ವಿಜಯನಗರವಾಣಿ
ಸಿರುಗುಪ್ಪ: ಸಮೀಪದ ಎರಕಲ್ಲು ಗ್ರಾಮದ ಬಳಿ ತುಂಗಭದ್ರಾ ನದಿಗೆ ಮೀನುಗಾರಿಕೆ ಇಲಾಖೆಯಿಂದ ಗುರುವಾರ 3ಲಕ್ಷ ಸಾಮಾನ್ಯ ಗಂಡ ತಳಿ ಮೀನು ಮರಿಗಳನ್ನು ಬಿಡಲಾಯಿತು.
ಬಳಿಕ ಬಳ್ಳಾರಿಯ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆ. ಶಿವಣ್ಣ ಮಾತನಾಡಿ, ಸ್ಥಳೀಯ ಮೀನುಗಾರರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನದಿಗೆ ಮೀನುಮರಿಗಳನ್ನು ಬಿಡಲಾಗಿದೆ.
ತುಂಗಭದ್ರಾ ನದಿಪಾತ್ರದ ಮಣ್ಣೂರು ಗ್ರಾಮದಿಂದ ಹಚ್ಚೊಳ್ಳಿ ವರೆಗಿನ 6೦ ಕಿ.ಮೀ ವಿಸ್ತಾರ ಹೊಂದಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಎಂ. ಎಸ್. ಸೋಮಲಿಂಗಪ್ಪ ಮಾತನಾಡಿ, ಈ ಭಾಗದಲ್ಲಿ ಸುಮಾರು 400 ಜನ ಮೀನುಗಾರಿಕೆ ಅವಲಂಬಿಸಿದ್ದು, ಮತ್ಸ್ಯಾಶ್ರಯ ಯೋಜನೆಯಡಿ 34 ಮನೆಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.
15 ಜನ ಮೀನುಗಾರರಿಗೆ ತಲಾ ರೂ. 10ಸಾವಿರ ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ 100ಹೆಕ್ಟೇರ್ ಪ್ರದೇಶದಲ್ಲಿ ಮೀನುಕೆರೆ ನಿರ್ಮಿಸುವ ಗುರಿ ಹೊಂದಿದ್ದು, ಈಗಾಗಲೇ 50ಹೆಕ್ಟೇರ್ ಪ್ರದೇಶದಲ್ಲಿ ಮೀನುಕೆರೆ ನಿರ್ಮಿಸಲಾಗಿದೆ ಎಂದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಹೊಂಡ, ಐಸ್‍ಪ್ಲ್ಯಾಂಟ್, ಕೋಲ್ಡ್ ಸ್ಟೋರೇಜ್ ನಿರ್ಮಿಸಿಕೊಳ್ಳಲು ಸಹಾಯಧನ ಒದಗಿಸಲಾಗುವುದು. ಕೆಎಂಆರ್‍ಸಿ ಯೋಜನೆಯಡಿ 2023-24ನೇ ಸಾಲಿನಿಂದ ಪ್ರತಿವರ್ಷ ಕಂಪ್ಲಿ ಮತ್ತು ಸಿರುಗುಪ್ಪ ಭಾಗಗಳಲ್ಲಿ ತಲಾ 6ಲಕ್ಷ ದೊಡ್ಡ ಗಾತ್ರದ ಮೀನುಗಳ ಬಿತ್ತನೆ ಮಾಡಲಾಗುವುದು ಎಂದು ವಿವರಿಸಿದರು.
ಎರಕಲ್ಲು, ಮಣ್ಣೂರು, ನಡುವಿ, ನಿಟ್ಟೂರು ಸೇರಿದಂತೆ ವಿವಿಧ ಗ್ರಾಮಗಳ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಮೀನುಗಾರರು ಹಾಜರಿದ್ದರು.