ಅಲ್ಲಮತನದ ಶರಧಿಯಳೊಂದು ಹನಿ

Share and Enjoy !

Shares
Listen to this article

ಕಾಲುಗಳೆರಡೂ ಗಾಲಿ ಕಂಡಯ್ಯ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
ಬಂಡಿಯ ಹೊಡೆವರೈವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದರಿಚ್ಚೆಯರಿದು ಹೊಡೆಯದಿದ್ದರೆ
ಅದರಚ್ಚು ಮುರಿಯಿತ್ತು ಗುಹೇಶ್ವರ.
ಮಾನವ ಪ್ರಾಣಿ ವರ್ಗಕ್ಕೆಸೇರಿದವ, ಅವನ ಮೃಗೀಯ ಗುಣವನ್ನು ಸಂಯಮಿಸಿ ಸಂಸ್ಕರಿಸಿ ಜೀವಿಯಾಗಬೇಕೆನ್ನುವುದು ಎಲ್ಲ ತತ್ವಗಳ ಸಾರ. ಜೀವಿಯು ಸಹಕಾರವನ್ನು,ಸಹ ಜೀವನವನ್ನು ಅಳವಡಿಸಿಕೊಳ್ಳುವುದರ ಮೂಲಕ ಜೀವ ನಾಗುತ್ತಾನೆ, ಆ ಜೀವನು ತನ್ನ ಸೂಕ್ಷö್ಮ ಶರೀರದ ಹೊರಮೈಗೆ ಬೇಕಾದ ಬುದ್ದಿ,ಜ್ಞಾನ ಮತ್ತು ವಿಜ್ಞಾನಗಳನ್ನು ಬಳಸಿಕೊಂಡು ದಷ್ಟ ಪುಷ್ಠ ಶರೀರವನ್ನು ಏರ್ಪಡಿಸಿಕೊಂಡು,ಬದುಕುವುದು ಕಲಿಯುತ್ತಾನೆ.ಒಳಮೈಯಾದ ಮನಸ್ಸು-ಭಾವಗಳು ಫ್ರಫುಲ್ಲವಾಗಿಸಿಕೊಂಡು ತೃಪ್ತಿದಾಯಕ ಅಖಂಡ ಜೀವನವೊಂದನ್ನು ಭಾವಿಸುವ ಮತ್ತು ಅನುಭಾವಿಸುವ ಪಥದಲ್ಲಿ ಸಾಗಬೇಕು.ಮಾನವ ಮಹಾದೇವನಾಗಬೇಕು, ವಚನಕಾರರು ದೇಹವನ್ನು ಮೂರು ವಿಧಗಳಲ್ಲಿ ತಿಳಿಸುತ್ತಾರೆ ಮೊದಲನೆಯದು ಸ್ಥೂಲ ಶರೀರ, ಎರಡನೆಯದು ಸೂಕ್ಷö್ಮ ಶರೀರ ಮೂರನೆಯದು ಕಾರಣ ಶರೀರ.ಈ ಮೂರು ವಿಧದ ದೇಹದ ಹಂತಗಳು/ವಿಧಗಳಲ್ಲಿ ಮೊದಲ ವಿಧ ಸ್ಥೂಲ ಶರೀರವು ಪಂಚೇಂದ್ರಿಯಗಳ ಹಿಡಿತದಲ್ಲಿರುತ್ತದೆ,ಅದಕ್ಕೆ ಮೊದಲು ಅವಗಳನ್ನರಿಯ ಬೇಕು ಎನ್ನುತ್ತಾರೆ ಅಲ್ಲಮ ಪ್ರಭುಗಳು.