ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು, ದೇವರನ್ನು ಒಲಿಸಿಕೊಂಡು, ಆಧ್ಯಾತ್ಮದ ಮೂಲಕವಾಗಿ ಉಪದೇಶಗಳನ್ನು ನೀಡಿ, ತಮ್ಮ ಬುಡಕಟ್ಟಿನ ಜನರಲ್ಲಿ ಧೈರ್ಯ, ಸಾಹಸ, ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನವನ್ನು ಮೂಡಿಸಿದವರು. ವೀರನಾಗಿ, ವಿರಾಗಿಯಾಗಿ ಬಂಜಾರ ಸಮುದಾಯದಲ್ಲಿ ಸೇವೆಯನ್ನು ಮಾಡಿದ ಮಹಾನ್ ಚಿಂತಕರು. ಶ್ರೇಷ್ಠ ದಾರ್ಶನಿಕನಾಗಿ ಮತ್ತು ಸಾಂಸ್ಕೃತಿಕ ನಾಯಕರಾದ ಶ್ರೀ ಸಂತ ಸೇವಾಲಾಲರು 284 ನೇ ಜಯಂತಿ ಇಂದು .
ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಒಂದು ಚಿಕ್ಕ ಗ್ರಾಮ. ಇದಕ್ಕೆ ಸಮೀಪವಿರುವ ಭಾಯಾಗಡ್ ಶ್ರೀ ಸೇವಾಭಾಯರ ಜನ್ಮಸ್ಥಾನ. ಅಲೆಮಾರಿ ಬಂಜಾರ ಜನಾಂಗದ ಧರ್ಮಣಿ ಬಾಯಿ ಮತ್ತು ಭೀಮಾನಾಯ್ಕ ದಂಪತಿಗೆ ಹಲವಾರು ವರ್ಷ ಮಕ್ಕಳಾಗುವುದಿಲ್ಲ. ಜಗನ್ಮಾತೆ ಮರಿಯಮ್ಮದೇವಿಗೆ ಹರಕೆ ಹೊತ್ತು ಪಡೆದ ಮಗುವಿಗೆ ಸೇವಾಲಾಲ ಎಂದು ನಾಮಕರಣ ಮಾಡುತ್ತಾರೆ. ಇವರ ಜನ್ಮದಿನಾಂಕ ನಿಖರವಾಗಿ ಲಭ್ಯವಾಗಿಲ್ಲವಾದರೂ 1739ರ ಫೆ.15 ಎಂದು ಹೇಳಲಾಗುತ್ತದೆ. ಬಾಲಕ ಸೇವಾಭಾಯ ಶಿವನ ಆರಾಧಕ. ಗೋವುಗಳನ್ನು ಕಾಯುವುದು, ಅವುಗಳಿಗೆ ಹುಲ್ಲು ಕೊಯ್ದು ತಂದು ಹಾಕುವುದು ಅವನ ಕಾಯಕವಾಗಿರುತ್ತದೆ. ಸೇವಾಭಾಯರಿಗೆ 12 ವರ್ಷ ತುಂಬುತ್ತಲೇ ತಂದೆ-ತಾಯಿಗೆ ತಾವು ಜಗನ್ಮಾತೆಗೆ ಕಟ್ಟಿಕೊಂಡ ಹರಕೆ ನೆನಪಿಗೆ ಬರುತ್ತದೆ. ಅದೇನೆಂದರೆ ತಮಗೆ ಹುಟ್ಟುವ ಹಿರಿಯ ಮಗನನ್ನು ದೇವಿ ಸೇವೆಗೆ ಬಿಡುವುದೆಂಬುದು. ಆದರೆ ಸೇವಾಭಾಯರ ಮೇಲಿನ ವ್ಯಾಮೋಹದಿಂದ ಅವರು ಜಗನ್ಮಾತೆ ಮರಿಯಮ್ಮ ದೇವಿಯ ಸೇವಕನನ್ನಾಗಿ ಮಾಡಲು ಹಿಂದೇಟು ಹಾಕುತ್ತಾರೆ. ಇದರಿಂದ ಅವರಿಗೆ ಹಲವಾರು ಕಂಟಕ ಪ್ರಾರಂಭವಾಗುತ್ತವೆ. ವ್ಯಾಪಾರದಲ್ಲಿ ನಷ್ಟ, ಗೋವುಗಳ ಕಣ್ಮರೆ, ಮಕ್ಕಳ ಅನಾರೋಗ್ಯ ಇತ್ಯಾದಿಗಳನ್ನು ನೋಡಿದ ದಂಪತಿಗೆ ತಪ್ಪಿನ ಅರಿವಾಗುತ್ತದೆ. ವಿಷಯವನ್ನು ಸೇವಾಭಾಯರಿಗೆ ತಿಳಿಸಿದಾಗ ಅವರು ತಂದೆ-ತಾಯಿಯ ಮಾತನ್ನು ಮೊದಮೊದಲು ತಿರಸ್ಕರಿಸುತ್ತಾರೆ. ಆದರೆ ತಂದೆ-ತಾಯಿ ಒತ್ತಡ ಹೆಚ್ಚಾದಾಗ ಒಪ್ಪಿಕೊಳ್ಳುತ್ತಾರೆ. ಅದಕ್ಕಾಗಿ ತಾವು ವಸತಿ ಮಾಡಿದ ಪ್ರದೇಶದಲ್ಲಿ ಜಗನ್ಮಾತೆಯ ದೇವಸ್ಥಾನವನ್ನು ಕಟ್ಟಿಸಿ ಪೂಜೆ ಮಾಡಲು ಪ್ರಾರಂಭಿಸುತ್ತಾರೆ. ಜಗನ್ಮಾತೆಯ ಅನುಗ್ರಹ ಮತ್ತು ಕಠಿಣ ಭಕ್ತಿಯಿಂದ ಸೇವಾಭಾಯ ದಿವ್ಯಶಕ್ತಿ ಪಡೆಯುತ್ತಾರೆ. ತಾನು ಪಡೆದ ದೈವಿಕ ಶಕ್ತಿಯನ್ನು ಜನಸೇವೆಗೆ, ದೀನದುರ್ಬಲರ ಸೇವೆಗೆ ಮುಡಿಪಾಗಿಡುತ್ತಾರೆ. ಭಕ್ತ ಸೇವಾಭಾಯರ ಕಾಯಕ ದನಕಾಯುವುದಾಗಿರುತ್ತದೆ. ದನದ ಮಂದೆಯನ್ನು ನದಿಯ ತಟದಲ್ಲಿ ಮೇಯಲು ಬಿಟ್ಟು ಮರಳಲ್ಲಿ ದೇವರ ಮೂರ್ತಿ ಮಾಡಿ, ಭಕ್ತಿಯಿಂದ ಪೂಜೆಮಾಡಿ ತನಗೆ ಉಣ್ಣಲು ಕಟ್ಟಿಕೊಟ್ಟಿದ್ದ ಬುತ್ತಿಯನ್ನೇ ನೈವೇದ್ಯವಾಗಿ ದೇವರಿಗೆ ಅರ್ಪಿಸಿ ತನ್ನ ಸಹಚರರಿಗೆ ಹಂಚುತ್ತಿದ್ದರಂತೆ. ಸೇವಾಭಾಯ ಮರಿಯಮ್ಮ ದೇವಿಯ ಆರಾಧಕರಾದ ಮೇಲೆ ಅವರ ಭಕ್ತಿಯು ಪರಾಕಷ್ಠೆ ಮುಟ್ಟುತ್ತದೆ. ಜಗನ್ಮಾತೆಯ ಮಂದಿರ ಕಟ್ಟಿಕೊಂಡು ದಿನವಿಡೀ ಪೂಜೆ, ಧ್ಯಾನದಲ್ಲೇ ಮುಳುಗಿರುತ್ತಿ ದ್ದರಂತೆ. ಅಖಂಡ ಬ್ರಹ್ಮಚಾರಿಯಾಗಿದ್ದ ಸೇವಾಭಾಯರಿಗೆ ಭೂತ-ಭವಿಷ್ಯತ್ತನ್ನು ಅರಿಯುವ ಸಾಮರ್ಥ್ಯವೂ ಪ್ರಾಪ್ತಿ ಯಾಗುತ್ತದೆ. ತಾನು ಪಡೆದ ದೈವಿಕ ಶಕ್ತಿಯನ್ನು ಸಂತಾನ ಹೀನರಿಗೆ ಸಂತಾನಭಾಗ್ಯ, ರೋಗ ರುಜಿನಗಳ ನಿವಾರಣೆ, ಹಸಿದವರಿಗೆ ಅನ್ನದಾನ, ಹೀಗೆ ಜನೋಪಕಾರಿಯಾಗಿ ಕೆಲಸಗಳಿಗೆ ಬಳಸುತ್ತಾರೆ. ಕೈಚಾಚಿ ಬಂದವರಿಗೆ ಎಂದೂ ನಿರಾಶೆಯನ್ನುಂಟು ಮಾಡು ವುದಿಲ್ಲ. ಅಷ್ಟರ ಮಟ್ಟಿಗೆ ಸೇವಾಭಾಯ ಸಿದ್ಧಿಪುರುಷರಾಗಿ ಪರಿವರ್ತಿತರಾಗುತ್ತಾರೆ.
ಸಂತ ಸೇವಾಲಾಲರ ಅನೇಕ ಪವಾಡಗಳನ್ನು ಮಾಡಿ ಸಿದ್ಧಿಪುರುಷರು ಎಂದು ಖ್ಯಾತಿ ಪಡೆದರು.
