ಆಕಾಶವೆಂಬ ಅಕ್ಕರೆಯ ಶಾಲೆ

Share and Enjoy !

Shares
Listen to this article

ರಾತ್ರಿ ಮನೆಯ ಮೆಲ್ಚಾವಣೆ ಮೇಲೆ ಮಲಗಿ ಆಕಾಶವನ್ನು ನೋಡುತ್ತಾ ,ಅಸಂಖ್ಯಾತವಾಗಿ ಕಾಣುವ ನಕ್ಷತ್ರಗಳನ್ನು ಮತ್ತು ಅನಂತವಾದ ಆಕಾಶ ಕಂಡು ಹಲವಾರು ಗಾದೆಮಾತುಗಳು ಮತ್ತು ನುಡಿಗಟ್ಟುಗಳು ಹುಟ್ಟಿಕೊಂಡ ವು. ಅಲ್ಲಿರುವ ಚಂದಿರ , ನಕ್ಷತ್ರಗಳು,ಆಗಾಗ ಕಾಣುವ ಉಲ್ಕೆಗಳು,ಹಾಲುಹಾದಿ ಎಂದೋ ಒಮ್ಮೆ ಕಾಣುವ ಧೂಮಕೇತುಗಳು  ಮಕ್ಕಳನ್ನು ,ಯುವಕರನ್ನು ಊಹಾಲೋಕ್ಕಕ್ಕೊಯ್ಯುವ ಸಾಮರ್ಥ್ಯ ಆಕಾಶಕ್ಕಿದೆ.ಮಾತ್ರವಲ್ಲದೆ ಜ್ಯೋತಿಷ್ಯದ ಮಾತಿನ ವ್ಯಾಪ್ತಿಗೆ ವಿಸ್ತಾರವನ್ನು ಹೆಚ್ಚಿಸಿವೆ -ನಮ್ಮ ಆಕಾಶ ಮತ್ತು ಆಕಾಶ ಕಾಯಗಳು.ಪಾಠ ಪಠ್ಯದಲ್ಲಿ ಅಧ್ಯಯನ ಮಾಡುವ ಆಕಾಶ ಕಾಯಗಳನ್ನು ನಾವು ನಮ್ಮ ಮಾಳಿಗೆಯಿಂದಲೇ ನೋಡಬಹುದು.ವಿಶೇಷವಾಗಿ ಡಿಸೆಂಬರ್-ಜನವರಿ ತಿಂಗಳಲ್ಲಿ ಆಕಾಶವನ್ನು ಬರಿಗಣ್ಞಿನಿಂದನೋಡಿ ಆನಂದ ಪಡಬಹುದು ಅಲ್ಲದೆ ಜ್ಞಾನವನ್ನು ಪಡೆಯ ಬಹುದು.

ನಾವು ಆಕಾಶವನ್ನು ಅಧ್ಯಯನ ಮಾಡಬೇಕೆಂದರೆ ವೈಜ್ಞಾನಿಕವಾಗಿ ಕೆಲವು ವಿಧಾನಗಳಿವೆ.ಆದರೆ ಸುಲಭವಾಗಿ ನಾವು ಆಕಾಶದ ಬಗ್ಗೆ ಅರಿಯಲು ಈ ಕೆಳಗೆ ಸೂಚಿಸಿದ ನಿಯಮಗಳನ್ನು ಪಾಲಿಸುತ್ತಾ ವೀಕ್ಷಿಸ ಬಹುದು.ಮೊದಲನೆಯದಾಗಿ ಆಕಾಶದಲ್ಲಿ ಮಿಣುಕುತ್ತಾ ಮತ್ತು ಹೊಳೆಯುತ್ತಾ ಕಾಣುವ ಕಾಯಗಳನ್ನು ನಕ್ಷತ್ರಗಳೆಂದು ಕರೆಯುತ್ತಾರೆ.ಕೇವಲ ಹೊಳೆಯುತ್ತಾ ಕಾಣುವವು ಗ್ರಹಗಳು.ಆಕಾಶವೀಕ್ಷಣೆ ಸೌಂದರ್ಯ ಅಭಿರುಚಿಯಿಂದ ಆರಂಭವಾದ ಪ್ರಕ್ರಿಯೆ ಅದು ಮುಂದುವರೆದು ವೈಚಾರಿಕ ಮನಸ್ಸಿಗೆ ಕೌತುಕ,ಹೊಸದನ್ನು ಕಂಡು ಹಿಡಿಯ ಬೇಕೆಂಬ ಹಂಬಲ ಅನೇಕ ಪ್ರಶ್ನೆಗಳು ಹುಟ್ಟು ಹಾಕಿದವು.ಇವು ಖಗೋಳಶಾಸ್ತ್ರದ ಉದಯಕ್ಕೆ ದಾರಿಯಾಯಿತು.
