ಕೂಡ್ಲಿಗಿ.ಆ.20 :- ಬೀಜ ಸಹಿತ ಒಣ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಬೈಕಿನಲ್ಲಿ ಸಾಗಾಟ ಮಾಡಲು ಹೊರಟಿದ್ದ ವ್ಯಕ್ತಿಯ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿ ಆತನ ಬಳಿ ಇದ್ದ ಅರ್ಧ ಕೆಜಿಯಷ್ಟು ತೂಕದ ಒಣ ಗಾಂಜಾ ಹಾಗೂ 50ಸಾವಿರಕ್ಕೂ ಅಧಿಕ ಬೆಲೆಯ ಬೈಕನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ 11-30ಗಂಟೆಯಿಂದ 12 ಗಂಟೆ ಮಧ್ಯವಧಿಯಲ್ಲಿ ಚಿಕ್ಕಜೋಗಿಹಳ್ಳಿ ಗ್ರಾಮದ ಮಾಕನಡಕು ಕ್ರಾಸ್ ಬಳಿ ಜರುಗಿದೆ.
ತಾಲೂಕಿನ ನೆಲಬೊಮ್ಮನಹಳ್ಳಿಯ ಚನ್ನಪ್ಪ (42) ಅಬಕಾರಿ ಪೊಲೀಸರ ದಾಳಿಯಲ್ಲಿ ಬಂಧಿತ ಆರೋಪಿಯಾಗಿದ್ದಾನೆ. ಈತನು ಬೀಜಸಹಿತ ಒಣ ಗಾಂಜಾವನ್ನು ಮಾರಾಟ ಮಾಡಲು ಬೈಕಿನಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರಿಸಿದ ಕೂಡ್ಲಿಗಿ ಅಬಕಾರಿ ನಿರೀಕ್ಷಕರಾದ ಎಂ ಹೆಚ್ ಪವಿತ್ರರವರು ಹೊಸಪೇಟೆ ಉಪ ವಿಭಾಗದ ಉಪ ಅಧೀಕ್ಷಕರಾದ ಆಂಜನೇಯ ಇವರ ನೇತೃತ್ವದಲ್ಲಿ ತಮ್ಮ ಸಿಬ್ಬಂದಿಗಳಾದ ಟಿ ನಾಗರಾಜ ಹಾಗೂ ಡಿ ರಾಘವೇಂದ್ರ ರವರು ಸೇರಿ ಅಬಕಾರಿ (ಮಾದಕವಸ್ತು) ಆಯುಕ್ತರ ನಿರ್ದೇಶನದಂತೆ, ಹೊಸಪೇಟೆ ಅಬಕಾರಿ ಜಂಟಿ ಆಯುಕ್ತರ ಆದೇಶದಂತೆ, ವಿಜಯನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಶುಕ್ರವಾರ ಬೆಳಿಗ್ಗೆ 11-30 ರಿಂದ 12 ಗಂಟೆ ಸಮಯದ ಮಧ್ಯವಧಿಯಲ್ಲಿ ಚಿಕ್ಕಜೋಗಿಹಳ್ಳಿಯ ಮಾಕನಡಕು ಕ್ರಾಸ್ ಬಳಿ ರಸ್ತೆಗಾವಲು ನಡೆಸಿ ಮಾಹಿತಿಯಂತೆ ಕೆ ಎ 35, ಈ ಎಫ್ 7829 ನ ಬೈಕ್ ಮೇಲೆ ದಾಳಿ ನಡೆಸಲಾಗಿ ಸಾಗಾಟ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ 510 ಗ್ರಾಂ ನ 25ರಿಂದ 30 ಸಾವಿರ ಮೌಲ್ಯವಿರುವ ಬೀಜಸಹಿತದ ಗಾಂಜಾವನ್ನು ವಶಕ್ಕೆ ಪಡೆದು ಗಾಂಜಾ ಸಾಗಾಟ ಮಾಡಲು ಬಳಸಿದ್ದ ಬೈಕ್ ನ್ನು ಜಪ್ತಿ ಮಾಡಿ ಆರೋಪಿ ಚನ್ನಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.