ಅದಕ್ಕಾಗಿ ಈ ಮಾನವ ಮಹಾದೇವನಾಗುವ ಪ್ರಯಾಣದಲ್ಲಿ ದೇಹವನ್ನು ಬಂಡಿಗೆ ಹೋಲಿಸಿದ್ದಾರೆ ಅಲ್ಲಮ ಪ್ರಭುಗಳು. ನಮ್ಮೆರಡು ಕಾಲುಗಳನ್ನು ಗಾಲಿಗಳಿಗೆ ಹೋಲಿಸುತ್ತಾ..ಈ ದೇಹವು ತುಂಬಿದ ಬಂಡಿ ಎನ್ನುತ್ತಾರೆ.ಈ ಬಂಡಿ ವಿಷಯಗಳ ಸರಕು ತುಂಬಿದ ಬಂಡಿಯಗಿದೆ, ಈ ಬಂಡಿಯನ್ನು ಹೊಡೆಯುವವರು ಐದು ಮಂದಿ,ಅವರೇ ನಮ್ಮ ಪಂಚೇಂದ್ರಿಯಗಳು. ಕಣ್ಣು, ನಾಲಿಗೆ, ಕಿವಿ, ಮೂಗು ಮತ್ತು ಚರ್ಮ ಇವು ಒಂದಕ್ಕಿಂತ ಒಂದು, ತಾ ಮುಂದು ನಾ ಮುಂದು ಎಂದು ವಿಷಯ ವಾಸನೆಗಳಿಗೆ ಹೋರಾಡುತ್ತಿವೆ. ಇವುಗಳಲ್ಲಿ ಯಾರೂ ಕಡಿಮೆ ಇಲ್ಲ. ಒಬ್ಬರಿಗೊಬ್ಬರು ಸಮವಿಲ್ಲಯ್ಯ. ಜೀವನದ ಎಲ್ಲ ಆಗುಹೋಗುಗಳಿಗೆ ಈ ಪಂಚೇಂದ್ರಿಯೆಗಳೇ ಕಾರಣ. ಈ ಬಂಡಿ ಸಾಗಿಸುವ ಪಂಚೇಂದ್ರಿಯಗಳೇ ಆ ಬಂಡಿಯಲ್ಲಿ ತುಂಬುವ ಸರಕುಗಳಿಗೆ ಕಾರಣವಾಗುತ್ತವೆ, ಮಾತ್ರವಲ್ಲ ಆ ಬಂಡಿಯನ್ನು ಎಳೆಯುವುದೂ ಅವೆ.ಅದಕ್ಕೆ ಅಲ್ಲಮ ಹೇಳುತ್ತಾರೆ, ಅದರ ಇಚ್ಚೆಯ ಅರಿತು ಹೊಡೆಯದಿದ್ದರೆ, ಅದರಚ್ಚು ಮುರಿಯಿತ್ತು.. .. ಬಂಡಿಯ ಎರಡು ಗಾಲಿಗಳನ್ನು ಜೋಡಿಸುವ ನಡುವಿನ ರಾಡ್ ಅಂದರೆ ಅಚ್ಚು ಮುರಿಯುತ್ತದೆ ಎನ್ನುತ್ತಾರೆ.ಅಂದರೆ ಇಂದ್ರಿಯಗಳನ್ನು ಅರಿತು ಅವುಗಳನ್ನು ಸರಿದಾರಿಗೆ ತರಿಸಿಕೊಳ್ಳದೆ ಮುನ್ನಡೆದರೆ ಬದುಕು ಕಷ್ಟದ ಕೂಪಕ್ಕೆ ಬೀಳುತ್ತದೆ ಎನ್ನುತ್ತಾರೆ.