ಕೊಪ್ಪಳ ಫೆ09: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗು ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಕೊಪ್ಪಳ ಇವರ ಸಹಯೋಗದಲ್ಲಿ ಫೆ.9ರಂದು ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ದಿನಾಚರಣೆ ನಿಮಿತ್ತ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೇ ‘ಕರ್ನಾಟಕವನ್ನು ಜೀತ ವಿಮುಕ್ತಗೊಳಿಸಲು ಸಂಕಷ್ಟದಲ್ಲಿರುವ ಸಮುದಾಯಗಳ ಜನರಿಗೆ ನ್ಯಾಯವನ್ನು ಒದಗಿಸಲು ನನ್ನ ಸೇವೆಯನ್ನು ಮುಡುಪಾಗಿಡುತ್ತೇನೆ. ಈ ಮೂಲಕ ಸಮಾನತೆಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ’ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ ಅವರು ಮಾತನಾಡಿ, ಸಮಾಜದಲ್ಲಿ ಯಾವುದೇ ವ್ಯಕ್ತಿಯು ಸ್ವತಂತ್ರವಾಗಿ, ಒತ್ತಡ ರಹಿತ ಜೀವನ ನಡೆಸಲು ಸಂವಿಧಾನ ಬದ್ಧ ಹಕ್ಕು ನೀಡಲಾಗಿದೆ. ಜೀತ ಪದ್ಧತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ. ಇಂತಹ ಅಮಾನವೀಯ ಪದ್ಧತಿಯನ್ನು ಹೋಗಲಾಡಿಸಲು, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತಿಳಿಸಿದರು. ಸಂಘಟಿತ ವಲಯದಲ್ಲಿ ಜೀತಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗಿದೆ. ಅಸಂಘಟಿತ ವಲಯಲದಲ್ಲಿ ಸಹ ಈ ಕಾರ್ಯವಾಗಬೇಕಿದೆ ಎಂದರು. ಕೊಪ್ಪಳ ಜಿಲ್ಲೆಯನ್ನು ಸಹ ಜೀತ ಮುಕ್ತ ಜಿಲ್ಲೆ ಎಂದು ಘೋಷಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಯುನಿಸೆಫ್‌ನ ವ್ಯವಸ್ಥಾಪಕರಾದ ಹರೀಶ ಜೋಗಿ ಅವರು ಪ್ರಾಸ್ತಾವಿಕ ಮಾತನಾಡಿ, ಜೀತಪದ್ಧತಿಯು ಭಾರತೀಯ ಸಮಾಜದಲ್ಲಿ ಬಹುವರ್ಷಗಳಿಂದಲು ಉಳಿದು ಬಂದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಕೆಟ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು 1976ರಲ್ಲಿ ಕಾಯಿದೆ ಜಾರಿ ಮಾಡಿ ಶಿಕ್ಷೆಗೆ ಅವಕಾಶ ಕಲ್ಪಿಸಲಾಯಿತು. ಈ ಹಿಂದೆ ಕೊಪ್ಪಳ ಜಿಲ್ಲೆಯ ಗಿಣಿಗೇರಾದ ಇಟ್ಟಿಗೆ ಭಟ್ಟಿಗಳಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ ಓಡಿಸ್ಸಾದ 46 ಜನರನ್ನು ಸಂರಕ್ಷಿಸಿ ಅವರಿಗೆ ತಲಾ 20 ಸಾವಿರ ರೂ.ಗಳ ಪರಿಹಾರ ನೀಡಿದ ಕಾರ್ಯ ಮಾಡಲಾಗಿದೆ. ಈ ಹಿಂದೆ ಕುಷ್ಟಗಿ ತಾಲೂಕಿನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. 2014ರಲ್ಲಿ ಭಾಗ್ಯನಗರದಲ್ಲಿ ಒಂದು ಪ್ರಕರಣ ದಾಖಲಾಗಿತ್ತು ಎಂದು ವಿವರಿಸಿದರು.
ಜೀತ ಪದ್ಧತಿಯ ನಿರ್ಮೂಲನೆ ಸಂಬಂಧ ಜಿಲ್ಲೆಯಲ್ಲಿ ಜಾಗೃತಿ ಸಮಿತಿ ರಚಿಸಿ ನಿಗಾ ವಹಿಸಲಾಗುತ್ತಿದೆ. ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ಸಹ ಕಾರ್ಯಪ್ರವೃತ್ತವಾಗಿದೆ. ಪಂಚಾಯತ್ ರಾಜ್ಯ ಇಲಾಖೆಯಿಂದ ಪುನರ್ವಸತಿ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರು ಘನತೆಯುಕ್ತ ಬದುಕನ್ನು ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜೀತ ಪದ್ಧತಿಯನ್ನು ಒಪ್ಪಿಕೊಳ್ಳುವ ಭಾವನೆಯನ್ನು ಹೊಂದದೇ ಅದನ್ನು ಹೋಗಲಾಡಿಸುವ ಭಾವನೆ ಹೊಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತನ ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ, ಆಹಾರ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ, ಸಹಾಯಕ ಆಯುಕ್ತರ ಕಚೇರಿಯ ತಹಸೀಲ್ದಾರರಾದ ವಿನಾಯಕ ಹಾಗೂ ಇತರರು ಇದ್ದರು. ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ ಸ್ವಾಗತಿಸಿದರು. ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರ ಅವರು ವಂದಿಸಿದರು.
ವಾರ್ತಾ ಇಲಾಖೆಯಲ್ಲಿ ಕಾರ್ಯಕ್ರಮ: ಜಿಲ್ಲಾಡಳತ ಭವನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಫೆ.9ರಂದು ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯ ನಿಮಿತ್ತ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಕಚೇರಿಯ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಪಾಂಡುರಂಗ ಎ., ತಿಪ್ಪಯ್ಯನಾಯ್ಡು ಎನ್., ಹೊರಗುತ್ತಿಗೆ ನೌಕರರಾದ ಆರೀಫ್, ಅಪ್ರೆಂಟಿಶೀಪ್ ತರಬೇತುದಾರರಾದ ಲಕ್ಷ್ಮಣ ಇದ್ದರು.