ಹಾಡುವುದನ್ನು ನಿಲ್ಲಿಸಿದ ಬಾಲಿವುಡ್ ಗಾನ ಕೋಗಿಲೆ

Share and Enjoy !

Shares
Listen to this article

ಲತಾ ಮಂಗೇಶ್ಕರ್ ಅವರು ಭಾರತದ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರಾಗಿದ್ದರು. ಇವರು ೧೯೨೯ ರ ಸೆಪ್ಟೆಂಬರ್ ೨೮ ರಂದು ಈಗಿನ ಮಧ್ಯಪ್ರದೇಶದ ಇಂದೋರ್ ನಲ್ಲಿ , ರಂಗಭೂಮಿ ಕಲಾವಿದರೂ ಹಾಗೂ ಸಂಗೀತಗಾರರೂ ಆಗಿದ್ದ ದೀನನಾಥ ಮಂಗೇಶ್ಕರ್ ಹಾಗೂ ಸೇವಂತಾ ಅವರ ಹಿರಿಯ ಮಗಳಾಗಿ ಜನಿಸಿದ್ದರು. ಇವರ ಮೊದಲಿನ ಹೆಸರು ಹೇಮ. ಮಂಗೇಶ್ಕರ್ ಇವರ ಮನೆತನದ ಹೆಸರು. ಭಾವ ಬಂಧನ್ ಎಂಬ ನಾಟಕದಲ್ಲಿ ಲತಾ ಎಂಬ ಪಾತ್ರದಲ್ಲಿ ನಟಿಸಿ ಜನಪ್ರಿಯ ಗಳಿಸಿದ್ದರಿಂದ ಮುಂದೆ ಇವರು ಲತಾ ಆಗಿಯೇ ಹೆಸರಾದರು.

ತಂದೆ ದೀನನಾಥರು ಕೆಲವು ಮಕ್ಕಳಿಗೆ ಮನೆಯಲ್ಲಿಯೇ ಸಂಗೀತ ಪಾಠ ಹೇಳಿ ಕೊಡುತ್ತಿದ್ದರು. ಒಮ್ಮೆ ಒಂದು ಹುಡುಗ ಸಂಗೀತ ಅಭ್ಯಾಸ ಮಾಡುವಾಗ ರಾಗವನ್ನು ತಪ್ಪಾಗಿ ಹೇಳಿದನಂತೆ. ಅದನ್ನು ಅಲ್ಲಿಯೇ ಇದ್ದ ಲತಾ ಅವರು ತಿದ್ದಿ ಹೇಳಿದರು. ಲತಾ ಅವರಲ್ಲಿರುವ ಶ್ರದ್ಧೆ ಮತ್ತು ಸಂಗೀತಾಸಕ್ತಿಯನ್ನು ಗುರುತಿಸಿದ ದೀನನಾಥರು ಅಂದಿನಿಂದಲೇ ಲತಾ ಅವರಿಗೂ ಸಂಗೀತ ಶಿಕ್ಷಣವನ್ನು ನೀಡಲು ಆರಂಭಿಸಿದರು.

ಲತಾ ಶಾಲೆಗೆ ಹೋಗುತ್ತಿದ್ದಾಗ ಶಿಕ್ಷಕರು ಒಮ್ಮೆ ಲತಾ ಅವರನ್ನು ಗದರಿಸಿದ್ದರಂತೆ. ಅದರಿಂದಾಗಿ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದ ಲತಾ ನಾಟಕಗಳಲ್ಲಿ ಬಾಲ ನಟಿಯಾಗಿ ಸಣ್ಣ ಪುಟ್ಟ ಪಾತ್ರ ಮಾಡಲು ಆರಂಭಿಸಿದರು. ಸಂಗೀತ ಮತ್ತು ನಾಟಕ ಅಭಿನಯದಲ್ಲಿ ಲತಾ ಅವರಿಗೆ ತಂದೆ ದೀನನಾಥರೇ ಮೊದಲ ಗುರುವಾಗಿದ್ದರು. ನಂತರ ರಾಮಕೃಷ್ಣ ಬುವಾವಚೆ ಮತ್ತು ಉಸ್ತಾದ್ ಅಮಾನತ್ ಖಾನ್ ಎಂಬುವರ ಬಳಿ ಸಂಗೀತಾಭ್ಯಾಸ ಮಾಡಿದರು.