ಅಚ್ಚು ಮುರಿದರೆ ಬಂಡಿ ಮುಂದೆ ಸಾಗಲಸಾಧ್ಯ.. ಹಾಗೆಯೆ ಪಂಚೇಂದ್ರಿಯಗಳು ನಮ್ಮ ಹಿಡಿತದಲ್ಲಿಲ್ಲದಿದ್ದರೆ ಮನುಷ್ಯ ಮಹಾದೇವ ಅಥವಾ ಮಾಧವನಾಗಲಸಾಧ್ಯ. ವಚನಕಾರರು ಪಂಚೇಂದ್ರಿಯಗಳನ್ನು ಮತ್ತು ಅರಿಷಡ್ವರ್ಗಗಳನ್ನು ದೂಷಿಸದೆ ಅವುಗಳನ್ನು ಸಂಸ್ಕರಿಸುವ ಬಗ್ಗೆ ಹೇಳುತ್ತಾರೆ.ಉದಾಹರಣೆಗೆ ಕಣ್ಣು ಇರುವುದು ನೋಡಲಿಕ್ಕೆ ನೋಡಬೇಕು ಆದರೆ ನೋಡಿದ್ದೆಲ್ಲವೂ ನನಗೆ ಬೇಕೆನ್ನುವ ಧೋರಣೆ ಅಪಾಯಕಾರಿ, ಸೀತಾ ಮಾತೆ ಮಾಯ ಜಿಂಕೆ ನೋಡಿದ್ದು ಸರಿ ಅದು ಬೇಕೆಂದು ಬಯಸಿದ್ದು ಮುಂದಿನ ರಾಮಾಯಣ್ಣಕ್ಕೆ ಕಾರಣವಾಯಿತು, ರಾವಣ ಸೀತೆಯನ್ನು ನೋಡಿದ್ದು ಸರಿ ಆದರೆ ಬೇಕೆಂದು ಕೊಂಡದ್ದು ಅವಸಾನಕ್ಕೆ ಕಾರಣವಾಯಿತು. ಇಲ್ಲಿ ಎಂಥದ್ದನ್ನು ಬಯಸಿದರೆ ಎಂತಹ ಸಮಸ್ಯೆ ಬರಬಲ್ಲದೆಂದು ಅರ್ಥವಾಗುತ್ತದೆ. ಪಂಚೇಂದ್ರಿಯಗಳು ಜ್ಞಾನದ ಕಿಡಕಿಗಳು ನಿಜ ಆದರೆ ಪಡೆದ ಜ್ಞಾನವು ವಿಜ್ಞಾನವಾಗಬೇಕು ಮತ್ತು ಜ್ಞಾನವನ್ನು ವಿವೇಚನೆಗೆ ಒಳಪಡಿಸಬೇಕು ಅದೇ ಬುದ್ದಿವಂತಿಕೆ. ಇದು ತಪ್ಪಿದರೆ ಬದುಕು ಹದ ತಪ್ಪುತ್ತದೆ. ಅದಕ್ಕೆ ಅಲ್ಲಮ ಪ್ರಭುಗಳು ಹೇಳುತ್ತಾರೆ ನಮ್ಮ ಪಂಚೇಂದ್ರಿಯಗಳೆಲ್ಲವೂ ಒಂದಕ್ಕಿಂತ ಒಂದು ಬಲಿಷ್ಠ, ಅವಗಳ ಇಚ್ಚೆಯೂ ವಿಭಿನ್ನ ಒಂದು ಬಯಸಿದರೆ ಮತ್ತೊಂದರ ಮೇಲೆ ಪ್ರಭಾವ ಬೀರುತ್ತವೆ ಮಾತ್ರವಲ್ಲ ಮತ್ತೊಂದು ಬಳಸಿಕೊಳ್ಳತ್ತದೆ.ಅದಕ್ಕಾಗಿ ಅವುಗಳ ಇಚ್ಚೆ ಅಂದರೆ ಅವುಗಳ ಸ್ವಭಾವ ಅರಿತು ನಾವು ಹೆಚ್ಚರಿಕೆಯಿಂದ ಅವುಗಳ ನಡುವೆ ಸಮತೆ ತಂದು ಮುನ್ನಡೆಸ ಬೇಕೆನ್ನುತ್ತಾರೆ ಅಲ್ಲಮ ಪ್ರಭುಗಳು.
ಗೊಗ್ಗಯ್ಯನನ್ನು ಮೊದಲಬಾರಿಗೆ ಭೇಟಿಮಾಡಿದ ಅಲ್ಲಮ ಹೇಳುತ್ತಾರೆ
ತನುವ ತೋಟವಮಾಡಿ,
ಮನವ ಗುದ್ದಲಿ ಮಾಡಿ,
ಅಗೆದು ಕಳೆದೆನಯ್ಯ ಭ್ರಾಂತಿನ ಬೇರೊಡೆದು
ಸಂಸಾರ ಹೆಂಟೆಯ ಬಗಿದು
ಬಿತ್ತಿದೆನಯ್ಯಾ ಬ್ರಹ್ಮ ಬೀಜವ!
ಅಖಂಡಮಂಡಲವೆಂಬ ಭಾವಿ
ಪವನವೇ ರಾಟಾಳ
ಸುಷುಮ್ನ ನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸನಗೆಡೆಸಿಹರೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ
ಆವಾಗಳೂ ಆ ತೋಟದೊಳಗೆ ಜಾಗರವಿದ್ದು
ಈ ಸಸಿಯ ಸಲಹಿದೆ ಕಾಣ ಗೋಗೇಶ್ವರ.-ಎನ್ನುತ್ತಾರೆ ಅಲ್ಲಮ ಪ್ರಭುಗಳು.ರೈತನಾದ ಗೋಗೇಶ್ವರನಿಗೆ ಅವನಿಗೆ ಅರ್ಥವಾಗು ಭಾಷೆಯಲ್ಲೆ ಸಾಧನೆಯ ದಾರಿಯ ಬಗ್ಗೆ ಹೇಳುತ್ತಾರೆ.ಇಲ್ಲಿಯೂ ದೇಹವೆಂಬ ತೋಟದಲ್ಲಿ ಮನಸ್ಸೆಂಬ ಗುದ್ದಲಿ, ವೈಚಾರಿಕತೆ/ವಿವೇಕದಿಂದ ಸಂಸಾರವೆಂಬ ಹೆಂಟೆಯನ್ನು ಮಣ್ಣು ಮಾಡಿ, ಜ್ಞಾನವೆಂಬ ಬೀಜ ಬಿತ್ತಿ, ಭಾವಿಯ ನೀರು ಹಾಯಿಸಿ ಬಸವಗಳೈವರು ಅಂದರೆ ಪಂಚೇಂದ್ರಿಯಗಳು ತೊಂದರೆ ಕೊಡದಿರಲೆಂದು ಸಮತೆ, ಸೈರಣೆ ಎಂಬ ಬೀಲಿಯನಿಕ್ಕಿ ಹಗಲಿರಳಿದ್ದು ಕಾಯುವೆ ಎನ್ನುತ್ತಾರೆ.ಹೀಗೆ ಅಲ್ಲಮ ಪ್ರಭುಗಳು ದೇಹವನ್ನು ದೇವಾಲಯ ಮಾಡಿಕೊಳ್ಳುವ ಬಗೆಯನ್ನು ನಮಗೆ ಸುಲಭವಾಗಿ ತಿಳಿ ಹೇಳುತ್ತಾರೆ. ಆಗ ಹೃದಯವೆಂಬ ಗುಹೆಯಲ್ಲಿ ಶಿವನಿರುತ್ತಾನೆ, ಆತನೆ ಗುಹೇಶ್ವರ ಎನ್ನುತ್ತಾರೆ.
ಡಾ|| ಯು.ಶ್ರೀನಿವಾಸ ಮೂರ್ತಿ
ಸಾಹಿತಿಗಳು, ಉಪನ್ಯಾಸಕರು
“ವಿಚಾರಕುಟೀರ” ರಾಮನಗರ ೧ನೇ ಕ್ರಾಸ್
ಹವಂಬಾವಿ,ಬಳ್ಳಾರಿ
ಫೋ:೯೭೩೧೦೬೩೯೫೦ ಪ್ರತಿಕ್ರಿಯಿಸಿ

Share and Enjoy !

Shares