ಬೀದರ-ಬಳ್ಳಾರಿ ಚತುಷ್ಪತ ಎಕ್ಸ್‍ಪ್ರೆಸ್ ಹೆದ್ದಾರಿ ನಿರ್ಮಾಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Share and Enjoy !

Shares

 

ಕಲಬುರಗಿ,ಸೆ.17ಬೀದರ-ಶ್ರೀರಂಗಪಟ್ಟಣ ಹೆದ್ದಾರಿ ನಡುವಿನ ಬೀದರ-ಬಳ್ಳಾರಿ ಹೆದ್ದಾರಿಯನ್ನು ಚತುಷ್ಪತ ಎಕ್ಸ್‍ಪ್ರೆಸ್ ಸ್ ಹೈವೇ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಶನಿವಾರ ಕಲಬುರಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರರು.
ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ಸಂಪರ್ಕ ಉತ್ತಮ ಗೊಳಿಸಲು ಈ ಹೆದ್ದಾರಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಭಾಗದಲ್ಲಿ ರಾಯಚೂರು, ಕೊಪ್ಪಳ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರದ ನೆರವಿನೊಂದಿಗೆ ಯಾದಗಿರಿ, ರಾಯಚೂರಿನಲ್ಲಿ ರಿಂಗ್ ರಸ್ತೆ ಮತ್ತು ಕಲಬುರಗಿಯಲ್ಲಿ ಎರಡನೇ ರಿಂಗ್ ರೋಡ್ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಕೈಗಾರಿಕಾ ಅಭಿವೃದ್ಧಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಕಲಬುರಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣ ಮಾಡಲು ತೀರ್ಮಾನ ಮಾಡಿದೆ. ರಾಜ್ಯ ಸರ್ಕಾರದಿಂದ ರಾಯಚೂರು ಹಾಗೂ ವಿಜಯಪುರದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮಾಡಲಾಗುವುದು. ಇದರಿಂದ ಕನಿಷ್ಠ 25 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಇದಲ್ಲದೆ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್, ಯಾದಗಿರಿಯಲ್ಲಿ ಫಾರ್ಮಾಕ್ಯೂಟಿಕಲ್ ಕ್ಲಸ್ಟರ್ ನಿರ್ಮಿಸಲಾಗುವುದು. ಕೊಪ್ಪಳದಲ್ಲಿ ಈಗಾಗಲೇ ಆಟಿಕೆಗಳ ಕ್ಲಸ್ಟರ್ ನಿರ್ಮಾಣವಾಗುತ್ತಿದೆ. ಬೀದರನಲ್ಲಿ ಕೇಂದ್ರದ ನೆರವಿನೊಂದಿಗೆ 90 ಕೋಟಿ ರೂ. ವೆಚ್ಚದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕುರಿತ ಸಿಪೆಟ್ ಸಂಸ್ಥೆ ಪ್ರಾರಂಭಿಸಲಾಗುವುದು. ಹೀಗೆ ಪ್ರದೇಶದ ಪ್ರತಿ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಪಕ್ಷಭೇದ ಮರೆತು ಶ್ರಮಿಸಿ ಸಿಎಂ ಕಿವಿಮಾತು:
ಈ ಭಾಗದ ಅಭಿವೃದ್ದಿಯಾಗಬೇಕೆಂದರೆ ರಾಜಕಾರಣಿಗಳು ಪಕ್ಷಬೇದ ಮರೆತು ಕೆಲಸ ಮಾಡಬೇಕು.ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ರಾಜಕಾರಣ ಮಾಡಿದರೆ ಈ ಭಾಗಕ್ಕೆ ದೊಡ್ಡ ದ್ರೋಹ ಮಾಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಲಬುರಗಿ ಅಭಿವೃದ್ಧಿ:
ಕಲಬುರ್ಗಿ ಅಭಿವೃದ್ಧಿಗೆ 100 ಕೋಟಿ ನೀಡಿದ್ದೇನೆ. ಕಲಬುರಗಿ ಕರ್ನಾಟಕದ ಭವಿಷ್ಯದ ನಗರ. ಇಲ್ಲಿ ಎಲ್ಲಾ ರೀತಿಯ ವೈಫೈ ಕನೆಕ್ಟ್, ಕೇಬಲ್ ಕನೆಕ್ಟ್ ಮತ್ತಿತರ ಅತ್ಯಾಧುನಿಕ ಸೌಲಭ್ಯ ಒದಗಿಸುವ ಮೂಲಕ ಅಂತಾರಾಷ್ಟ್ರೀಯ ನಗರ ಮಾಡಲು ತೀರ್ಮಾನಿಸಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಘೋಷಿಸಿದರು.

ಸಮಸ್ತ ಕರ್ನಾಟಕ ಅಭಿವೃದ್ದಿಯಾಗುತ್ತಿರುವ ಈ ಸಮಯದಲ್ಲಿ ಐತಿಹಾಸಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕವೂ ಅಷ್ಟೇ ವೇಗವಾಗಿ ಬೆಳೆಯಬೇಕು. ಕಲ್ಯಾಣ ಕರ್ನಾಟಕದ ಮೂಲಕ ನವ ಕರ್ನಾಟಕ ಹಾಗೂ ನವ ಭಾರತದ ಅಭಿವೃದ್ದಿಯಾಗಬೇಕು ಎಂದು ಮುಖ್ಯಮಂತ್ರಿಗಳು ಆಶಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸಕ್ತ ವರ್ಷದಲ್ಲಿ 2,100 ಶಾಲಾ ಕೊಠಡಿಗಳ ನಿರ್ಮಾಣ ಹಾಗೂ 2,500 ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಲಾಗುವುದು.

ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮುಂದಿನ ಆಗಸ್ಟ್ ರೊಳಗಾಗಿ ಶೌಚಾಲಯ ನಿರ್ಮಿಸಲಾಗುವುದು. ಆರೋಗ್ಯ ಸೇವೆ ಉತ್ತಮಪಡಿಸಲು 68 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತಿದ್ದು, 14 ಪಿ.ಎಚ್.ಸಿಗಳನ್ನು ಸಿ.ಎಚ್.ಸಿ. ಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ ಎಂದು ವಿವರಿಸಿದರು.

ನುಡಿದಂತೆ ನಡೆದು, 3000 ಕೋಟಿ ರೂ. ನೀಡಿದ್ದೇನೆ:
ಕಳೆದ ವರ್ಷದ ಇದೇ ವೇದಿಕೆಯಲ್ಲಿ 371ಜೇ ರಚನೆಯನ್ವಯ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ 3000 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದೆ. ನುಡಿದಂತೆ 2022-23ನೇ ಸಾಲಿಗೆ 3000 ಕೋಟಿ ರೂ. ನೀಡಿದ್ದೇನೆ.ಸಂವಿಧಾನದ 371ನೇ ವಿಧಿಗೆ ತಿದ್ದುಪಡಿಯಾದ ನಂತರ ಕೆ.ಕೆ.ಆರ್.ಡಿ.ಬಿ.ಗೆ ಒದಗಿಸಿದ ಅನುದಾನವನ್ನು ಗಮನಿಸಿದರೆ, ನಮ್ಮ ಸರ್ಕಾರ ಇತಿಹಾಸದಲ್ಲಿ ಮೊದಲ ಬಾರಿ ಸಂಪೂರ್ಣ ಅನುದಾನ ಬಿಡುಗಡೆ ಮಾಡಿದೆ. 3,000 ಕೋಟಿ ರೂ. ಗಳಿಗೆ ನಾಲ್ಕೇ ತಿಂಗಳಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಮರುನಾಮಕರಣ ಮಾಡಿದ್ದೇವೆ, ಪ್ರದೇಸವನ್ನು ಕಲ್ಯಾಣ ಮಾಡಲಾಗುವುದು. ಆ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೆವೆ. ಇದೊಂದು ಕ್ರಿಯಾಶೀಲ ಸರ್ಕಾರ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸ್ತ್ರೀ ಸಾಮಥ್ರ್ಯ, ಯುವಶಕ್ತಿಗೆ ಮನ್ನಣೆ:
ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಸ್ತ್ರೀ ಸಾಮಥ್ರ್ಯ ಯೋಜನೆ ಜಾರಿಗೆ ತರಲಾಗಿದೆ. ಅಂತೆಯೇ ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಗ್ರಾಮದಲ್ಲಿ ಮಹಿಳೆಯರ ಮತ್ತು ಯುವಕರ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ, ಕಿರು ಉದ್ದಿಮೆ ಪ್ರಾರಂಭಿಸಲು ಸಾಲಸೌಲಭ್ಯ, ಬೀಜಧನ ಒದಗಿಸಿ, ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆ ಇದಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಇದರಿಂದ ಸುಮಾರು 1 ಲಕ್ಷ ಯುವಕರಿಗೆ ಉದ್ಯೋಗ ದೊರೆಯಲಿದೆ.

