ವಿಜಯನಗರ: ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ ಹಾಲ್ ಟಿಕೆಟ್ ಇದ್ದರೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹೆಚ್ ಪಿ ಎಸ್ ಕಾಲೇಜಿನ 48 ವಿದ್ಯಾರ್ಥಿಗಳಿಗೆ ಪಿಯುಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಕಾಲೇಜು ಸಿಬ್ಬಂದಿ.
ಪರೀಕ್ಷೆ ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಘಟ್ಟ. ಇಂದಿನಿಂದ(ಮಾರ್ಚ 9) 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಆದ್ರೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹೆಚ್ ಪಿ ಎಸ್ ಕಾಲೇಜಿನ 48 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ. ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿ ಹೊರ ಹಾಕಿದ್ದಾರೆ. ಸದ್ಯ 48 ವಿದ್ಯಾರ್ಥಿಗಳು ಪಿಯು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ರಾಜ್ಯಾದ್ಯಂತ ಇಂದಿನಿಂದ ಪಿಯು ಪರೀಕ್ಷೆ ಆರಂಭವಾಗಿದೆ. ಈ ಬಾರಿ ಒಟ್ಟು 07 ಲಕ್ಷದ 26 ಸಾವಿರದ 195 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆಯಲಿದೆ. ಆದ್ರೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಇರುವ ಹೆಚ್ಪಿಎಸ್ ಕಾಲೇಜಿನ 48 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಕಾಲೇಜು ಆಡಳಿತ ಮಂಡಳಿಯಿಂದ ನಿನ್ನೆಯೇ ಹಾಲ್ ಟಿಕೆಟ್ ಪಡೆದು ಇಂದು ಮೊದಲ ದಿನದ ಕನ್ನಡ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳನ್ನ ಹೊರ ಹಾಕಲಾಗಿದೆ. ಹೀಗಾಗಿ ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಹಾಜರಾತಿ ಕಡಿಮೆ ಇದೆ ಈ ಹಿನ್ನೆಲೆ ಪರೀಕ್ಷೆ ಬರೆಯಲು ಅನುಮತಿಕೊಡಲ್ಲ ಎಂದು ಕಾಲೇಜು ಸಿಬ್ಬಂದಿ ಕಾರಣ ನೀಡಿದ್ದು ಪರೀಕ್ಷೆಗೆ ಅನುಮತಿ ಇಲ್ಲ ಎಂದು ಹಾಲ್ ಟಿಕೆಟ್ ಕೊಡುವಾಗಲೇ ಹೇಳಬೇಕಿತ್ತು ಎಂದು ಪೋಷಕರು, ಸಾರ್ವಜನಿಕರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸೂಕ್ತ ಕ್ರಮ ಕೈಗೊಂಡು ಪರೀಕ್ಷೆ ಬರೆಯಲು ಜೊತೆಗೆ ಮುಂದಿನ ವಿಷಯಗಳ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.