ರಾತ್ರಿಯ ಆಕಾಶ ಪ್ರಕೃತಿಯ ಪುಸ್ತಕ,ವಿಶ್ವದ ರಹಸ್ಯಗಳೆಲ್ಲ ಈ ಪುಸ್ತಕದಲ್ಲಿವೆ.ಇದನ್ನು ಓದಲು ಕಲಿತವನಿಗೆ ಜ್ಞಾನದ ಸಾಮ್ರಾಜ್ಯವೇ ಸಿಗುತ್ತದೆ.
ಯಾವುದೇ ಭಾಷೆಯ ಪುಸ್ತಕವನ್ನು ಓದಬೇಕಾದರೆ ಆ ಭಾಷೆಯ ಅಕ್ಷರಗಳನ್ನು ಕಲಿಯಬೇಕು.ಹಾಗೆಯೆ ಈ ಆಕಾಶ ಎಂಬ  ಪುಸ್ತಕವನ್ನು ಓದಬೇಕಾದರೆ ಮೊದಲು ನಕ್ಷತ್ರ ಪುಂಜಗಳ ಪರಿಚಯವನ್ನು ಮಾಡಿಕೊಳ್ಳಬೇಕು ನಕ್ಷತ್ರ ಪುಂಜ ಎಂದರೆ ,ಆಕಾಶದ ಒಂದು ಪ್ರದೇಶದಲ್ಲಿನ ನಕ್ಷತ್ರಗಳನ್ನು ಕಾಲ್ಪನಿಕ ರೇಖೆಗಳಿಂದ ಸೇರಿಸಿದಾಗ ವೈವಿದ್ಯಮಯವಾದ ಆಕೃತಿಗಳು ಏರ್ಪಡುತ್ತವೆ ಅದನ್ನೇ  ನಕ್ಷತ್ರ ಪುಂಜ ಎಂದು ಕರೆಯುತ್ತಾರೆ.ಪ್ರತಿಯೊಂದು ನಕ್ಷತ್ರ ಪುಂಜವು ಆಕಾಶದ ಒಂದು ನಿರ್ಧಿಷ್ಟ ಕ್ಷೇತ್ರವನ್ನು ಪ್ರತಿನಿದಿಸುತ್ತವೆ.ನಾವು ಭೂಗೋಳವನ್ನು ಅಭ್ಯಾಸ ಮಾಡಬೇಕಾದರೆ ಖಂಡಗಳು,ಸಾಗರಗಳು ಮತ್ತು ದೇಶಗಳೆಂದು ಹೆಸರಿಟ್ಟು ಅಧ್ಯಯನ ಮಾಡುತ್ತೇವೆಯೋ ಹಾಗೆ ಖಗೋಳವನ್ನು ಅಧ್ಯಯನ ಮಾಡಲು ನಕ್ಷತ್ರಪುಂಜ ಗಳು ನೆರವಾಗುತ್ತವೆ.ಸಾವಿರಾರು ವರ್ಷಗಳಿಂದ ಬ್ಯಾಬಿಲೋನಿಯನ್ನರು,ಗ್ರೀಕರು,ಚೀನೀಯರು ಮತ್ತು ಭಾರತೀಯರು ಆಕಾಶವನ್ನು ವೀಕ್ಷಣೆ ಮಾಡುತ್ತಾ ಬಂದಿದ್ದಾರೆ.ಪ್ರತಿಯೊಂದು ದೇಶದವರು ತಮ್ಮದೇ ಆದ ಸಂಸ್ಕೃತಿಯ ಮತ್ತು ನಂಬಿಕೆಗಳ ಆಧಾರವಾಗಿ ಆಕಾಶವನ್ನು ಅರ್ಥೈಸಿದ್ದಾರೆ.ನಕ್ಷತ್ರಪುಂಜ ಗಳ ಆಕೃತಿಯಲ್ಲಿ ತಮ್ಮ ಅನುಭವಕ್ಕೆ ನಿಲುಕಿದ ಮಟ್ಟಿಗೆ ತಮ್ಮ ಪುರಾಣ ಪುರುಷರ,ಮಹಾಕಾವ್ಯಗಳ ನಾಯಕರ,ವ್ಯವಸಾಯದ ಉಪಕರಣಗಳ ಮತ್ತು ಬೇಟೆಯ ವಿಚಾರ ಆಕಾರ ಹೆಸರುಗಳು ಕಂಡು ಬರುತ್ತವೆ.ಹೀಗಾಗಿ ಆಕಾಶ ಒಂದು ಕಥೆಯ ಪುಸ್ತಕವೂ ಹೌದು ಮಾತ್ರವಲ್ಲ ಅದಕ್ಕೆ ಸಾಂಸ್ಕೃತಿಕ ಆಯಮವೂ ಇದೆ.ಇರಲಿ….