ಕುಶಲ ಕರ್ಮಿಗಳ ಸಮುದಾಯದ ಯುವಕರಿಗೆ ಪ್ರತಿಯೊಬ್ಬರಿಗೆ 50 ಸಾವಿರ ರೂ. ಸಾಲ-ಸಬ್ಸಿಡಿ ನೀಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ. ಗುಳೆ ಹೋಗುವುದು ಅಂದರೆ ಮನಸ್ಸು ಕಲಕುತ್ತದೆ ಎಂದ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗದ ಜನರು ಗುಳೆ ಹೋಗುವುದನ್ನು ತಡೆಯಲು ಸಮಗ್ರ ಯೋಜನೆ ರೂಪಿಸುತ್ತೇವೆ ಎಂದು ತಿಳಿಸಿದರು. ಕೃಷಿ ಕೂಲಿಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರೀನ್ ಕಾರಿಡಾರ್:
ಬೀದರ್, ಬಳ್ಳಾರಿ,ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬಸವರಾಜ್ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಸಾಂಸ್ಕøತಿಕ ಸಂಘ ಸಮಗ್ರ ಬದಲಾವಣೆಗೆ ಶ್ರಮಿಸುತ್ತಿದೆ. ಸುಮಾರು 2 ಲಕ್ಷ ಎಕರೆಗಿಂತ ಹೆಚ್ಚಿರುವ ಬಂಜರು ಭೂಮಿಯನ್ನು ಕೃಷಿ ಯೋಗ್ಯ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಈ ಭಾಗದ ಹಸಿರು ಪ್ರದೇಶ ಹೆಚ್ಚಿಸಲು ಕೊಪ್ಪಳದಿಂದ ಕಲಬುರ್ಗಿ, ಬಳ್ಳಾರಿಯಿಂದ ರಾಯಚೂರುವರೆಗೆ ಗ್ರೀನ್ ಕಾರಿಡಾರ್ ಮಾಡಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಅರಣ್ಯ ಇಲಾಖೆಗೆ 10. ಕೋಟಿ ನೀಡಲಾಗಿದೆ ಎಂದು ತಿಳಿಸಿದರು.

ವರ್ಷಪೂರ್ತಿ ಆಚರಣೆ:
ಈ ಪ್ರದೇಶ ಅಷ್ಟು ಸುಲಭವಾಗಿ ದೊರೆತಿಲ್ಲ. ಈ ಭಾಗದ ವಿಮೋಚನೆಗೆ ನಾವು ಒಂದು ವರ್ಷ ಕಾಯಬೇಕಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ನಿಲುವು ಮತ್ತು ನೇತೃತ್ವದಿಂದ ನಿರ್ಧಾರದಿಂದ ಈ ಭಾಗ ಸಮಗ್ರ ಕರ್ನಾಟಕ ಸೇರುವಂತಾಯಿತು ಎಂದು ಕಲ್ಯಾಣ ಕರ್ನಾಟಕ ವಿಮೋಚನೆಗೆ ಶ್ರಮಿಸಿದ ಗಣ್ಯರು ಹಾಗೂ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಒದಗಿಸಲು ಹೋರಾಡಿದ ಮಹನೀಯರನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಹೈದ್ರಾಬಾದ ಕರ್ನಾಟಕ ವಿಮೋಚನೆಯ ಅಮೃತ ವರ್ಷವನ್ನು ವರ್ಷಪೂರ್ತಿ ಆಚರಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಜನಜಾಗೃತಿಗಾಗಿ ಎಲ್ಲ ಜಿಲ್ಲೆಗಳಲ್ಲಿ ರಥಯಾತ್ರೆ ಕೈಗೊಳ್ಳಲಾಗುವುದು ಎಂದರು.
ಇಂದು ಪ್ರಧಾನಿ ಮೋದಿ ಹುಟ್ಟು ಹಬ್ಬ, ಅವರಿಗೆ ಸಮಸ್ತ ಕರ್ನಾಟಕ ವಿಶೇಷವಾಗಿ ಕಲ್ಯಾಣ ಕರ್ನಾಟಕ ಜನತೆಯ ಪರವಾಗಿ ಶುಭಾಶಯ ಕೋರಿದ ಮುಖ್ಯಮಂತ್ರಿಗಳು, ಪ್ರಧಾನಿ ಮೋದಿ ಅವರು ಈ ಭಾಗದ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ದವಾಗಿದೆ ಅಂತ ಭರವಸೆ ನೀಡಿದ್ದಾರೆ ಎಂದು ಅವರ ಸಂದೇಶ ತಿಳಿಸಿದರು.
ಶಾಲಾ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯಮಂತ್ರಿಯಾದಿ ಸಚಿವರು, ಶಾಸಕ ಗಣ್ಯರು ವೀಕ್ಷಿಸಿದರು.

88.67 ಕೋಟಿ ರೂ.ಗಳ ಕಾಮಗಾರಿ ಉದ್ಘಾಟನೆ: ಇದೇ ಸಂದರ್ಭದಲ್ಲಿ ಕ್ರೈಸ್ ಸಂಸ್ಥೆಯಿಂದ 2019 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಆಳಂದ ತಾಲೂಕಿನ ಕಸಬಾ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, 1000 ಲಕ್ಷ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿ ನಿರ್ಮಿಸಲಾದ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೊದಲನೆ ಹಂತದ ಕಟ್ಟಡ, 633 ಲಕ್ಷ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿ ನಿರ್ನಿಸಿದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ, ಕಲಬುರಗಿಯಲ್ಲಿ 597 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಹಾಗೂ ಕಲಬುರಗಿಯಲ್ಲಿ 4618 ಲಕ್ಷ ರೂ. ವೆಚ್ಚದಲ್ಲಿ ಬಾಲಕರ ವಸತಿ ನಿಲಯ ಸಂಕೀರ್ಣ (6 ಡೈನಿಂಗ್) ಕಟ್ಟಡವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.

ಸ್ವಾತಂತ್ರ್ಯ ಹೋರಾಟಗಾರರಿಗೆ ಪತ್ರಕರ್ತರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ನಾಲ್ಕು ಜನ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು 10 ಜನ ಪತ್ರಕರ್ತರಿಗೆ ಸಿ.ಎಂ. ಸೇರಿದಂತೆ ಸಚಿವರು ಸನ್ಮಾನಿಸಿ ಗೌರವಿಸಿದರು.

ಗಿನ್ನಿಸ್ ದಾಖಲೆ ವಿಜೇತೆ ವಿಸ್ಮಿತಾ ಸಿ.ಎಂ.ಸನ್ಮಾನ:
ಕಲಬುರಗಿಯ 10 ವರ್ಷದ ವಿಸ್ಮಿತಾ ಅವರು 2 ರಿಂದ 10 ರ ಗುಣಾಕಾರ ಕೋಷ್ಟಕಗಳನ್ನು ತ್ವರಿತವಾಗಿ ಪಠಿಸುವುದಕ್ಕಾಗಿ ಮತ್ತು ಕಣ್ಣು ಮುಚ್ಚಿ 29 ಸಂಖ್ಯೆಯ ಕಾರ್ಡ್‍ಗಳನ್ನು ಗುರುತಿಸುವಿಕೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ ನಲ್ಲಿ ದಾಖಲೆ ಮಾಡಿದ್ದಕ್ಕಾಗಿ ಸಿ.ಎಂ. ಅವರು ಅಭಿನಂದಿಸಿದರು.

ಕೇಂದ್ರ ರಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಇಲಾಖೆಯ ರಾಜ್ಯ ಸಚಿವ ಭಗವಂತ ಖೂಬಾ, ಗೃಹ ಸಚಿವ ಆರಗ ಜ್ಞಾನೇಂದ್ರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮುರುಗೇಶ ಆರ್. ನಿರಾಣಿ, ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಕಲಬುರಗಿ ದಕ್ಷಿಣ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ ಶಾಸಕ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಸಂಸದ ಡಾ.ಉಮೇಶ ಜಾಧವ, ವಿಧಾನಸಭೆ ಶಾಸಕರುಗಳಾದ ಸುಭಾಷ ಆರ್. ಗುತ್ತೇದಾರ, ಬಸವರಾಜ ಮತ್ತಿಮಡು, ಡಾ. ಅವಿನಾಶ ಉಮೇಶ ಜಾಧವ ಹಾಗೂ ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದ್ರಕಾಂತ ಜಿ. ಪಾಟೀಲ (ಚಂದು ಪಾಟೀಲ), ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ. ಫಹೀಂ,ಪ್ರಾದೇಶಿಕ ಆಯುಕ್ತ ಮತ್ತು ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಕೃಷ್ಣ ಬಾಜಪೇಯಿ, ಐ.ಜಿ.ಪಿ. ಮನಿಷ್ ಖರ್ಬಿಕರ್, ಡಿ.ಸಿ.ಯಶವಂತ ವಿ. ಗುರುಕರ್, ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಎಸ್.ಪಿ.ಇಶಾ ಪಂತ್, ಜಿಲ್ಲಾ ಪಂಚಾಯತ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಜೆಸ್ಕಾಂ ಎಂಡಿ.ರಾಹುಲ ಪಾಂಡ್ವೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ ಪಾಟೀಲ, ಹೈದ್ರಾಬಾದ ಕರ್ನಾಟಕ ಪ್ರದೇಶ ಇತಿಹಾಸ ರಚನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಲಕ್ಷ್ಮಣ ದಸ್ತಿ, ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

Share and Enjoy !

Shares