ಇಂಫ್ಯಾಕ್ಟ್ -ಡಿ ಎಫೆಕ್ಟ್ ಮತ್ತೆ ಸಾಲದ ಸುಳಿಯಲ್ಲಿ ರೈತ ?
ವಿಜಯನಗರವಾಣಿ ಸುದ್ದಿ
ಕುರುಗೋಡು.
ಕುರುಗೋಡು ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂಫ್ಯಾಕ್ಟ್ – ಡಿ ಎನ್ನುವ ಕಳಪೆ ಕ್ರಿಮಿನಾಶಕವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಅಂಗಡಿಗಳ ವಿರುದ್ಧ ರೈತರು ದಿಢೀರ್ ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ಜರುಗಿತು.
ಈ ಸಂದರ್ಭದಲ್ಲಿ ನೂರಾರು ರೈತರು ತಹಶಿಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ, ಅಂಗಡಿ ಮಾಲಿಕರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಇಂಪ್ಯಾಕ್ಟ್ ಡಿ ಎನ್ನುವುದು ಬಯೋ ಔಷಧವಾಗಿದ್ದು ಇದನ್ನು ಕುರುಗೋಡು ಸೇರಿದಂತೆ ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ಬೆಳೆಯುವ ಮೆಣಸಿನಕಾಯಿ ಬೆಳೆಯ ಮುದುರು ಹಾಗೂ ಚಿಗುರು ಕಾಪುಗೆ ಸಿಂಪಡಿಸುವ ಔಷಧವೆಂದು ಅಂಗಡಿಯ ಮಾಲಿಕರು ನೀಡಿದ್ದಾರೆ.
ಇಂಪ್ಯಾಕ್ಟ್ – ಡಿ ಔಷಧಿಯ ಕಾಲು ಲೀಟರ್ ನ ಬೆಲೆ 1150 ರೂಪಾಯಿ ಅರ್ಧ ಲೀಟರ್ಗೆ 1750 ರೂ , ಒಂದು ಲೀಟರ್ ಗೆ 3800 ರೂ ನಿಗದಿ ಪಡಿಸಿ ಮಾರಾಟ ಮಾಡಲಾಗಿದೆ.
ಈ ಔಷಧ ಹೊಡೆದ ರೈತರ ಬೆಳೆಗಳು ಬಿಳಿ ಬಣ್ಣಕ್ಕೆ ತಿರುಗಿದ್ದು ರೈತ ಕಂಗಾಲಾಗಿದ್ದಾನೆ.ಇದರಿಂದಾಗಿ ಸಾವಿರಾರು ಹೆಕ್ಟರ್ ಪ್ರದೇಶ ನಾಶವಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಸಮೀಪದ ಕೋಳೂರು ಗ್ರಾಮದಲ್ಲಿನ ಏಜೆನ್ಸಿಯೊಂದು
ಇದೇ ಔಷಧಿಯನ್ನು
ಮೊದಲು 3000 ರೂ ಪಡೆದು ಆ ನಂತರ ಕೇವಲ 300 ರೂಪಾಯಿಯಂತೆ ಮಾರಿದ್ದಾರೆ.
ಉಳಿದ ಹಣವನ್ನು ರೈತರಿಗೆ ಮರಳಿ ನೀಡಿದ್ದಾರೆ. ಆದರೆ ಇಲ್ಲಿ ಹಣ ನೀಡದೇ ಅಂಗಡಿಗಳ ಮಾಲಿಕರು ಮೋಸ ಮಾಡುತ್ತಿದ್ದಾರೆ ಅಲ್ಲದೇ ಬೆಳೆಯೂ ಹಾಳಾಗಿದೆ ಎಂದು ರೈತರು ಆಪಾದಿಸಿದರು.
ಇನ್ನೂ ಕುರುಗೋಡಿನ 7 ಏಜನ್ಸಿ ಗಳು ಇವುಗಳನ್ನು ಮಾರಾಟ ಮಾಡಿದ್ದು
ಬಸವಜ್ಯೋತಿ ಏಜೆನ್ಸಿ, ನಂದಿ ಟ್ರೇಡರ್ಸ, ವೆಂಕಟೇಶ್ವರ ಫರ್ಟಿಲೈಜರ್ಸ,ಲಕ್ಷೀ ವೆಂಕಟೇಶ್ವರ,ಗಾದಿಲಿಂಗೇಶ್ವರ ಟ್ರೇಡರ್ಸ ಏಜೆನ್ಸಿಗಳು ಮಾರಾಟ ಮಾಡಿವೆ.
ಇನ್ನೂ ಈ ಕುರಿತು ರೈತರು ತಹಶಿಲ್ದಾರ್ ಬಳಿ ತಮಗಾದ ಅನ್ಯಾಯದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಡಿ ಯೋಗೇಶ್ ರವರು, ಅನ್ಯಾಯಕ್ಕೆ ಒಳಗಾದ ರೈತರು ಖರೀದಿಸಿದ ಔಷಧಿಯ ಬಿಲ್ ಸೇರಿದಂತೆ ದಾಖಲೆಗಳನ್ನು ನಮಗೆ ನೀಡಿದರೆ ವಿಜ್ಞಾನಿಗಳನ್ನು ಕರೆಸಿ ಬೆಳೆ ಹಾಳದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳತ್ತೇವೆ ಎಂದರು.