ನಾವೀಗ ಒಮ್ಮೆ ಆಕಾಶ ಪಯಣ ಆರಂಭಿಸೋಣ..
ಸಂಜೆ ಸೂರ್ಯಾಸ್ತವಾದ ತಕ್ಷಣ ನಾವು ಪಶ್ಚಿಮದ ದಿಕ್ಕಿಗೆ ನಮ್ಮ ಸಹಜ ನೋಟಕ್ಕಿಂತ ಸ್ವಲ್ಪ ತಲೆ ಮೇಲಕ್ಕೆ ಎತ್ತಿ ನೋಡಿದರೆ ತುಂಬಾ ಹೊಳೆಯುತ್ತಾ ಕಾಣುವ ಆಕಾಶ ಕಾಯ ಶುಕ್ರ ಗ್ರಹ.ಅದು ಸಮಯ ಕಳೆದಂತೆಲ್ಲ ಸೂರ್ಯ ಅಸ್ತಮಿಸಿದ ಹಾದಿಯಲ್ಲಿ ಅಸ್ತಮವಾಗುತ್ತದೆ.ಇದರ ಅರ್ಥ ಹಗಲೆಲ್ಲ ಅದು ಆಕಾಶದಲ್ಲಿತ್ತು,ಸೂರ್ಯನ ಪ್ರಭಾವದಿಂದ ಅದು ಕಾಣುತ್ತಿರಲಿಲ್ಲ. ಇದೇ ಶುಕ್ರ ಗ್ರಹ ಬೆಳಿಗ್ಗೆ  ಸುಮಾರು 3.30 ರ ಸುಮಾರಿಗೆ ಉದಯವಾಗುತ್ತದೆ ಹಾಗೆ ಉದಯಿಸಿದ ಅದು ಸಮಯ ಕಳೆದಂತೆಲ್ಲ ಸೂರ್ಯನಿಗಿಂತ ಮುಂಚೆ ಮೇಲೇರುತ್ತಾ ಬರುತ್ತದೆ.ಸೂರ್ಯನ ಪ್ರಭಾವದಿಂದ ನಂತರ ನಮಗೆ ಕಾಣುವುದಿಲ್ಲ.2012 ರಲ್ಲಿ ಈ ಶುಕ್ರ ಗ್ರಹ ಬೆಳಿಗ್ಗೆ 8ರಿಂದ 9ರ ಸುಮಾರಿಗೆ ಸೂರ್ಯನಿಗೆ ಅಡ್ಡವಾಗಿ ಬಂದಿತು.ಇದನ್ನು ಶುಕ್ರಗ್ರಹಣ ಎಂದು ಕರೆದರು.ಅದು ಸೂರ್ಯ ನ ಮೇಲೆ ಕಡಲೆ ಕಾಳಿನಷ್ಟು ಕಪ್ಪಾದ ಬಣ್ಣದಲ್ಲಿ ಕಾಣಿಸಿತು.
