ಕಡಿಮೆ ಮತದಾನವಾದ ಮತಗಟ್ಟೆಗಳ ಅಧ್ಯಯನ ; ಮತದಾನ ಹೆಚ್ಚಳಕ್ಕೆ ಅರಿವಿನ ಕಾರ್ಯಕ್ರಮಗಳಿಗೆ ಆಧ್ಯತೆ – ಜಿಲ್ಲಾ ಪಂಚಾಯತ್ ಸಿಇಓ ಡಾ.ಸುರೇಶ ಇಟ್ನಾಳ

Share and Enjoy !

Shares
Listen to this article

ಧಾರವಾಡ  ಮಾರ್ಚ್ 02: ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಈ ಹಿಂದಿನ ಚುನಾವಣೆಗಳಲ್ಲಿ ಮತದಾನ ಕಡಿಮೆ ಆಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಅಧ್ಯಯನ ಮಾಡಿ, ತಾಂತ್ರಿಕ ಕಾರಣ ತಿಳಿದುಕೊಳ್ಳಲಾಗುತ್ತದೆ ಮತ್ತು ಎಲ್ಲ ಕಡೆ ನೂರಕ್ಕೆ ನೂರರಷ್ಟು ಮತದಾನವಾಗುವಂತೆ ಅರಿವು ಮೂಡಿಸಲಾಗುತ್ತದೆ ಎಂದು ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿಗಳು ಆಗಿರುವ ಜಿಲ್ಲಾ ಪಂಚಾಯತ್ ಸಿಇಓ ಡಾ. ಸುರೇಶ ಇಟ್ನಾಳ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ನಗರದ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಸಂಯುಕ್ತವಾಗಿ  ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಮತದಾರರ ಸಾಕ್ಷರತಾ ಸಂಘಗಳ ಜಿಲ್ಲಾಮಟ್ಟದ ತರಬೇತಿದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

ಭಾರತ ಚುನಾವಣಾ ಆಯೋಗವು ಕಾಲಕಾಲಕ್ಕೆ ನೀಡುವ ನಿರ್ದೇಶನ ಮತ್ತು ಸಲಹಾತ್ಮಕ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಪ್ರತಿ ಚುನಾವಣೆಗಳಲ್ಲಿ ಮತದಾನ ಹೆಚ್ಚಳಕ್ಕೆ ಕ್ರಮ ವಹಿಸಲಾಗುತ್ತದೆ.

ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ, ಆ ಮತಗಟ್ಟೆ ವ್ಯಾಪ್ತಿಯಲ್ಲಿ ಅಧ್ಯಯನ ಮಾಡಿ, ಅದಕ್ಕೆ ಸಕಾರಣಗಳನ್ನು ಕಂಡುಕೊಳ್ಳಲಾಗುತ್ತಿದೆ. ಮತ್ತು ಅವುಗಳ ಪರಿಹಾರಕ್ಕೆ ಮನೆ ಮನೆ ಭೇಟಿ, ಸರಿಯಾಗಿ ಮತದಾರ ಯಾದಿ ಪರಿಷ್ಕರಣೆ, ಮತದಾರ ಸ್ವಯಂ ಆಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಗತ್ಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

 

ಮತದಾರರಿಗೆ ಓಟರ್ ಸ್ಲೀಪ್ ನೀಡುವುದರಿಂದ ಮತದಾರನಿಗೆ, ಮತದಾರ ಯಾದಿಯಲ್ಲಿ ತನ್ನ ಹೆಸರು ಇರುವ ಬಗ್ಗೆ ಖಾತ್ರಿ ಆಗುತ್ತದೆ ಮತ್ತು ತಾನು ಮತದಾನ ಮಾಡುವ ಮತಗಟ್ಟೆ ಹೆಸರು ಖಚಿತವಾಗುತ್ತದೆ. ಇದರಿಂದ ಯಾವ ಗೊಂದಲಗಳಿಲ್ಲದೆ ಮತದಾರ ನಿಗದಿತ ಅವಧಿಯೊಳಗೆ ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಾನೆ ಎಂದು ಸಿಇಓ ಅವರು ತಿಳಿಸಿದರು.

ಇಂದಿನ ಸಮಾಜದ ಮೇಲೆ ಸೋಶಿಯಲ್ ಮಿಡಿಯಾಗಳ ಪ್ರಭಾವ ಹೆಚ್ಚಾಗಿದೆ. ಅದು ಚುನಾವಣೆಗಳನ್ನು ಬಿಟ್ಟಿಲ್ಲ. ಮತದಾರರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆ ಮೂಲಕ ಅರ್ಹ ಮತದಾರರಲ್ಲಿ ಅರಿವು ಮೂಡಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಡಾ. ಸುರೇಶ ಇಟ್ನಾಳ ತಿಳಿಸಿದರು.

ಚುನಾವಣೆಗಳು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಜರುಗುವಲ್ಲಿ ಸ್ವೀಪ್ ಕಾರ್ಯಚಟುವಟಿಕೆಗಳು ಬಹು ಮುಖ್ಯ ಪಾತ್ರ ನಿರ್ವಹಿಸುತ್ತವೆ. ಜಿಲ್ಲಾ ಸಂಪನ್ಮೂಲ ತರಬೇತಿದಾರರು ತಾವು ಪಡೆದ ತರಬೇತಿ ಮತ್ತು ಜ್ಞಾನವನ್ನು ಅಧೀನ ಅಧಿಕಾರಿಗಳಿಗೆ ನೀಡುವ ಮೂಲಕ ಸ್ವೀಪ್ ಚಟುವಟಿಕೆಗಳು ಯಶಸ್ವಿಯಾಗುವಂತೆ ಜಾಗೃತಿ ವಹಿಸಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಸಭೆಯಲ್ಲಿ ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣ ನಾಯಕ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾ ಸಂಪನ್ಮೂಲ ತರಬೇತಿದಾರರು ವೇದಿಕೆಯಲ್ಲಿದ್ದರು.

ರಾಜ್ಯಮಟ್ಟದ ತರಬೇತಿದಾರ ಕೆ.ಎಂ. ಶೇಖ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಾಗಾರದಲ್ಲಿ ರಾಜ್ಯಮಟ್ಟದ ತರಬೇತಿದಾರರು  ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.

ಒಂದು ದಿನದ ಈ ತರಬೇತಿ ಕಾರ್ಯಾಗಾರದಲ್ಲಿ ಧಾರವಾಡ ಡೈಟ್ ಉಪನ್ಯಾಸಕ ಜೆ.ಎನ್. ನಂದನ, ಜಿಲ್ಲಾಮಟ್ಟದ ತರಬೇತುದಾರ  ಬಿ.ಬಿ. ದುಬ್ಬನಮರಡಿ ಸೇರಿದಂತೆ ಬೆಳಗಾವಿ, ಚಿಕ್ಕೋಡಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಶಿರ್ಶಿ, ಗದಗ, ಹಾವೇರಿ ಶೈಕ್ಷಣಿಕ ಜಿಲ್ಲೆಗಳ ಮತದಾರ ಸಾಕ್ಷರತಾ ಸಂಘಗಳ ಜಿಲ್ಲಾ ಮಟ್ಟದ ತರಬೇತಿದಾರ ಅಧಿಕಾರಿಗಳು ಭಾಗವಹಿಸಿದ್ದಾರೆ.

 

Share and Enjoy !

Shares