ಮಹರ್ಷಿ ಅರಬಿಂದೋರ ೧೫೦ನೇ ಜನ್ಮದಿನದ ಅಂಗವಾಗಿ ಜೈಲಿನಲ್ಲಿ ನಡೆದ ಸ್ಮರಣೀಯ ಕಾರ್ಯಕ್ರಮ

Share and Enjoy !

Shares

ಬೆಂಗಳೂರ:ಇದೇ ಆಗಸ್ಟ್ ೧೫ಕ್ಕೆ (೨೦೨೨) ಭಾರತವು ಸ್ವಾತಂತ್ರ್ಯವನ್ನು ಗಳಿಸಿ ಭರ್ತಿ ೭೫ ವರ್ಷಗಳಾಗುತ್ತವೆ. ಸರ್ವಶ್ರೇಷ್ಠ ರಾಷ್ಟಿಯಯವಾದಿಯಾದ ಮಹರ್ಷಿ ಅರಬಿಂದೋರ ೧೫೦ನೆಯ ಜನ್ಮದಿನವೂ ಇದೇ ಆಗಿದೆ. ಈ ಸಂಬಂಧ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರು ಸ್ವಾತಂತ್ರö್ಯದ ಉತ್ಸವ ಹಾಗೂ ಯೋಗಿ ಅರಬಿಂದೋರ ಜನ್ಮದಿನ, ಇವೆರಡನ್ನೂ ಸ್ಮರಣೀಯಗೊಳಿಸಲು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದಕ್ಕೆಂದೇ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದಾರೆ. ಪದ್ಮಭೂಷಣ ಪುರಸ್ಕೃತರಾದ ಶ್ರೀ ಎಂ ಅವರೂ ಈ ಸಮಿತಿಯ ಗೌರವಾನ್ವಿತ ಸದಸ್ಯರಲ್ಲೊಬ್ಬರು. ದೇಶದಾದ್ಯಂತ ಪ್ರಧಾನ ಮಂತ್ರಿಗಳ ಸಾಂಸ್ಕೃತಿಕ ಸಚಿವಾಲಯದ ವತಿಯಿಂದ ವಿವಿಧ ಕಾರಾಗೃಹಗಳಲ್ಲಿ ಯೋಗಿ ಅರಬಿಂದೋರ ಜೀವನ ಮತ್ತು ಬೋಧನೆಗಳನ್ನು ಕುರಿತ ಕಾರ್ಯಕ್ರಮಗಳನ್ನು ಆಯೋಜಿಸುವುದು ಈ ಸಮಿತಿಯ ಉದ್ದೇಶ. ಆದಕಾರಣ ಶ್ರೀ ಎಂ ರವರ ನೇತೃತ್ವದಲ್ಲಿ ‘ಮಾನವ್ ಸೇವಾ – ಬಿಯಾಂಡ್ ಬ್ಯಾರಿಯರ್ಸ್’ ಎಂಬ ಅಭಿಯಾನವು ಆರಂಭಗೊಂಡು, ಅದರ ಮೊದಲ ಕಾರ್ಯಕ್ರಮವು ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ನೆರವೇರಿತ್ತು.

ಅದರ ಮುಂದುವರಿದ ಭಾಗವಾಗಿ ಮೇ ೭ರಂದು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಡಿಜಿಪಿ ಪ್ರಿಸನ್ಸ್, ಶ್ರೀ ಅಲೋಕ್ ಮೋಹನ್‌ರವರ ಸಹಕಾರದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚೀಫ್ ಸೂಪರಿಂಟೆಂಡೆಂಟ್, ಶ್ರೀ ಪಿ. ರಂಗನಾಥ್‌ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಜೊತೆಗೆ ಅರಬಿಂದೋರ ಜೀವನದ ಕುರಿತು ಕಿರುಪರಿಚಯವನ್ನೂ ಮಾಡಿಕೊಟ್ಟರು. ೧೯೦೮ರಲ್ಲಿ ಯೋಗಿ ಅರಬಿಂದೋ ಅವರು ಬ್ರಿಟೀಷರಿಂದ ದೇಶದ್ರೋಹದ ಆರೋಪವನ್ನು ಹೊತ್ತು ಅಲಿಪುರ ಜೈಲು ಸೇರಿದಾಗ, ಆ ಸೆರೆವಾಸದಿಂದ ಅರಬಿಂದೋರ ಜೀವನವು ಮಹತ್ತರವಾಗಿ ಬದಲಾಗಿತ್ತು. ಹಾಗಾಗಿ ಯೋಗಿ ಅರಬಿಂದೋರ ಜೀವನ ಮತ್ತು ಬೋಧನೆಗಳನ್ನು ಸೆರೆವಾಸಿಗಳಿಗೆ ತಿಳಿಯಪಡಿಸುವುದರಿಂದ, ಹಾಗೂ ಯೋಗ ಮತ್ತು ಧ್ಯಾನಗಳನ್ನು ಅವರಿಗೆ ಬೋಧಿಸುವುದರಿಂದ, ಸೆರೆವಾಸಿಗಳ ಮನೋಬಲವು ಹೆಚ್ಚುವುದರ ಜೊತೆಗೆ, ಅವರ ಅಂತಃಪ್ರಜ್ಞೆಯು ವಿಕಸಿತಗೊಳ್ಳಲೂ ಸಹಾಯವಾಗುತ್ತದೆ ಎಂಬ ನಿಟ್ಟಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತ ಯೋಗ ವಿದ್ಯಾಕೇಂದ್ರದ ಶಿಕ್ಷಕರಿಂದ ಯೋಗ ಮತ್ತು ಧ್ಯಾನದ ವಿಶೇಷ ಕಾರ್ಯಕ್ರಮವೂ ನೆರವೇರಿತು. ಕಾರಾಗೃಹದ ಗ್ರಂಥಾಲಯಕ್ಕೆ ಮಹರ್ಷಿ ಅರಬಿಂದೋ ಹಾಗೂ ಶ್ರೀ ಎಂ ರವರ ಕೆಲವು ಕೃತಿಗಳನ್ನು ‘ಸತ್ಸಂಗ್ ಫೌಂಡೇಶನ್’ ವತಿಯಿಂದ ಕಾಣಿಕೆಯಾಗಿ ನೀಡಲಾಯಿತು. ‘ಪ್ರತಿಯೊಬ್ಬರೂ ನಡೆದಾಡುವ ಗುಡಿಗಳೇ ಆಗಿದ್ದಾರೆ, ಮಾನವ ಸೇವೆಯೇ ಭಗವಂತನ ಸೇವೆ, ದೇಶ ಸೇವೆಯೇ ದೇವರ ಸೇವೆ’ ಎಂಬುದು ಈ ಕಾರ್ಯಕ್ರಮದಲ್ಲಿ ನೀಡಲಾದ ವಿಶಿಷ್ಟ ಸಂದೇಶವಾಗಿದೆ.

 

Share and Enjoy !

Shares