಮುದಾಯಗಳಿಗೆ ನೀಡಿರುವ ಕೊಡುಗೆಯನ್ನು ಸಾರ್ವಜನಿಕ ವಲಯ ಕಡೆಗಣಿಸಿದೆ ತಮ್ಮ ಪತಿ ಜೋತಿಭಾ ಫುಲೆ ಜೊತೆ ಸೇರಿ ಪ್ರಾರಂಭಿಸಿದ ಮೊದಲ ಹೆಣ್ಣು ಮಕ್ಕಳ ಶಾಲೆಗೆ ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. ಆದ್ದರಿಂದ ಅವರನ್ನು ಭಾರತದ ಮೊದಲ ಶಿಕ್ಷಕಿ ಎಂದು ಕರೆಯುತ್ತಾರೆ. 1848 ರಿಂದ 1852ರ ಅವಧಿಯಲ್ಲಿ 18 ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು.

ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು.

ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾದ ಸಾವಿತ್ರಿಯವರು ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು. 1848ರಲ್ಲಿ ಸಮಾಜದ ತಳ ವರ್ಗದ ಹೆಣ್ಣುಮಕ್ಕಳಿಗಾಗಿ ಶಾಲೆ, 1855ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆ, 1878ರಲ್ಲಿ ದಲಿತರಿಗಾಗಿ ಕುಡಿಯುವ ನೀರಿನ ಟ್ಯಾಂಕ್‌ ಸ್ಥಾಪನೆ ಮಾಡಿದರು.

ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮತ್ತು  ಈ ಎಲ್ಲಾ ಸಾಧನೆನ್ನು ಪರಿಗಣಿಸಿದ  ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೊಟ್ಟಿದ್ದಾರೆ.

ಫುಲೆ ದಂಪತಿಗೆ ಮಕ್ಕಳಿರಲಿಲ್ಲ ಎನ್ನುವುದಕ್ಕಿಂತಲೂ ಅಸಹಾಯಕ ಸಮುದಾಯವನ್ನೇ ತಮ್ಮ ಸಂತತಿಯನ್ನಾಗಿ ಭಾವಿಸಿದ್ದ ಅವರಿಗೆ, ಸ್ವಂತ ಮಕ್ಕಳ ಅಗತ್ಯ ಕಂಡುಬಂದಿರಲಿಲ್ಲ ಎಂದು ಹೇಳುವುದೇ ಸರಿ. ಈ ದಂಪತಿಗೆ ಮಕ್ಕಳಾಗಲಿಲ್ಲ, ಈ ಹಿನ್ನಲೆಯಲ್ಲಿ ಆ ದಂಪತಿಗಳು ಮುಂದೆ ಬಾಲಹತ್ಯಾ ಪ್ರತಿಬಂಧಕ ಗೃಹದಲ್ಲಿ ಬ್ರಾಹ್ಮಣ ವಿಧವೆಗೆ ಜನಿಸಿದ ಯಶವಂತರಾವ್ ಎನ್ನುವ ಬಾಲಕನ್ನು ದತ್ತು ಪಡೆದರು. ಜ್ಯೋತಿಬಾ ಅವರ ಸಾವಿನ ಸಂದರ್ಭದಲ್ಲಿ, ಅಂತ್ಯಸಂಸ್ಕಾರ ಯಾರು ಮಾಡಬೇಕೆನ್ನುವ ಗೊಂದಲ ಎದುರಾದಾಗ, ಸಾವಿತ್ರಿ ಅವರೇ ಗಂಡನ ಅಂತಿಮಸಂಸ್ಕಾರ ನಡೆಸಿದ್ದು ಅವರ ವ್ಯಕ್ತಿತ್ವದ ಗಟ್ಟಿತನಕ್ಕೆ ಉದಾಹರಣೆಯಂತಿತ್ತು.

ಇನ್ನು ಮಹಾರಾಷ್ಟ್ರದಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ, ಸಾವಿತ್ರಿಬಾಯಿ ಮತ್ತು ಅವರ ಮಗ ಯಶ್ವಂತ್ ಅವರೊಂದಿಗೆ 1897 ರಲ್ಲಿ ಪೀಡಿತರನ್ನು ನೋಡಿಕೊಳ್ಳಲು ಕ್ಲಿನಿಕ್ ತೆರೆದರು. ಕ್ಲಿನಿಕ್ ಪ್ಲೇಗ್ ನಿಂದ ಮುಕ್ತವಾದ ಪುಣೆಯ ಹೊರವಲಯ ಪ್ರದೇಶದಲ್ಲಿತ್ತು. ಆದರೆ ಪ್ಲೇಗ್‌ ರೋಗಿಗಳ ಶುಶ್ರೂಷೆ ಮಾಡುತ್ತ, ಆ ಸೋಂಕು ತಗುಲಿ  ದುರದೃಷ್ಟವಶಾತ್ ತಗುಲಿ ಮಾರ್ಚ್ 10, 1897 ರಂದು ನಿಧನರಾದರು

ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸುಧಾರಣೆಗಳನ್ನು ಮಾಡುತ್ತಾ  ತಳ ಸಮುದಾಯದವರು ಮತ್ತು ಮಹಿಳೆಯರ ಉನ್ನತಿಗಾಗಿ ತಮ್ಮದೇ ಕೊಡುಗೆ ನೀಡಿದರು. ಕೇವಲ ಇಷ್ಟೇ ಅಲ್ಲದೆ ಸಾವಿತ್ರಿಬಾಯಿ ವಿಧವೆಯರ ಪುನರ್ವಿವಾಹದ ಪರವಾಗಿ ಧ್ವನಿ ಎತ್ತಿದರು ಮತ್ತು ಬಾಲ್ಯವಿವಾಹವನ್ನು ರದ್ದುಗೊಳಿಸಲು ಹೋರಾಡಿದರು. ಆ ಮೂಲಕ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಗಾಗಿ ಅವರು ನೀಡಿದ ಕೊಡುಗೆ ಭಾರತೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ.

ಕಳೆದ ಮೂರು ವರ್ಷಗಳಿಂದ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿಯನ್ನು ಪ್ರತಿ ವರ್ಷವೂ ಜ.3 ರಂದು ಶಾಲಾ ಕಾಲೇಜುಗಳಲ್ಲಿ  ಆಚರಿಸುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿ ಗೌರವ ಸಲ್ಲಿಸಿದೆ.

ಈ ಮೂಲಕ  ಅಕ್ಷರದವ್ವನ ನೆನೆಯೋಣ..

ಡಾ.ಗುರು ಪ್ರಸಾದ್ ರಾವ್ ಹವಾಲ್ದಾರ್

ಲೇಖಕರು ಮತ್ತು ಉಪನ್ಯಾಸಕರು

ಮರಿಯಮ್ಮನ ಹಳ್ಳಿ

dr.guruhs@gmail.com

 

Share and Enjoy !

Shares