ವಿಜಯನಗರವಾಣಿ ಸುದ್ದಿ
ಕುರುಗೋಡು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಸಹಯೋಗದಲ್ಲಿ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಇಂದು (ಮಾರ್ಚ್ 1) ರಿಂದ ಕರೆಯಲಾಗಿದ್ದ ಬಂದ್ ಗೆ ಕುರುಗೋಡು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು
ಇಂದು ಬಹುತೇಕ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಿಯಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆ ತುರ್ತು ಸೇವೆಗೆ ಮಾತ್ರ ಅವಕಾಶವಿದ್ದು ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳು ಬಂದ್ ಆಗಿವೆ.ಪುರಸಭೆ ಕಾರ್ಯಾಲಯ,ತಾಲ್ಲೂಕು ಪಂಚಾಯತಿ ಕಾರ್ಯಾಲಯಗಳು,ನೀರಾವರಿ ಇಲಾಖೆ,ತಹಶಿಲ್ದಾರ್ ಕಛೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳು ಬಂದ್ ಆಗಿದ್ದು ಕಛೇರಿಗಳು ಬಿಕೋ ಎನ್ನುತ್ತಿರುವುದು ಕಂಡು ಬರುತ್ತಿದೆ.
ಕಪ್ಪು ಪಟ್ಟಿ ಧರಿಸಿ ಕರ್ತವ್ಯ
ಇನ್ನೂ ಕುರುಗೋಡಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇವಲ ತುರ್ತು ಸೇವೆಗಷ್ಟೇ ವೈದ್ಯಕೀಯ ಸೇವೆ ದೊರೆಯುತ್ತಿದ್ದು ಬಾಣಂತಿ,ಅಥವಾ ಅಪಘಾತ ಗಳಿಗೆ ಮಾತ್ರ ವೈದ್ಯರ ಸೇವೆ ಲಭ್ಯವಿದೆ. ಇಲ್ಲಿನ ಕೆಲ ವೈದ್ಯರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪುರಸಭೆಯಲ್ಲಿ ಕುಡಿಯುವ ನೀರಿನ ಸಿಬ್ಬಂದಿಗಳು ಮಾತ್ರ ಕರ್ತವ್ಯಕ್ಕೆ ಹಾಜರಿದ್ದು ಅವರೂ ಸಹ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸುತ್ತಿದ್ದಾರೆ.
*ಸರ್ಕಾರಿ ನೌಕರರ ಬೇಡಿಕೆ ಏನು ?*
ಸರ್ಕಾರಿ ನೌಕರರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳಾದ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು 7ನೇ ವೇತನ ಆಯೋಗದಿಂದ ಶೀಘ್ರವಾಗಿ ಪಡೆದು ದಿನಾಂಕ 01-7-2022ರಿಂದ ಜಾರಿಗೆ ಬರುವಂತೆ ಶೇಕಡ 40% ರಷ್ಟು ವೇತನ ಹೆಚ್ಚಳ ಸೌಲಭ್ಯವನ್ನು ಸರ್ಕಾರಿ ಆದೇಶ ಹೊರಡಿಸುವ ಮೂಲಕ ಅನುಷ್ಠಾನಗೊಳಿಸಬೇಕು.
ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತಿಸ್ ಘಢ,ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಓ.ಪಿ.ಎಸ್ ಜಾರಿಯಲ್ಲಿದ್ದು.
ಕರ್ನಾಟಕದಲ್ಲಿಯೂ ಸಹ
ಎನ್.ಪಿ.ಎಸ್ ರದ್ದು ಪಡಿಸಿ ಓಪಿಎಸ್ ಜಾರಿಗೊಳಿಸಬೇಕು, ಎನ್ನುವುದು ಇವರ ಪ್ರಮುಖ ಬೇಡಿಕೆಯಾಗಿದೆ.
ಸರ್ಕಾರ ಈ ಬಗ್ಗೆ ಲಿಖಿತ ಭರವಸೆ ನೀಡದ್ದೇ ಆದರೆ ಮುಷ್ಕರ ವಾಪಾಸು ಪಡೆದುಕೊಳ್ಳುವುದಾಗಿ ಸರ್ಕಾರಿ ನೌಕರರ ರಾಜ್ಯಧ್ಯಕ್ಷ ಷಡಕ್ಷರಿ ತಿಳಿಸಿದ್ದರು.
