ಮರದ ನೇಗಿಲು ನೀಡಿ ಬಿಎಸ್ವೈಗೆ ಮೋದಿ ಸನ್ಮಾನ

Share and Enjoy !

Shares

ಬೆಂಗಳೂರು, ಫೆ. ೨೭- ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ೮೦ನೇ ಹುಟ್ಟುಹಬ್ಬದ ದಿನವಾದ ಇಂದು ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು.

ಶಿವಮೊಗ್ಗದ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲು

ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರಿಗೆ ಹಸಿರು ಶಾಲು, ಹೊದಿಸಿ ಅಡಕೆ ಹಾರ ಹಾಕಿ, ಪೇಟ ತೊಡಿಸಿ ಮರದ ನೇಗಿಲು ನೀಡಿ ಸನ್ಮಾನಿಸಿ, ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಪ್ರಧಾನಿ ಮೋದಿ ಅವರಿಗೆ ವಿಶೇಷ ಪೇಟ ತೊಡಿಸಿ ಅಭಿನಂದಿಸಿದ್ದು, ವಿಶೇಷವಾಗಿತ್ತು.

ಗಣ್ಯರ ಶುಭ ಹಾರೈಕೆ

ಇಂದು ೮೦ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಡಿಯೂರಪ್ಪನವರಿಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಸಚಿವ ಸಂಪುಟದ ಎಲ್ಲ ಸದಸ್ಯರು, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ನಾಯಕರು ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

ಮನ ದೇವರ ದೇಗುಲದಲ್ಲೂ ಪೂಜೆ

ಯಡಿಯೂರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಯಡಿಯೂರಪ್ಪನವರ ಮನೆ ದೇವರಾದ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿಂದು ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಿದರು.

ಶಿವಮೊಗ್ಗದಲ್ಲಿರುವ ಯಡಿಯೂರಪ್ಪನವರು ಇಂದು ಬೆಳಗ್ಗೆಯೇ ತಮ್ಮ ಕುಟುಂಬ ಸದಸ್ಯರ ಜತೆ ಶಿವಮೊಗ್ಗದ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಜನವೋ ಜನ

ಯಡಿಯೂರಪ್ಪನವರ ಶಿವಮೊಗ್ಗ ನಿವಾಸದಲ್ಲಿಂದು ಜನವೋ ಜನ. ಯಡಿಯೂರಪ್ಪ ಅವರ ಹುಟ್ಟಹಬ್ಬಕ್ಕೆ ಶುಭ ಕೋರಲು ಬೆಳಗ್ಗೆಯಿಂದ ನೂರಾರು ಮುಖಂಡರು, ಕಾರ್ಯಕರ್ತರು ಯಡಿಯೂರಪ್ಪನವರ ಮನೆಗೆ ಬಂದು, ಶುಭ ಕೋರಿದರು. ನಿನ್ನೆಯಿಂದಲೇ ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ಜನ್ಮ ದಿನದ ಸಂಭ್ರಮಾಚರಣೆಗಳು ನಡೆದಿದ್ದು, ನಿನ್ನೆ ರಾತ್ರಿ ಅವರ ಅಭಿಮಾನಿಗಳು ತಂದಿದ್ದ ೮೦ ಕೆಜಿ ಬೃಹತ್ ಕೇಕ್‌ನ್ನು ಯಡಿಯೂರಪ್ಪ ಅವರು ಕತ್ತರಿಸಿ ಅಭಿಮಾನಿಗಳ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದರು.

Share and Enjoy !

Shares