ಮತ್ತೆ ನಾವೀಗ ಊರಾಚೆ ನಿಂತು ಉತ್ತರ ದಿಕ್ಕಿಗೆ ಮುಖಮಾಡಿ ನಮ್ಮ ದೃಷ್ಟಿಯ ನೇರಕ್ಕೆ ದಿಗಂತದತ್ತ (ಆಕಾಶ ಮತ್ತು ಭೂಮಿ ಸೇರುವ ಕಾಲ್ಪನಿಕ ಸ್ಥಳ) ನೋಡಿದಾಗ ಖಗೋಲೀಯ ಉತ್ತರ ಧ್ರುವ ಬಿಂದುವಿನ ಸುತ್ತಮುತ್ತಲಿನ ನಕ್ಷತ್ರ ಪುಂಜಗಳನ್ನು ಪರಿದ್ರುವ (CIRCUMPOLAR) ನಕ್ಷತ್ರ ಪುಂಜಗಳೆಂದು ಕರೆಯುತ್ತೇವೆ.ಈ ಬಿಂದುವಿನ ಸಮೀಪದಲ್ಲೇ ಇರುವ ದ್ರುವ ನಕ್ಷತ್ರ .ದೃವ ನಕ್ಷತ್ರದ ವಿಶೇಷವೆಂದರೆ ಅದು ಸದಾ ಒಂದೇ ಸ್ಥಾನದಲ್ಲಿ ಸ್ಥಿರವಾಗಿರುತ್ತದೆ.ಎಲ್ಲಾ ರಾತ್ರಿಗಳಲ್ಲಿ ಸ್ಥಿರವಾಗಿ ಒಂದೇ ದಿಕ್ಕಿನಲ್ಲಿ ಕಾಣುತ್ತದೆ.ಹೀಗಾಗಿ ಪ್ರತಿಯೊಬ್ಬ ಖಗೋಳ ವೀಕ್ಷಕನು ತಾನು ದಿನ ನಿತ್ಯ ವೀಕ್ಷಿಸುವ  ಸ್ಥಳದಲ್ಲಿ ನಿಂತಾಗ ದ್ರುವ ನಕ್ಷತ್ರ ಆಧಾರವಾಗಿಟ್ಟುಕೊಂಡು ಉಳಿದ ನಕ್ಷತ್ರಗಳನ್ನು ವೀಕ್ಷಿಸುವುದು ಒಳಿತು.ಧ್ರವ ನಕ್ಷತ್ರದ ಸುತ್ತಲಿನ ನಕ್ಷತ್ರಗಳು,ಅದರ ಸುತ್ತ ಬೇರೆ ಬೇರೆ ವೃತ್ತಗಳಲ್ಲಿ ಪ್ರದಕ್ಷಣೆ ಮಾಡುವವು.ದೃವವನ್ನು ಕೇಂದ್ರವಾಗಿಟ್ಟುಕೊಂಡು ಅಲ್ಲಿಂದ ಉತ್ತರ ದಿಗಂತಕ್ಕಿರುವ ಅಂತರದಷ್ಟು ತ್ರಿಜ್ಯವನ್ನು ಕಲ್ಪಿಸಿಕೊಂಡರೆ, ಈ ವೃತ್ತದೊಳಗಿನ ನಕ್ಷತ್ರಗಳ ಪ್ರದಕ್ಷಿಣ ಪಥಗಳು ದಿಗಂತದ ಮೇಲೆ ಸಂಪೂರ್ಣ ವಾಗಿ ಯಾವಾಗಲೂ ಇರುತ್ತವೆ.ಅಂದರೆ ಈ ನಕ್ಷತ್ರಗಳು ಹುಟ್ಟುವುದಿಲ್ಲ, ಮುಳುಗುವುದಿಲ್ಲ ಇವು ಪರಿಧೃವ ನಕ್ಷತ್ರಗಳು.ಒಂದೊಂದು ವೀಕ್ಷಣಾ ಸ್ಥಳದ ಪರಿಧೃವ ತ್ರಿಜ್ಯವು ಬೇರೆ ಬೇರೆಯಾಗಿದ್ದು ಅದು  ಆ ಸ್ಥಳದ ಭೂ ಅಕ್ಷಾಂಶಕ್ಕೆ ಸಮನಾಗಿರುತ್ತದೆ.ಶಿಮಮೊಗ್ಗದ ಅಕ್ಷಾಂಶ 14°ಆದ್ದರಿಂದ 14°ತ್ರಿಜ್ಯದ ಪರಿದೃವ ವೃತ್ತದ ಎಲ್ಲಾ ನಕ್ಷತ್ರಗಳು ಎಲ್ಲ ಕಾಲದ ಎಲ್ಲ ರಾತ್ರಿಗಳಲ್ಲೂ ವೀಕ್ಷಣೆಗೆ ಶಿಮಮೊಗ್ಗದಲ್ಲಿ ಸಿಗುತ್ತವೆ.