ಆದರೆ ಸರ್ಕಾರ ಈ ಕುರಿತು ಮೌಖಿಕ ಹೇಳಿಕೆಗಷ್ಟೇ ಸೀಮಿತವಾಗಿದ್ದು ನಿನ್ನೆ ( ಫೆ 28)
ಕರೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹಾಗೂ ನೌಕರರ ಸಂಘದ ನಡುವೆ ಸಂಧಾನ ವಿಫಲಗೊಂಡ ಪರಿಣಾಮ ಮುಷ್ಕರ ಅನಿವಾರ್ಯವಾಗಿದೆ.
ಎಸ್ಮಾ ಜಾರಿಯಾದರೂ ಬಗ್ಗಲ್ಲ
ಎಸ್ಮಾಂ ಕಾಯ್ದೆ ಜಾರಿಗೆ ತಂದರೂ , ನಮ್ಮ ಮೇಲೆ ಪೋಲಿಸ್ ದಬ್ಬಾಳಿಕೆ ಮಾಡಿದರೂ ಯಾವುದೇ ಕಾರಣಕ್ಕೂ ಜಗ್ಗುವುದಿಲ್ಲ. ಎಂಬ ಸ್ಪಷ್ಟ ಸಂದೇಶ ಸರ್ಕಾರಿ ನೌಕರರ ತಿಳಿಸಿದ್ದಾರೆ.
ನೌಕರರು ಹೇಳೋದೇನು ?
ಶಾಸಕರು,ಸಂಸದರು, ಮುಖ್ಯಮಂತ್ರಿಗಳಿಗೆ ಓಪಿಎಸ್ ಮೂಲಕ ಪಿಂಚಣಿ ಪಡೆಯುತ್ತಿದ್ದು ಬಡ ಸರ್ಕಾರಿ ನೌಕರರ ಮೇಲೆ ಎನ್.ಪಿ ಎಸ್ ಹೇರಿ ಸರ್ಕಾರ ಏನು ಸಾಧಿಸ ಹೊರಟಿದೆ ? ಎನ್.ಪಿ.ಎಸ್.ರದ್ದು ಪಡಿಸಿ
ಓ.ಪಿ.ಎಸ್ ಜಾರಿಗೊಳಿಸಲು ಹಗಲು ರಾತ್ರಿ ಎನ್ನದೇ ಹೋರಾಟ ನಡೆಸಿದರೂ,ಹಲವರು ಪ್ರಾಣ ಕಳೆದುಕೊಂಡರೂ ಸಹ ರಾಜ್ಯ ಸರ್ಕಾರ ನೌಕರರ ಸಮಸ್ಯೆಗೆ
ಸ್ಪಂದಿಸದಿರುವುದು ಎಷ್ಟು ಸರಿ ? ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೇಳಿಕೆ 1
ಕುರುಗೋಡು ತಾಲ್ಲೂಕಿನಾದ್ಯಂತ ಸರ್ಕಾರಿ ನೌಕರರ ಮುಷ್ಕರಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು ಖುಷಿ ನೀಡಿದೆ. ಕುರುಗೋಡು ತಾಲೂಕಿನ ಎಲ್ಲಾ ನೌಕರರಿಗೆ ಧನ್ಯವಾದಗಳು.
ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರು ನಮ್ಮ ನೌಕರರ ಪರವಾಗ ಮುಖ್ಯಮಂತ್ರಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸರ್ಕಾರ ಈಗಾಗಲೇ 17% ಹೆಚ್ಚಳ ಮಾಡಿದೆ. ನಮಗೆ ಮೌಖಿಕ ಹೇಳಿಕೆ ಬೇಡ ಲಿಖಿತ ಹೇಳಿಕೆ ಬೇಕು.ನಮ್ಮ ಭರವಸೆ ಈಡೇರುವ ನಂಬಿಕೆ ಇದೆ.
ಶ್ರೀ ಗುಂಡಪ್ಪನವರ ನಾಗರಾಜ್
ತಾಲ್ಲೂಕು ಅಧ್ಯಕ್ಷರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕುರುಗೋಡು.