ವಿಜಯನಗರವಾಣಿ ಸುದ್ದಿ )
ಬಳ್ಳಾರಿ, ಸೆ.15: ಕೊಳಗಲ್ಲು ಗ್ರಾಮದಿಂದ ದಿನ ನಿತ್ಯದಂತೆ ತಮ್ಮ ಹೊಟ್ಟೆಪಾಡಿಗಾಗಿ ಆಟೋದಲ್ಲಿ ಕುಳಿತು ಕೂಲಿ ಕೆಲಸಕ್ಕೆ ಹೊರಟಿದ್ದ ತಾಲೂಕಿನ ಕೊಳಗಲ್ಲು ಗ್ರಾಮದ ಆರು ಜನ ಮಹಿಳಾ ಕೃಷಿ ಕೂಲಿ ಕಾರ್ಮಿಕರು ಚಾಲಕನ ನಿಯಂತ್ರಣ ತಪ್ಪಿ ಆಟೋ ಕಾಲುವೆಗೆ ಪಲ್ಟಿಯಾಗಿದ್ದರಿಂದ ಆರು ಜನ ಜಲ ಸಮಾಧಿಯಾಗಿ ಐದು ಜನ ಬದುಕುಳಿದ ಘಟನೆ ನಿನ್ನೆ ಬೆಳಿಗ್ಗೆ ಸಂಭವಿಸಿದೆ.
ಆಟೋ ಚಾಲಕ ಈಡಿಗರ ಭೀಮಪ್ಪ ಎಂದಿನಂತೆ 20 ಜನ ಕೂಲಿ ಕಾರ್ಮಿಕರನ್ನು ಕುಳ್ಳಿರಿಸಿಕೊಂಡು ಗ್ರಾಮದ ಹೊರ ವಲಯದಲ್ಲಿನ ತುಮಟಿ ಗವಿಯಪ್ಪ ಅವರ ಜಮೀನಿಗೆ ಹೊರಟಿದ್ದ. ತುಂಗಭದ್ರ ಬಲದಂಡೆ ಮೇಲ್ಮಟ್ಟದ (ಹೆಚ್.ಎಲ್.ಸಿ) ಕಾಲುವೆಯ ದಂಡೆ ಮೇಲೆ ತೆರಳಿ. ಸೂಜಿ ಗುಡ್ಡದ ಬಳಿಯಿಂದ ಕಾಲುವೆಯ ಬಲ ಬದಿಗೆ ತೆರಳಿದ್ದಾನೆ. ಆ ರಸ್ತೆಯಲ್ಲಿದ್ದ ಕಲ್ಲಿನ ಮೇಲೆ ಆಟೋ ಚಲಿಸಿದಾಗ ಅದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಾಳುವೆಗೆ ಬಿದ್ದಿದೆ. ಎಂದು ಆಟೋದಲ್ಲಿ ಇದ್ದ ಹೇಮಾವತಿ ಹೇಳಿದ್ದಾಳೆ.
ಇಂತಹುದೇ ಘಟನೆ ಇಲ್ಲಿ 2009 ರಲ್ಲಿಯೂ ಸಂಭವಿಸಿ ಆಗ ಏಳು ಜನ ಕೂಲಿ ಕಾರ್ಮಿಕರು ನೀರು ಪಾಲಾಗಿದ್ದರು.
ಇಂದಿನ ಈ ಘಟನೆಯಲ್ಲಿ ದುರ್ಗಮ್ಮ(35) ಮತ್ತು ಅವರ ಸಂಬಂಧಿ ನಿಂಗಮ್ಮ(34) ಮತ್ತು 16 ವರ್ಷದ ಪುಷ್ಪಾವತಿ ಇವರು ಶವಗಳು ದೊರೆತಿದ್ದು. ಹೊಸಪೇಟೆ ಲಕ್ಷ್ಮೀ(36) ನಾಗರತ್ಮಮ್ಮ(32)್ಮ, ಈಡಿಗರ ಹುಲಿಗೆಮ್ಮ(26) ನೀರಿನಲ್ಲಿ ಮುಳುಗಿದ್ದು ಶವಗಳ ಹುಡುಕಾಟ ನಡೆದಿದೆ.