ಅಗ್ರಿ ಕಲ್ಚರಲ್ ಎ.ಡಿ ದಯನಂದ್ ಮಾತನಾಡಿ ನಾಳೆಯೇ ಬೆಳೆ ಹಾಗೂ ಈ ಔಷಧೀಯ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಿ ಪರೀಕ್ಷಿಸುತ್ತೇವೆ ಹಾಗೊಂದು ವೇಳೆ ನಕಲಿ ಎಂದು ಕಂಡು ಬಂದರೆ ಕೋರ್ಟ್ ನಲ್ಲಿ ಕೇಸ್ ದಾಖಲಿಸುತ್ತೇವೆ ಎಂದರು.ಆದರೂ ಅದಕ್ಕೆ ಜಗ್ಗದ ರೈತರು ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.
ನಂತರ ಮಾತನಾಡಿದ ತಹಶಿಲ್ದಾರ್ ರಾಘವೇಂದ್ರ ರಾವ್ ರೈತರಿಗೆ ಸಮಾಧಾನ ಪಡಿಸಿ ನಾಳೆಯ ಎಲ್ಲಾ ಏಜೆಸ್ಸಿಗಳ ಮಾಲಿಕರ ಹಾಗೂ ಸಂಘದವರ ಸಭೆ ಕರೆದು ಚರ್ಚಿಸಿ ನಂತರ ಕ್ರಮ ಕೈಗೊಳ್ಳತ್ತೇನೆ ಎಂದು ತಿಳಿಸಿದರು. ಇದಕ್ಕೆ ರೈತರಿಗೂ ಮುಕ್ತ ಆಹ್ವಾನ ನೀಡಿದ್ದಾರೆ.
*ಹೇಳಿಕೆ 1*
ಐದು ಎಕ್ಕರೆ ಹೊಲದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದೇನೆ ಸಸಿಗೆ ಮುದುರು,ಚಿಗುರು ಹೆಚ್ಚಾಗಲು ಇಂಪ್ಯಾಕ್ಟ್ ಡಿ ಔಷಧವನ್ನು ಸಿಂಪಡಿಸಿದ್ದೇನೆ.ಬೆಳೆ ಬಿಳಿ ಬಣ್ಣಕ್ಕೆ ತಿರುಗಿದ್ದು,ಹೂ ಕಾಪು ಉದುರುತ್ತಿದೆ.
ಸಂಪೂರ್ಣ ನಷ್ಟ ಉಂಟಾಗಿದೆ ಬೆಳೆ ಕೈಗೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ,ಲೀಟರ್ ಗೆ 3600 ರೂಪಾಯಿ ತೆಗೆದುಕೊಂಡಿದ್ದಾರೆ.
ಶಿವಮೂರ್ತಿ. ರೈತ
ಬಾದನಹಟ್ಟಿ.
*ಹೇಳಿಕೆ 2*
ನನ್ನ ಐದು ಎಕ್ಕರೆ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಗೆ ಇಂಪ್ಯಾಕ್ಟ್ – ಡಿ ಔಷಧ ಸಿಂಪಡಿಸಿದ್ದೇನೆ ಇದರ ಪರಿಣಾಮ ಬೆಳೆ ನಷ್ಟವಾಗಿದೆ, ಮುದುರು ಬಂದು ಒಣಗಿದೆ. ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ.
ಮದಿರೆ ದೊಡ್ಡ ಬಸಪ್ಪ
ಮದಿರೆ ಗ್ರಾಮ.
*ಹೇಳಿಕೆ -3*
ಇದೊಂದು ಬಯೋ ಕಂಪನಿಯ ಔಷಧವಾಗಿದ್ದು ಇದಕ್ಕೆ ಐಎಸ್ಐ ಚಿಹ್ನೆ ಸೇರಿದಂತೆ ಸರ್ಕಾರದ ಪರವಾನಿಗೆ ಇಲ್ಲ , ಇದೊಂದು ದೊಡ್ಡ ದಂಧೆಯಾಗಿದ್ದು ಅಂತರಾಜ್ಯ ಮಾರುಕಟ್ಟೆಯ ಜಾಲ ಹೊಂದಿದೆ ಇದು ಆಂದ್ರದ ಗುಂಟೂರುನಲ್ಲಿ ತಯಾರಿಸಿದ್ದಾರೆ.ಮತ್ತು ಕರ್ನಾಟಕದಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದ್ದು ಇದು ನಕಲಿ ಎಂದು ತಿಳಿದಿದ್ದರೂ ಇದನ್ನು ತಡೆಗಟ್ಟಲು ಕೃಷಿ ಇಲಾಖೆ,
ಸರ್ಕಾರ ಸಂಪೂರ್ಣ ವಿಫಲವಾಗಿದ್ದು,
ಇದರಿಂದ ಬೆಳೆ ನಷ್ಟವಾಗಿ ರೈತರ ಆತ್ಮಹತ್ಯೆ ಹೆಚ್ಚಳವಾಗುತ್ತಿದೆ.
ಶಿವಶಂಕರ್
ರೈತ ಮುಖಂಡ ಕುರುಗೋಡು.