ನಾವು ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇವೆನ್ನುವುದು ಮುಖ್ಯವಲ್ಲ:ಸಚಿವ ಕೋಟಾ ಶ್ರೀ ನಿವಾಸ ಪೂಜಾರಿ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ ಸಿರುಗುಪ್ಪ.ನ.೧೨:- ನಾವು ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇವೆ ಎನ್ನುವುದು ಮುಖ್ಯವಲ್ಲ, ನಾವು ನಮ್ಮ ಪ್ರಜೆಗಳಿಗಾಗಿ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ರಾಜ್ಯದ ಜನರ ಒಳಿತಿಗಾಗಿ ಕೆಲಸಮಾಡಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಹೊರವಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೧ಕೋಟಿ ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಶಾಸಕ ಎಂ.ಎಸ್.ಸೋಮಲಿಂಗಪ್ಪನವರ ಬೇಡಿಕೆಯಂತೆ ಭವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಎರಡು ಕೋಟಿ ಹಣ ಬಿಡುಗಡೆಮಾಡಲಾಗುವುದು. ಸಮಾಜದ ಜನ ಒಗ್ಗಟ್ಟಾಗಿ ನಿಂತು ಕೆಲಸಮಾಡಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಶ್ರಮದಿಂದಾಗಿ ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ದೊರೆಯಲಿ ಎನ್ನುವ ಉದ್ದೇಶದಿಂದ ದೇಶದಲ್ಲಿ ಸುಭೀಕ್ಷೆ ನೆಲೆಸಲು ಸಾಧ್ಯವೆಂದು ಸಂವಿಧಾನವನ್ನು ರಚಿಸಿ ನಮ್ಮೆಲ್ಲರಿಗೂ ನೀಡಿದ್ದಾರೆ. ಅವರ ಆಶಯದಂತೆ ನಾವು ನಮ್ಮ ಬದುಕಿನಲ್ಲಿ ನಿರ್ಲಕ್ಷೆ ತೋರದೆ ಶ್ರಮವಹಿಸಿ ಕಷ್ಟ ಪಟ್ಟು ದುಡಿದು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರೆಯಬೇಕು.
ದಲಿತರ ಹೆಸರಿನಲ್ಲಿ ಅನೇಕ ವರ್ಷಗಳ ಕಾಲ ರಾಜಕಾರಣಮಾಡಿದವರಿದ್ದಾರೆ. ತಪ್ಪೇನು ಇಲ್ಲಆದರೆ ದಲಿತರಿಗೆ ನ್ಯಾಯ ಕೊಟ್ಟಿರುವುದು ನಮ್ಮ ಸರ್ಕಾರ.
ಬಹುವರ್ಷಗಳ ಬೇಡಿಕೆಯಾದ ಮೀಸಲಾತಿ ಹೆಚ್ಚಿಸುವುದನ್ನು ನಮ್ಮ ಸರ್ಕಾರ ಈಡೇರಿಸಿದೆ. ಪ.ಜಾತಿಗೆ ಶೇ.೧೫ರಿಂದ ೧೭ ಮತ್ತು ಪ.ಪಂಗಡಕ್ಕೆ ಶೇ.೩ರಿಂದ ೭ರವರೆಗೆ ನಮ್ಮ ಸರ್ಕಾರ ಮೀಸಲಾತಿ ಹೆಚ್ಚಿಸಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಮೀಸಲಾತಿ ದೊರೆಯಬೇಕು ಎನ್ನುವ ಉದ್ದೇಶದಿಂದ ನಮ್ಮ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಿದೆ.
ಪ್ರಪಂಚವೇ ಬೆರಗಾಗಿ ನೋಡುವಂತೆ ಭಾರತ ಬದಲಾಗುತ್ತಿರುವುದಕ್ಕೆ ನಮ್ಮ ದೇಶದ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವ ಕಾರ್ಯವೈಖರಿಯೇ ಕಾರಣ. ಬಲಿಷ್ಠವಾದ ಭಾರತವನ್ನು ಕಟ್ಟುತ್ತಿರುವವರು ನಮ್ಮ ಪ್ರಧಾನಿಗಳು. ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯ. ಇತ್ತೀಚೆಗೆ ನಡೆದ ಉಕ್ರೇನ್ ಮತ್ತು ರಷ್ಯ ಯುದ್ದದಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಹಿಡಿದವರಿಗೆ ಉಕ್ರೇನ್‌ನಲ್ಲಾಗಲಿ, ರಷ್ಯದಿಂದಾಗಲಿ ಯಾವುದೇ ತೊಂದರೆಯಾಗದಂತೆ ನಮ್ಮ ದೇಶದ ವಿದ್ಯಾರ್ಥಿಗಳನ್ನು ಮತ್ತು ಇತರೆ ದೇಶದ ವಿದ್ಯಾರ್ಥಿಗಳೂ ಸುರಕ್ಷಿತವಾಗಿ ನಮ್ಮ ಮತ್ತು ಇತರೆ ದೇಶಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದನ್ನು ನಾವು ನೋಡಿದ್ದೇವೆ. ಇದಕ್ಕೆ ನಮ್ಮ ದೇಶದ ಶಕ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯೇ ಕಾರಣ
ಪ.ಜಾತಿ ಮತ್ತು ಪ.ಪಂಗಡದವರಿಗೆ ೭೫ಯುನಿಟ್ ಒಳಗೆ ಉಚಿತ ಕರೆಂಟ್ ನೀಡುತ್ತಿದ್ದೇವೆ. ಈ ಸೌಲಭ್ಯವನ್ನು ನಾಲ್ಕುವರೆ ಲಕ್ಷ ಕುಟುಂಬಗಳು ಪಡೆಯುತ್ತಿವೆ. ವಾರ್ಷಿಕವಾಗಿ ೮೨೦ಕೋಟಿ ಖರ್ಚಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಎಂ.ಎಸ್.ಸೋಮಲಿಂಗಪ್ಪ, ಸಚಿವ ಬಿ.ಶ್ರೀರಾಮುಲು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ, ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ತಾ.ಪಂ.ಇ.ಒ. ಎಂ.ಬಸಪ್ಪ, ನಗರಸಭೆ ಅಧ್ಯಕ್ಷ ಕೆ.ಸುಶೀಲಮ್ಮ ವೆಂಕಟರಾಮರೆಡ್ಡಿ, ಬಸವ ಬಳಗದ ಬಸವಭೂಷಣ ಸ್ವಾಮೀಜಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ವಿವಿದ ಸಂಘಟನೆಯ ಮುಖಂಡರು
ಸಾರ್ವಜನಿಕರು ಇದ್ದರು.

Share and Enjoy !

Shares