40°ತ್ರಿಜ್ಯವುಳ್ಳ ಪರಿಧೃವ ವೃತ್ತದೊಳಗಿನ ಒಳಗಿನ ಕೆಲವು ನಕ್ಷತ್ರ ಪುಂಜಗಳು ಕಂಡುಬರುತ್ತವೆ.ಇವುಗಳಲ್ಲಿ ಪ್ರಮುಖವಾದ ಪುಂಜಗಳೆಂದರೆ ಸಪ್ತರ್ಷಿ ಮಂಡಲ ಮತ್ತು ಕುಂತಿ.ಪ್ರಕಾಶಮಾನವಾಗಿ ಕಾಣುವ ನಕ್ಷತ್ರಗಳಿಂದ ಕೂಡಿದ ಈ ಎರಡು ಪುಂಜಗಳನ್ನು ಉತ್ತರಾಕಾಶದಲ್ಲಿ ಸುಲಭವಾಗಿ ಗುರುತಿಸ ಬಹುದು.ಮೇ-ಜೂನ್ ತಿಂಗಳ ರಾತ್ರಿಗಳಲ್ಲಿ ಸಪ್ತರ್ಷಿ ಮಂಡಲವು,ನವೆಂಬರ್-ಡಿಸೆಂಬರ್ ತಿಂಗಳ ರಾತ್ರಿಗಳಲ್ಲಿ ಕುಂತಿ ಪುಂಜವು ಪ್ರಧಾನವಾಗಿ ಕಂಡುಬರುತ್ತವೆ.ಈ ನಕ್ಷೆಯಲ್ಲಿ ಕಂಡುಬರುವ ಇತರೆ ಪುಂಜಗಳೆಂದರೆ ಲಘುಸಪ್ತರ್ಷಿ,ಸುಯೋಧನ,ಯುದಿಷ್ಟರ,ದೀರ್ಘಕಂಠ,ಮತ್ತು ಮಾರ್ಜಾಲ.ಈ ಐದು ಸಾಮಾನ್ಯ ಪ್ರಕಾಶಮಾನದ ತಾರೆಗಳಿಂದ ಕೂಡಿದ ಪುಂಜಗಳನ್ನು ಕ್ರಮವಾಗಿ ಜುಲೈ,ಆಗಷ್ಟ್,ಅಕ್ಟೋಬರ್,ಡಿಸೆಂಬರ್ ಮತ್ತು ಜನೇವರಿಯಲ್ಲಿ ನೋಡಲು ಪ್ರಯತ್ನಿಸಬಹುದು.ಮುಂದಿನ ವಿವರಣೆ ನಂತರದ ವಾರಗಳ ಲೇಖನಗಳಲ್ಲಿ ನೋಡೋಣ.ಈಗ ಮತ್ತೊಂದು ವರ್ತಮಾನದ ವಿಚಾರವೆಂದರೆ ಫೆಬ್ರವರಿ 1ಕ್ಕೆ ಭೂಮಿಯ ಸಮೀಪಕ್ಕೆ ಧೂಮಕೇತು ಬರುವುದು.ಸುಮಾರು 50 ಸಾವಿರ ವರ್ಷಗಳ ಕಕ್ಷಾವಧಿ ಹೊಂದಿರುವ ಹಸಿರು ಬಣ್ಣದ C/2022 E3 ಹೆಸರಿನ ಧೂಮಕೇತು ಫೆಬ್ರುವರಿ ಒಂದನೇ ತಾರೀಕಿನಂದು ಭೂಮಿಯ ಅತೀ ಸಮೀಪಕ್ಕೆ ಬರಲಿದೆ  ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಇದನ್ನು ನಾವು ಪೆಬ್ರವರಿಯ ಮೊದಲವಾರದಲ್ಲಿ ಬರೀಗಣ್ಣಿನಿಂದ ನೋಡಬಹುದು.ಇದು ಭೂಮಿಗೆ 42.63 ಮಿಲಿಯನ್ ಕಿ.ಮೀ.ಗಳಷ್ಟು ಸಮೀಪ ಹಾದು ಹೋಗಲಿದೆ.ಪ್ರಸ್ತುತ ಈ ಧೂಮಕೇತು ವನ್ನು ನೋಡಬೇಕಾದರೆ ಮೊದಲು ಆಕಾಶದಲ್ಲಿ ಉತ್ತರಾರ್ದಭಾಗದ  7 ನಕ್ಷತ್ರಗಳಿಂದಾದ ಸಪ್ತರ್ಷಿ ಮಂಡಲವನ್ನು ಆಧರಿಸಿ ಧೃವ ನಕ್ಷತ್ರವನ್ನು ಗುರುತಿಸಿ ಅದರಿಂದ ಸ್ವಲ್ಪ ದೂರದಲ್ಲಿ (ಉತ್ತರದಿಕ್ಕಿಗೆ ನಿಮ್ಮ ನೇರ ನೋಟಕ್ಕೆ ) ತುಂಬಾ ಮಸುಕಾಗಿ ಕಾಣುವ ಲಘು ಸಪ್ತರ್ಷಿ ಮಂಡಲದಲ್ಲಿ ನೋಡಿದಾಗ ಕಾಣುತ್ತದೆ.ಮೇಲೆ ತಿಳಿಸಿದ ದಿನಗಳಂದು ಬೆಳಿಗ್ಗೆ ಮೂರುಗಂಟೆಯ ನಂತರ ಗೋಚರಿಸುತ್ತದೆ.
ಧೂಮಕೇತುಗಳು ಸಹ ಗ್ರಹಗಳಂತೆ ಸೂರ್ಯನ ಸುತ್ತ ತಿರುಗುವ ಆಕಾಶ ಕಾಯ.ಇದರಲ್ಲಿ ಹಿಮದ ಶಿಲೆಗಳಿರುತ್ತವೆ.ಸಾಮಾನ್ಯವಾಗಿ ಇವು ಸೂರ್ಯ ನನ್ನು ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತು ಹಾಕುತ್ತವೆ.ಈ ಕಕ್ಷೆಯ ಆಧಾರವಾಗಿ ಎರಡು ವಿಧಗಳಾಗಿ ವರ್ಗೀಕರಿಸುತ್ತಾರೆ.ಒಂದು ಆವರ್ತನೀಯ ಮತ್ತೊಂದು ಆವರ್ತಕವಲ್ಲದ ಧೂಮಕೇತುವೆಂದು.ಆವರ್ತಕ ಧೂಮಕೇತುಗಳು ನಿರ್ಧಿಷ್ಟವಾದ ಕಕ್ಷಾವಧಿಯೊಂದಿಗೆ ಸೂರ್ಯನ ಸುತ್ತ ತಿರುಗಿ ಪುನರಾವರ್ತಿತವಾಗುತ್ತವೆ ಆ ನಿಟ್ಟಿನಲ್ಲಿ ಪ್ರಸ್ತುತ C/2022 E3 ಎಂಬ ಧೂಮಕೇತುವು  ಜನೆವರಿ 12ರಂದು ಸೂರ್ಯ ನ ಸಮೀಪ ಬಂದಿದ್ದು ಸೂರ್ಯ ನ ಸಮೀಪ ತನ್ನ ಚಲನೆಯನ್ನು ಪೂರ್ಣಗೊಳಿಸಲಾಗಿದೆ.ಹೀಗೆ ಅದು ತನ್ನ ಕಕ್ಷೆಯಲ್ಲಿ ಹಿಂತಿರುಗಿ ಹೋಗುವಾಗ ಭೂಮಿಯ ಸಮೀಪ ಬಂದು ಹೋಗುತ್ತದೆ.ಇದನ್ನು ನಾವೆಲ್ಲರು ನೋಡಿ ಕಣ್ತುಂಬಿಸಿಕೊಳ್ಳ ಬಹುದು.ಇದುಪುನಃ ಭೂಮಿಯ ಸಮೀಪಕ್ಕೆ   50 ಸಾವಿರ ವರ್ಷಗಳ ಬಳಿಕ ಬರಲಿದೆ.ಇದು ವಿಸ್ಮಯ..ಇಂತಹ ಕರಾರುವಕ್ಕಾದ ಲೆಕ್ಕಾಚಾರಕ್ಕೆ ಗಣಿತವೇ ಕಾರಣ.ವಿಜ್ಞಾನದ ಈ ವಿಸ್ಮಯ ನಮ್ಮ ಜಗತ್ತು ಎಷ್ಟು ದೊಡ್ಡದು ಎಂದು ಹೇಳುತ್ತದೆ ಅಲ್ಲವೆ?
ಡಾ|| ಯು.ಶ್ರೀನಿವಾಸ ಮೂರ್ತಿ
ವಿಜ್ಞಾನ ಸಾಹಿತಿ,ಉಪನ್ಯಾಸಕರು
ವಿಚಾರ ಕುಟೀರ
ರಾಮನಗರ ಒಂದನೇ ಕ್ರಾಸ್ ಹವಂಬಾವಿ
ಬಳ್ಳಾರಿ.
ಪ್ರತಿಕ್ರಿಯಿಸಿ:9731063950

Share and Enjoy !

Shares