ಆಟೋದ ಚಾಲಕ ಭೀಮಪ್ಪ(38), ಆತನ ಜೊತೆಗಿದ್ದ ಮಹೇಶ್ (14)ಆಟೋ ಬಿದ್ದ ತಕ್ಷಣ ನೀರಿನಿಂದ ಹೊರಬಂದು ಕೂಗಿಕೊಂಡಿದ್ದಾರೆ. ಅಲ್ಲಿದ್ದ ಕೆಲ ಜನ ಬಂದು ಹೇಮಾವತಿ(32), ದಮ್ಮೂರು ಎರ್ರೆಮ್ಮ(36) ಮತ್ತು ಶಿಲ್ಪ(16) ಅವರು ಬದುಕುಳಿಸಿದ್ದಾರೆ.
ಚಾಲಕನು ಆಟೋ ನೀರಿಗೆ ಬಿದ್ದ ತಕ್ಷಣ ಚಾಲಕ ಅಲ್ಲಿಂದ ಓಡಿ ಹೋಗಿದ್ದಾನೆ. ಆದರೆ ಅಕ್ಕ ಪಕ್ಕದ ಹೊಲದಲ್ಲಿದ್ದ ಜನ ಬಂದು ಗ್ರಾಮದ ಜನರಿಗೆ ಮಾಹಿತಿ ನೀಡಿದ ಮೇಲೆ ಪೊಲೀಸರು, ಅಗ್ನಿ ಶಾಮಕದಳದವರು ಬಂದು ಕಾರ್ಯಾಚರಣೆ ನಡೆಸಿದ್ದಾರೆ.
ನೀರಿಗೆ ಪಲ್ಟಿಯಾದ ಆಟೋ ಚಾಲಕನಿಗೆ ಲೈಸೆನ್ಸ್ ಇಲ್ಲ, ಅಷ್ಟೇ ಅಲ್ಲದೆ ಇನ್ಸೂರೆನ್ಸ್ ಸಹ ಮಾಡಿಸಿಲ್ಲ ಎಂದು ಹೇಳಲಾಗುತ್ತಿದೆ. ಇದೇ ರೀತಿ ಈ ಗ್ರಾಮದಲ್ಲಿ 70 ಕ್ಕೂ ಹೆಚ್ಚು ಆಟೋಗಳು ದಿನ ನಿತ್ಯ ಕಾರ್ಮಿಕರನ್ನು ಜಮೀನುಗಳಿಗೆ ಕರೆದೊಯ್ಯುತ್ತಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಸಿ.ಮಂಜುನಾಥ, ಎಸಿ ಡಾ.ಆಕಾಶ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದೇರೀತಿ ಎಸ್ಪಿ ಸೈದುಲ ಅಡಾವತ್ ಸಹ ಪರಿಶೀಲನೆ ನಡೆಸಿ ಘಟನೆಯ ಮಾಹಿತಿ ಪಡೆದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ಸುದ್ದಿ ಕೇಳಿದ ತಕ್ಷಣ ಗ್ರಾಮದಿಂದ ನೂರಾರು ಜನ ನೋಡಲು ಬಂದು ಕಾಲುವೆಯ ದಂಡೆ ಜನಜಾತ್ರೆ ಆಗಿತ್ತು. ಇನ್ನು ತಮ್ಮಂತೆ ಕೂಲಿ ಮಾಡಲು ಹೋಗಿ ಆಟೋ ಪಲ್ಟಿಯಾಗಿ ಹಲವರು ಸತ್ತಿದ್ದರಿಂ ಇಂದು ಸುತ್ತಮುತ್ತಲಿನ ಜಮೀನುಗಳಲ್ಲಿ ಇಂದು ಯಾರೂ ಕೆಲಸ ಮಾಡದೆ ಮನೆಗೆ ತೆರಳಿದ್ದು ಕಂಡು ಬಂತು. ಕೊಳಗಲ್ಲಿನಲ್ಲಿ ನೀರವ ಮೌನ ಆವರಿಸಿತ್ತು.