ದೀನನಾಥರು ೪೧ ನೇ ವಯಸ್ಸಿನಲ್ಲಿ ನಿಧನರಾದರು. ಆಗ ಲತಾ ಅವರಿಗೆ ೧೩ ವರ್ಷ ವಯಸ್ಸು. ಮೂರು ಜನ ತಂಗಿಯರು ಮತ್ತು ಒಬ್ಬ ತಮ್ಮನ ಜವಾಬ್ದಾರಿ ಇವರ ಮೇಲೆ ಬಿತ್ತು. ಈ ಸಂದರ್ಭದಲ್ಲಿ ಮರಾಠಿ ಭಾಷೆಯ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಒದಗಿಬಂದವು.
೧೯೪೨ ರಲ್ಲಿ ಮರಾಠಿ ಭಾಷೆಯ ಕಿಲೇಹಸಾಲ್ ಚಿತ್ರದಲ್ಲಿ ಹಾಡಿದರೂ ಕಾರಣಾಂತರಗಳಿಂದ ಅದು ಸಿನಿಮಾದಲ್ಲಿ ಸೇರ್ಪಡೆಯಾಗಲಿಲ್ಲ. ೧೯೪೭ ರಲ್ಲಿ ಹಿಂದಿ ಸಿನಿಮಾದಲ್ಲಿ ಹಿನ್ನೆಲೆ ಗಾಯಕಿಯಾಗಿ ಅವಕಾಶ ಸಿಕ್ಕಿತು. ಅವರು ಹಾಡಿದ ಆಪ್ ಕಿ ಸೇವಾಮೆ ಪಾಂಲಾಗೂಕರ್ ಚೋರಿರೇ ಎಂಬ ಹಾಡು ಜನಪ್ರಿಯತೆಯನ್ನು ಗಳಿಸಿತು. ಅದಾದ ನಂತರ ಲತಾ ಅವರು ತಾಯಿ ತಂಗಿಯರು ಮತ್ತು ತಮ್ಮನ ಜೊತೆಯಲ್ಲಿ ಮುಂಬೈಗೆ ಬಂದು ನೆಲೆಸಿದರು.

ಲತಾ ಅವರ ಮಾತೃಭಾಷೆ ಮರಾಠಿಯಾಗಿತ್ತು. ಹಿಂದಿ ಅಥವಾ ಉರ್ದು ಭಾಷೆ ಮಾತಾಡಲು ಅವರಿಗೆ ಕಷ್ಟ ಆಗುತ್ತಿತ್ತು. ಖ್ಯಾತ ಚಲನಚಿತ್ರ ನಟರಾದ ದಿಲೀಪ್ ಕುಮಾರ್ ಅವರು ಈ ಬಗ್ಗೆ ಒಮ್ಮೆ ತಮಾಷೆಯನ್ನೂ ಮಾಡಿದ್ದರು. ಆಗ ಮನೆಪಾಠ ಹೇಳಿ ಕೊಡಲು ಒಬ್ಬ ಶಿಕ್ಷಕರನ್ನು ಹುಡುಕಿಕೊಂಡರಲ್ಲದೇ, ಅಲ್ಪ ಸಮಯದಲ್ಲೇ ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಸಹಜವಾಗಿಯೇ ಮಾತಾಡುವುದನ್ನು ಕಲಿತು ಗಜಲ್ ಗಳನ್ನು ಹಾಡಿದರು. ಮುಂದೆ ಲತಾ ಅವರು ಇತಿಹಾಸವನ್ನೇ ಸೃಷ್ಟಿಸುತ್ತಾ ನಡೆದರು.

ಹಿಂದಿ ಭಾಷೆಯ ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಿದರು. ಪ್ರತಿಯೊಬ್ಬ ಗಾಯಕರ ಜೊತೆ ಹಾಡಿದರು. ಬಹುತೇಕ ಎಲ್ಲಾ ನಾಯಕಿಯರಿಗೂ ಹಾಡಿದರು. ಲತಾ ಅವರು ತಮ್ಮ ತಮ್ಮನಾದ ಹೃದಯನಾಥ ಅವರ ನಿರ್ದೇಶನದಲ್ಲಿ ಮೀರಾ ಭಜನೆಗಳನ್ನೂ ಸೇರಿದಂತೆ ಹಲವು ಗೀತೆಗಳನ್ನು ಹಾಡಿದರು. ತಂಗಿಯರಾದ ಆಶಾ, ಉಷಾ, ಮೀನಾ ಅವರ ಜೊತೆಯಲ್ಲಿ ಹಾಡಿದರು. ಕೆಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದರು.

ಗಜಲ್, ಪ್ರೇಮ ಗೀತೆ, ಭಜನೆ, ಯುಗಳ ಗೀತೆ ಜನಪದ ಗೀತೆಗಳನ್ನು ಸುಮಾರು ೨೨ ಭಾಷೆಗಳಲ್ಲಿ ಹಾಡಿ ಲತಾದೀದಿ ಎಂದೇ ಪ್ರಖ್ಯಾತಿ ಪಡೆದರು. ೧೯೬೭ ರಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಎಂಬ ಕನ್ನಡ ಚಲನಚಿತ್ರದಲ್ಲಿ ಬೆಳ್ಳನೆ ಬೆಳಗಾಯಿತೂ ಹಾಗೂ ಎಲ್ಲಾರೆ ಇರುತೀರೋ ಎಂದಾರೆ ಬರುತೀರೋ ಎಂಬ ಹಾಡುಗಳನ್ನು ಹಾಡಿದರು.

ಲತಾ ಅವರು ವಿವಾಹವಾಗಲಿಲ್ಲ. ತಮ್ಮ ಜೀವನವನ್ನು ಸಂಗೀತಕ್ಕೇ ಮುಡಿಪಾಗಿಟ್ಟರು. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿದ್ದು ಹೆಸರು ಮಾಡಿದ್ದಾರೆ. ಹೀಗಾಗಿ ಲತಾ ಅವರು “ಲೇಕಿನ್” ಎಂಬ ಕಲಾತ್ಮಕ ಚಿತ್ರವನ್ನು ನಿರ್ಮಿಸುವುದರ ಮೂಲಕ ನಿರ್ಮಾಪಕರೂ ಆದರು.

ಚೀನಾ-ಭಾರತ ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಪ್ರಾಣ ತೆತ್ತರು. ಇವರ ನೆನಪಿನಲ್ಲಿ ಒಂದು ವಿಶೇಷ ಗೀತೆಯನ್ನು ಪ್ರದೀಪ್ ಎಂಬ ಕವಿ ರಚಿಸಿದರು. ಈ ಗೀತೆಯನ್ನು ಸಿ. ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು ೧೯೬೩ ಜನವರಿ ೨೭ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಾಡಿದರು. “ಐ ಮೇರೆ ವತನ್ ಕೇ ಲೋಗೋಂ, ಜರಾ ಆಂಖ್ ಮೇ ಭರಲೋ ಪಾನಿ … ” ಎಂದು ಪ್ರಾರಂಭವಾಗುವ ಗೀತೆಯನ್ನು ಕೇಳಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಕಣ್ಣಿನಲ್ಲಿ ನೀರಾಡಿತು. ಕಾರ್ಯಕ್ರಮದ ನಂತರ ಅವರು ಲತಾ ಮಂಗೇಶ್ಕರ್ ಅವರೊಂದಿಗೆ ಮಾತಾಡಿ “ನೀನು ನನ್ನನ್ನು ಅಳಿಸಿಬಿಟ್ಟೆ,” ಎಂದು ಭಾವುಕರಾಗಿ ಹೇಳಿದರಂತೆ. ಈ ಹಾಡನ್ನು ನವದೆಹಲಿಯಲ್ಲಿ ಪ್ರತಿ ಜನವರಿ ೨೬ರ ಸಮಾರಂಭದಲ್ಲಿ ಕೇಳಿಸಲಾಗುತ್ತದೆ.

ಲತಾ ಅವರು ೧೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಿಂದಿ ಭಾಷೆಯಲ್ಲಿಯೇ ಹಾಡಿದ್ದಾರೆ. ದೇಶ ವಿದೇಶಗಳನ್ನು ಸುತ್ತಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಲತಾ ಅವರ ಹಾಡುಗಳ ವಿಶೇಷವೆಂದರೆ, ಅಸಾಧಾರಣ ಸ್ಪಷ್ಟ ಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಅಳವಡಿಸಿ ಹಾಡುವ ಕಲೆ ಎನ್ನಬಹುದು. ಹೀಗಾಗಿ ಇವರನ್ನು ಕ್ವೀನ್ ಆಫ್‌ ಮೆಲೋಡಿ, ಹಾಗೂ ನೈಟಿಂಗೇಲ್ ಆಫ್‌ ಬಾಲಿವುಡ್ ಎನ್ನಲಾಗುತ್ತಿದೆ.

