ಸರ್ಕಾರಿ ನೌಕರರ ಬೇಡಿಕೆ ಈಡೇರುವವರೆಗೂ ಹೋರಾಟ : ಗುಂಡಪ್ಪನವರ ನಾಗರಾಜ್ ಕರೆ.

Share and Enjoy !

Shares
Listen to this article

ಮಾರ್ಚ್ 1 ರಿಂದ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ*

ವಿಜಯನಗರವಾಣಿ ಸುದ್ದಿ
ಕುರುಗೋಡು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಸಹಯೋಗದಲ್ಲಿ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರು ಹಾಜರಿಯಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದ್ದು ಸರ್ಕಾರಿ ನೌಕರರು ಕೈ ಜೋಡಿಸುವ ಮೂಲಕ ಹೋರಾಟ ಯಶಸ್ವಿಗೊಳಿಸಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುರುಗೋಡು ತಾಲ್ಲೂಕು ಅಧ್ಯಕ್ಷರಾದ ಶ್ರೀ ಗುಂಡಪ್ಪನವರ ನಾಗರಾಜ್ ತಿಳಿಸಿದರು.

ಅವರು ಗುರುವಾರ ಪಟ್ಟಣದ ನಾಡಗೌಡರ ಮರಿಬಸವನಗೌಡರ ಸ್ಮಾರಕ ಪದವಿಪೂರ್ವ ಕಾಲೇಜು ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಸರ್ಕಾರಿ ನೌಕರರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳಾದ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು 7ನೇ ವೇತನ ಆಯೋಗದಿಂದ ಶೀಘ್ರವಾಗಿ ಪಡೆದು ದಿನಾಂಕ 01-7-2022ರಿಂದ ಜಾರಿಗೆ ಬರುವಂತೆ ಶೇಕಡ 40% ರಷ್ಟು ವೇತನ ಹೆಚ್ಚಳ ಸೌಲಭ್ಯವನ್ನು ಸರ್ಕಾರಿ ಆದೇಶ ಹೊರಡಿಸುವ ಮೂಲಕ ಅನುಷ್ಠಾನಗೊಳಿಸಬೇಕು.

ಅಲ್ಲದೇ ಎನ್.ಪಿ.ಎಸ್ ರದ್ದು ಪಡಿಸಿ ಓಪಿಎಸ್ ಜಾರಿಗೊಳಿಸಬೇಕು,ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತಿಸ್ ಘಢ,ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಓ.ಪಿ.ಎಸ್ ಜಾರಿಯಲ್ಲಿದ್ದು ಕರ್ನಾಟಕದಲ್ಲಿ ಶಿಕ್ಷಕರ ಮರಣ ಶಾಸನವಾಗಿರುವ ಎನ್.ಪಿ.ಎಸ್ ರದ್ದು ಏಕಿಲ್ಲ ? ಶಾಸಕರು,ಸಂಸದರು, ಮುಖ್ಯಮಂತ್ರಿಗಳಿಗೆ ಓಪಿಎಸ್ ಮೂಲಕ ಪಿಂಚಣಿ ಪಡೆಯುತ್ತಿದ್ದು ಬಡ ಸರ್ಕಾರಿ ನೌಕರರ ಮೇಲೆ ಎನ್.ಪಿ ಎಸ್ ಹೇರಿ ಸರ್ಕಾರ ಏನು ಸಾಧಿಸ ಹೊರಟಿದೆ ? ಎನ್.ಪಿ.ಎಸ್.ರದ್ದು ಪಡಿಸಿ
ಓ.ಪಿ.ಎಸ್ ಜಾರಿಗೊಳಿಸಲು ಹಗಲು ರಾತ್ರಿ ಎನ್ನದೇ ಹೋರಾಟ ನಡೆಸಿದರೂ,ಹಲವರು ಪ್ರಾಣ ಕಳೆದುಕೊಂಡರೂ ಸಹ ರಾಜ್ಯ ಸರ್ಕಾರ ನೌಕರರ ಸಮಸ್ಯೆಗೆ
ಸ್ಪಂದಿಸದಿರುವುದು ಎಷ್ಟು ಸರಿ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಮಾಂ ಕಾಯ್ದೆ ಜಾರಿಗೆ ತಂದರೂ , ನಮ್ಮ ಮೇಲೆ ಪೋಲಿಸ್ ದಬ್ಬಾಳಿಕೆ ಮಾಡಿದರೂ ಯಾವುದೇ ಕಾರಣಕ್ಕೂ ಜಗ್ಗುವುದಿಲ್ಲ.

ಸರ್ಕಾರಿ ನೌಕರರು ದೇಶದ ನಾನಾ ಭಾಗಗಳಲ್ಲಿ ಕಂಡು ಬಂದ ಭೂಕಂಪ,ಸುನಾಮಿ ಸಂದರ್ಭದಲ್ಲಿ ಜನರಿಗೆ ಸಹಾಯ ಹಸ್ತ ಚಾಚಿದ್ದೇವೆ,ದೇಶ ಹಾಗೂ ರಾಜ್ಯದ ಆರ್ಥಿಕತೆ ಹೆಚ್ಚಿಸಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಗುಂಡಪ್ಪನವರ ನಾಗರಾಜ್, ಕಾರ್ಯದರ್ಶಿ ಕೆ. ಮಂಜುನಾಥ, ಖಜಾಂಚಿ ಬಿ.ರಾಮು,
ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷರಾದ ಮಾರುತಿ ಗಾಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತುಕಾರಾಂ ಗೊರವ,
ಪಿಡಿಒ ಸಂಘದ ಅಧ್ಯಕ್ಷ ರಾಮಲಿ, ಆರ್ ಡಿ ಪಿ ಆರ್ ನೌಕರರ ಸಂಘದ ಅಧ್ಯಕ್ಷರು ಎ ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರು ರಾಜೇಂದ್ರ ದೊರೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗರಾಜ್ ಮಸೂತಿ, ಕ.ರಾ.ಸ.ಸಾ.ಸಂಘದ ಗೌರವ ಅಧ್ಯಕ್ಷ ಟಿ.ಎಂ ಮೃತ್ಯುಂಜಯ, ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಬೋರ್ ನಾಯಕ್, ಹಾಗೂ ಸಾ.ನೌಕರರ ಸಂಘ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘ ಎನ್ ಪಿ ಎಸ್ ನೌಕರರ ಸಂಘ ಹಾಗೂ ಇತರೆ ವೃಂದದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

Share and Enjoy !

Shares