ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಬಿಸಿಲಿನ ತಾಪಮಾನ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಿ: ಡಿಸಿ ಪವನಕುಮಾರ್ ಮಾಲಪಾಟಿ

Share and Enjoy !

Shares
Listen to this article

ಬಳ್ಳಾರಿ,ಮಾ.6: ಮುಂಬರುವ ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ ಪ್ರದೇಶಗಳಾದ ಜಾನೇಕುಂಟೆ, ಬೆಳಗಲ್ಲು, ಜಾನೇಕುಂಟೆ ತಾಂಡಾ, ಕಮ್ಮರಚೇಡು, ಎತ್ತಿನಬೂದಿಹಾಳ್ ಗ್ರಾಮಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಯಾದಲ್ಲಿ ಅಗತ್ಯ ನೀರಿನ ಟ್ಯಾಂಕರ್‍ಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಜಿಲ್ಲೆಯ ಅಲ್ಲಿಪುರ ಕೆರೆ ಸೇರಿದಂತೆ ಮೋಕಾ, ಕುರುಗೋಡು, ಕುಡುತಿನಿ, ಸಂಡೂರು, ಕಂಪ್ಲಿ ಮತ್ತು ಸಿರುಗುಪ್ಪ ಪಟ್ಟಣಗಳ ಕೆರೆಗಳ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದುಕೊಂಡರು.

ನಗರ ಪ್ರದೇಶಗಳಲ್ಲಿ ಯಾವುದೇ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೂ ನೀರಿನ ಸೋರಿಕೆ ಕಂಡುಬಂದಲ್ಲಿ ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕುರುಗೋಡು ತಾಲೂಕಿನ ಕೆರೆಯು ಸ್ವಚ್ಛತೆಯಲ್ಲಿ ಹಿಂದುಳಿದಿದೆ. ಬೇಸಿಗೆ ಮುಗಿದ ನಂತರ ಮಳೆಗಾಲ ಆರಂಭವಾಗುವ ಮುನ್ನ ಕೆರೆಯನ್ನು ಶುದ್ದೀಕರಣಗೊಳಿಸಬೇಕು. ಸುತ್ತಲೂ ಬೆಳೆದಿರುವ ಗಿಡ ಗಂಟೆಗಳನ್ನು ತೆಗೆಸಬೇಕು. ದನ ಕರುಗಳು ಹೋಗದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

ಬಸರಕೋಡು ಗ್ರಾಮ ವ್ಯಾಪ್ತಿಯ ಹಗರಿ ನದಿ ಬಳಿ ಸುತ್ತಲೂ ಬೆಳೆದಿರುವ ಬೇಲಿ ಮುಳ್ಳಿನ ಗಿಡಗಳನ್ನು ತೆಗೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನೀರು ಪೂರೈಕೆ ಸಂದರ್ಭದಲ್ಲಿ ವಿದ್ಯುತ್ ಸಮರ್ಪಕವಾಗಿ ಸರಬರಾಜು ಆಗುತ್ತದೆಯೇ ಎಂದು ಜೆಸ್ಕಾಂ ಅಧಿಕಾರಿಗಳಿಗೆ ವಿಚಾರಿಸಿದ ಅವರು, ಸಮರ್ಪಕ ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು.

ಬೇಸಿಗೆಯು ಆರಂಭಗೊಳ್ಳುತ್ತಿದ್ದಂತೆ ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯನ್ನು ಆಡಳಿತ ಮಂಡಳಿಯು ಕ್ರಮವಹಿಸಬೇಕು. ಬೇಸಿಗೆ ಸಂದರ್ಭದಲ್ಲಿ ಯಾವ ರೀತಿಯ ಆರೋಗ್ಯ ಕಾಳಜಿ ವಹಿಸಬೇಕು ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಅಪರ ಜಿಲ್ಲಾಧಿಕಾರಿಗಳಾದ ಪಿ.ಎಸ್ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

 

 

Share and Enjoy !

Shares