ಲತಾ ಅವರಿಗೆ ದೊರೆತ ಪ್ರಶಸ್ತಿಗಳು ಸನ್ಮಾನಗಳು ಅಸಂಖ್ಯಾತ ಎನ್ನಬಹುದು.
ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ ಅನೇಕ ವಿಶ್ವ ವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಲಭಿಸಿವೆ. ಸಿನಿಮಾಕ್ಕಾಗಿ ಕೊಡುವ ರಾಷ್ಟ್ರಪ್ರಶಸ್ತಿಗಳು,
ನಾಲ್ಕು ಫಿಲಿಂ ಫೆಸ್ಟ್ ನ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿಗಳು,
ಹದಿನೈದು ಬಂಗಾಳದ ಸಿನಿಮಾ ಪತ್ರಕರ್ತರ ಸಂಘದ ಪ್ರಶಸ್ತಿಗಳು,
ಮೂರು ನ್ಯಾಷನಲ್ ಫಿಲಿಂ ಅವಾರ್ಡ್ಸ್,
ಎರಡು ಫಿಲ್ಮ್ ಫೇರ್ ವಿಶೇಷ
ಪ್ರಶಸ್ತಿಗಳುಲಭಿಸಿವೆ.
ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ,
ಆಸ್ಥಾನ ವಿದ್ವಾನ್ ಪ್ರಶಸ್ತಿ, ತಿರುಪತಿ ದೇವಸ್ಥಾನಮ್ ಪ್ರಶಸ್ತಿ
೧೯೬೮ ರಲ್ಲಿ ಪದ್ಮಭೂಷಣ ಪ್ರಶಸ್ತಿ
೧೯೮೯ ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
೧೯೯೭ ರಲ್ಲಿ ಮಹಾರಾಷ್ಟ್ರ ಭುವನ್ ಪ್ರಶಸ್ತಿ,
೧೯೯೯ ರಲ್ಲಿ ಪದ್ಮ ವಿಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳು,
೨೦೦೧ ರಲ್ಲಿ ಭಾರತರತ್ನ ಪ್ರಶಸ್ತಿ,
ಜೀವಮಾನ ಸಾಧನೆಗಾಗಿ ಫಿಲಿಂಫೇರ್ ಪ್ರಶಸ್ತಿಗಳು,
೨೦೦೭ ರಲ್ಲಿ ಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.

೧೯೯೯ರ ನವೆಂಬರ್ ೨೨ ರಿಂದ ೨೦೦೫ ರ ನವೆಂಬರ್ ೨೧ ರ ವರೆಗೆ ರಾಜ್ಯಸಭಾಕ್ಕೆ ನಾಮನಿರ್ದೇಶನಗೊಂಡ ಸದಸ್ಯರೂ ಆಗಿದ್ದರು.

೨೦೨೨ ನೇ ಜನವರಿ ೯ ನೇ ತಾರೀಖು ಲತಾ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಜೊತೆಗೆ ರಕ್ತ ಹೀನತೆಯಿಂದ ಬಳಲುತ್ತಿದ್ದರು.ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಯಿತು. ಆದರೆ ಫೆಬ್ರವರಿ ೬ ರಂದು ಬೆಳಿಗ್ಗೆ ವಯೋಸಹಜವಾದ ಸಾವು ಕೊರೋನಾ ಹೆಸರಲ್ಲಿ ಅವರನ್ನು ಅಪ್ಪಿಕೊಂಡಿತು.ಬಾಲಿವುಡ್ ಕೋಗಿಲೆ ಹಾಡುವುದನ್ನು ನಿಲ್ಲಿಸಿದರೂ, ಅವರ ಶರೀರ ದೂರವಾದರೂ ಶಾರೀರ ಸದಾ ಬದುಕಿ, ಕೇಳುಗರ ಕಿವಿಯನ್ನು ತಂಪಾಗಿಸುತ್ತದೆ. ಸಾಧಕರು ಎಂದೆಂದೂ ಚಿರಂಜೀವಿಗಳೇ ಆಗಿರುತ್ತಾರೆಂಬುದಕ್ಕೆ ಸಾಕ್ಷಿಯಾಗಿ ಉಳಿದಿದ್ದಾರೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ.
ವಿನೋದಾ ಕರಣಂ. ಲೇಖಕರು. ಬಳ್ಳಾರಿ

Share and Enjoy !

Shares