ಧಾರವಾಡ ಎಪಿಎಂಸಿ ಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿ ಕೇಂದ್ರ ಆರಂಭ

ಧಾರವಾಡ ; ಮಾ.10: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಕಡಲೆ ಕಾಳು ಖರೀದಿ ಮಾಡಲು ಧಾರವಾಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ಧಾರವಾಡ ನೂತನ ಎಪಿಎಂಸಿ ಆವರಣದಲ್ಲಿ ಸರ್ಕಾರಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ತಾಲೂಕಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಮಲ್ಲಪ್ಪ ಹುಲ್ಲೂರ ಹೇಳಿದರು.

ಅವರು ಇಂದು ಮುಂಜಾನೆ ಎಪಿಎಂಸಿ ಆವರಣದಲ್ಲಿ ಸಂಘದಿಂದ ಆರಂಭಿಸಿದ ಕಡಲೆಕಾಳು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಧಾರವಾಡ ತಾಲೂಕಿನ ಸುಮಾರು 1,000 ಕ್ಕೂ ಹೆಚ್ಚು ರೈತರು ಕಡಲೆ ಕಾಳು ಮಾರಾಟ ಮಾಡಲು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ರೈತರಿಗೆ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಮಾರಾಟಕ್ಕೆ ನೋಂದಣಿ ಮಾಡಿಸಿಕೊಳ್ಳಲು ಮಾರ್ಚ್ 31, 2023 ರ ವರಗೆ ಅವಕಾಶವಿದೆ.

ನೋಂದಣಿ ಆಗಿರುವ ರೈತರ ಕಾಳು ಖರೀದಿಗೆ ಮೇ 15, 2023ರ ವರಗೆ ಕಾಲಾವಕಾಶವಿದೆ. ಈ ಅವಕಾಶವನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಲ್ಲಪ್ಪ ಹುಲ್ಲೂರ ತಿಳಿಸಿದರು.

ಸಂಘದ ನಿರ್ದೇಶಕ ಶಂಕ್ರಯ್ಯ ಮಠಪತಿ ಅವರು ಮಾತನಾಡಿ, ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ ರೂ.5,335/- ದರ ನೀಡಲಾಗುತ್ತಿದೆ. ಪ್ರತಿ ಎಕರೆಗೆ 4 ಕ್ವಿಂಟಲ್‍ದಂತೆ

ಗರಿಷ್ಠ 15 ಕ್ವಿಂಟಲ್ ಕಡಲೆಕಾಳು ಉತ್ಪನ್ನವನ್ನು ಪ್ರತಿ ರೈತನಿಂದ ಖರೀದಿಸಲಾಗುತ್ತದೆ. ಯಾವುದೇ ಮದ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಸರ್ಕಾರದ ಖರೀದಿ ಕೇಂದ್ರಕ್ಕೆ ತಮ್ಮ ಕಡಲೆಕಾಳು ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂದು ಅವರು ತಿಳಿಸಿದರು.

ಸಂಘದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಿವಾನಂದ ಕೆಲಗೇರಿ ಪ್ರಾಸ್ತವಿಕವಾಗಿ ಮಾತನಾಡಿ, ಉತ್ತಮ ದರದಲ್ಲಿ ಕಡಲೆಕಾಳು ಖರೀದಿಗೆ ಸರ್ಕಾರವೇ ಖರೀದಿ ಕೇಂದ್ರ ಆರಂಭಿಸಿದೆ. ಇತರ ವ್ಯಾಪಾರಸ್ಥರು ಕಡಿಮೆ ದರದಲ್ಲಿ ಕಡಲೆಕಾಳು ಖರೀದಿ ಮಾಡುತ್ತಾರೆ, ರೈತರಿಗೆ ಆರ್ಥಿಕವಾಗಿ ಅನುಕೂಲವಾಗಲು ಬೆಂಬಲಬೆಲೆ ಯೋಜನೆಯಡಿ ಸರಕಾರದಿಂದಲೇ ಈ ಖರೀದಿ ಆರಂಭಿಸಲಾಗಿದೆ.

ಕಡಲೆ ಬೆಳೆದ ರೈತರು ಕಡ್ಡಾಯವಾಗಿ ಸರಕಾರಿ ಕಡಲೆ ಖರೀದಿ ಕೇಂದ್ರಗಳಲ್ಲಿಯೇ ತಮ್ಮ ಹೆಸರು ನೋಂದಣಿ ಮಾಡಿಸಬೇಕು. ನೋಂದಣಿಗೆ ರೈತರ ಆಧಾರಕಾರ್ಡ್, ಬ್ಯಾಂಕ್ ಪಾಸ್‍ಪುಸ್ತಕ ಮತ್ತು ರೈತನ ಹೆಸರಿರುವ ಭೂಮಿ ಉತಾರ ಹಾಗೂ ಕಡಲೆ ಬೆಳೆದ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು ಎಂದು ಅವರು ತಿಳಿಸಿದರು.

ಖರೀದಿ ಕೇಂದ್ರ ಚಾಲನಾ ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಹಾಯಕ ಕಾರ್ಯದರ್ಶಿ ಅಜೇಯ ಹಳೆಮನಿ, ಸಂಘದ ಉಪಾಧ್ಯಕ್ಷ ರಾಮಣ್ಣ ಖನಾಜಿ, ಹಾಗೂ ನಿರ್ದೇಶಕ ಶಿವನಗೌಡ ಪಾಟೀಲ ಸೇರಿದಂತೆ ಸಂಘದ ಉಳಿದ ನಿರ್ದೇಶಕರು, ರೈತರು, ಸಿಬ್ಬಂದಿಗಳು ಭಾಗವಹಿಸಿದ್ದರು.

ಟಿಎಪಿಸಿಎಂಎಸ್ ಸಂಘದ ಶರಣಪ್ಪ ಹುಗ್ಗಿ ಸ್ವಾಗತಿಸಿದರು. ಬಸವರಾಜ ಕಿತ್ತೂರ ಕಾರ್ಯಕ್ರಮ ನಿರೂಪಿಸಿದರು. ಬಾಳಪ್ಪ ಬೂದಿಹಾಳ ವಂದಿಸಿದರು.

Share and Enjoy !

Shares