ಸೇವಾಲಾಲರು ಕಾಲಗತಿಯಲ್ಲಿ ಮಹಾಸಾಧಕನಾಗಿ, ವೀರ ವೈರಾಗಿಯಾಗಿ, ಜಗನ್ಮಾತೆಯ ಭಕ್ತನಾಗಿ, ಭೂಲೋಕದ ಸಮಸ್ತ ಭಕ್ತಾದಿಗಳಿಗೆ ಗುರುವಾಗಿ, ಸಂತನಾಗಿ, ತನ್ನನ್ನು ನಂಬಿದ ಭಕ್ತಕೋಟಿಯ ಸಂಸಾರವನ್ನು ಉದ್ಧರಿಸುತ್ತಾ, ಅಲ್ಲಲ್ಲಿ ಗುರುಪೀಠ, ಶಕ್ತಿಪೀಠಗಳನ್ನು ಮತ್ತು ಮಠ-ಮಂದಿರಗಳನ್ನು ಕಟ್ಟುತ್ತಾ, ಜಗನ್ಮಾತೆಯ ದೈವೀ ಲೀಲೆಗಳನ್ನು ಪ್ರಚುರಪಡಿಸುತ್ತಾ, ಇಡೀ ಸಮುದಾಯದಲ್ಲಿ ದೈವೀ ಸ್ವರೂಪಿಯಾಗಿ ನೆಲೆ ನಿಂತರು. ಕರ್ನಾಟಕವನ್ನು ಒಳಗೊಂಡಂತೆ ದೇಶದ ಇತರೆ ಪ್ರದೇಶಗಳಿಗೆ ಪರ್ಯಟನೆ ಕೈಗೊಂಡು, ಭಕ್ತ ಜನರ ಕಷ್ಟ-ಕಾರ್ಪಣ್ಯಗಳನ್ನು, ದುಃಖ-ದುಮ್ಮಾನಗಳನ್ನು ಪರಿಹರಿಸುತ್ತಾ, ಲೋಕ ಕಲ್ಯಾಣ ಮಾಡುತ್ತಾ, ಆಧ್ಯಾತ್ಮ ಬೋಧನೆಯನ್ನು ಮಾಡುತ್ತಾ, ದೇಶ ಸಂಚಾರವನ್ನು ಕೈಗೊಳ್ಳುತ್ತಾರೆ.
ಸೇವಾಲಾಲರ ದೈವೀ ಶಕ್ತಿಯನ್ನು ತಿಳಿದು ನಿಜಾಮನು ಅವನನ್ನು ಅರಮನೆಗೆ ಕರೆದು ಪಾದಪೂಜೆಯನ್ನು ಮಾಡಿ, ಕಪ್ಪ-ಕಾಣಿಕೆಯನ್ನು ನೀಡಿ, ಹೈದರಾಬಾದ್ನ ಕೇಂದ್ರಸ್ಥಾನದಲ್ಲಿ ಅವರ ತಂಡಕ್ಕಾಗಿ ನೆಲೆಯೂರಲು ಒಂದಿಷ್ಟು ಜಾಗವನ್ನು ಅರ್ಪಿಸುತ್ತಾನೆ. ನಿಜಾಮನು ಬಂಜಾರರಿಗೆ ನೀಡಿದ ಆ ಪ್ರದೇಶ ಬಂಜಾರ ಹಿಲ್ಸ್ ಇಂದು ಮಹಾರಾಜ ಗಂಜ್ ಎಂದು ಕರೆಯಲ್ಪಟ್ಟಿದೆ.
ಬಂಜಾರರು ಈ ದೈವ ಪುರುಷನನ್ನು “ಮೋತಿವಾಳೋ” “ಲಾಲ್ ಮೋತಿ” ಎಂದು ಕರೆಯುತ್ತರೆ. ಕಾರಣ ಮುಂಬಯಿಯ “ಸ್ಮಿತ್ ಭಾವುಚಾ” ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿ ಕೊಂಡಿತ್ತು. ಇದನ್ನು ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿದ ವೀರರಾಗಿದ್ದರು.ಅದರ ಪ್ರತಿಯಾಗಿ ಪೋರ್ಚುಗೀಸರು ಇವನಿಗೆ ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು.ಅದಕ್ಕಾಗಿ ಇತನನ್ನು ಮೋತಿವಾಳೋ ಎಂದು ಕರೆಯುತ್ತಾರೆ.
ದೇಹಾಂತ್ಯವಾದ ಮೇಲೆ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಅಕ್ಕೋಲ ತಾಲೂಕಿನ ಸಮೀಪದಲ್ಲಿರುವ ಪೊಹರಾಗಢ ಎಂಬಲ್ಲಿ ಅಂತ್ಯಸಂಸ್ಕಾರ ನಡೆಯಿತು. ಈಗ ಅಲ್ಲಿ ಸೇವಾಲಾಲ ಮತ್ತು ಜಗನ್ಮಾತೆ ಮರಿಯಮ್ಮಳ ಬೃಹತ್ ಮಂದಿರ ಕಟ್ಟಿದ್ದು, ಅದು ಸಮಸ್ತ ಬಂಜಾರರ ಪುಣ್ಯಕ್ಷೇತ್ರವಾಗಿದೆ.