ಬಂಗಾರದ ಬೆಳೆ ಬೆಳೆದರೂ ಬೆಲೆ ಇಲ್ಲದೇ ರೈತ ಕಂಗಾಲು

Share and Enjoy !

Shares
Listen to this article

ಧಾರವಾಡ: ಜಿಲ್ಲೆಯಲ್ಲಿ ಹತ್ತಿ ಕೂಡ ಒಂದು ಪ್ರಮುಖ ಬೆಳೆ. ಧಾರವಾಡ, ನವಲಗುಂದ, ಅಣ್ಣಿಗೇರಿ ತಾಲೂಕಿನ ಭಾಗದಲ್ಲಿ ಹತ್ತಿಯನ್ನ ಹೆಚ್ಚಾಗಿ ಬೆಳೆಯುತ್ತಾರೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್​ಗೆ 12 ಸಾವಿರ ರೂಪಾಯಿಯವರೆಗೂ ಬೆಲೆಯಿತ್ತು. ಈ ವರ್ಷ ಅದು 14 ಸಾವಿರಕ್ಕೆ ಏರುವ ಸಾಧ್ಯತೆ ಇತ್ತು. ಆದರೆ ಇತ್ತೀಚೆಗೆ ಹತ್ತು ಸಾವಿರದವರೆಗೂ ಬಂದಿದ್ದ ಬೆಲೆ ಏಕಾಏಕಿಯಾಗಿ ಈಗ ಏಳು ಸಾವಿರಕ್ಕೆ ಕುಸಿದಿದೆ. ಈ ಕಾರಣದಿಂದಾಗಿ ಈಗ ರೈತರು ಹತ್ತಿಯನ್ನು ಬಿಡಿಸದೇ ಹಾಗೆಯೇ ಗದ್ದೆಯಲ್ಲಿಯೇ ಬಿಟ್ಟಿದ್ದಾರೆ. ಗದ್ದೆಯಲ್ಲಿಯೇ ಹತ್ತಿ ಬೆಳೆ ಹಾಳಾಗಿ ಹೋಗುತ್ತಿದೆ. ಹತ್ತಿ ಬೆಳೆಗೆ ಖರ್ಚು ಮಾಡಿರುವ ಹಣಕ್ಕೂ ಮತ್ತು ಇದೀಗ ಇದರಿಂದ ಬರೋ ಆದಾಯಕ್ಕೂ ತಾಳೆ ಹಾಕಿದರೆ ರೈತರಿಗೆ ತೀವ್ರ ನಷ್ಟವಾಗುತ್ತದೆ. ಹೀಗಾಗಿ ಸಾಕಷ್ಟು ಹಣ ಮೈಮೇಲೆ ಬರೋ ಸಾಧ್ಯತೆ ಇದೆ. ಜೊತೆಗೆ ಈಗ ಕಟಾವು ಮಾಡುವ ಕೂಲಿಗಾರರಿಗೆ ಹಣ ಕೊಡಲು ಸಾಲ ಮಾಡಬೇಕಾಗಿದೆ. ಹೀಗಾಗಿ ಹಾಗೆಯೇ ಬಿಟ್ಟಿದ್ದೇವೆ ಅನ್ನುತ್ತಾರೆ ರೈತರು.

ರೈತರಿಗೆ ಈ ಸಲ ಮಳೆ ಸಾಕಷ್ಟು ಕಾಟ ಕೊಟ್ಟಿತ್ತು. ಹೀಗಾಗಿ ಪ್ರತಿ ಎಕರೆಗೆ ಏನಿಲ್ಲವೆಂದರೂ ಸುಮಾರು 50 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ ಇಳುವರಿ ಮಾತ್ರ ಈ ಸಲ ಕಡಿಮೆ ಬಂದಿದೆ. ಪ್ರತಿ ಸಲ ಎಕರೆಗೆ 12 ಕ್ವಿಂಟಾಲ್​ವರೆಗೂ ಬರುತ್ತಿದ್ದ ಇಳುವರಿ ಈ ಸಲ 8 ಕ್ವಿಂಟಾಲ್​ಗೆ ಇಳಿದಿದೆ. ಆದರೆ ಈ ಸಮಯದಲ್ಲಿಯೇ ಏಕಾಏಕಿಯಾಗಿ ಬೆಲೆ ಕುಸಿದಿದೆ. ಸರ್ಕಾರದ ಬೆಂಬಲ ಬೆಲೆಯ ಖರೀದಿ ಕೇಂದ್ರದಲ್ಲಿಯೂ 8 ಸಾವಿರಕ್ಕಿಂತ ಹೆಚ್ಚು ಬೆಲೆ ಇಲ್ಲ. ಹೀಗಾಗಿ ಸರ್ಕಾರದ ಖರೀದಿ ಕೇಂದ್ರವೂ ನಮಗೆ ಉಪಯೋಗ ಆಗಿಲ್ಲ. ಹೀಗಾಗಿ ಸರ್ಕಾರಕ್ಕೂ ನಾವು ಬೇಡವಾಗಿ ಹೋಗಿದ್ದೇವೆ ಎಂಬುದು ರೈತರ ಅಳಲು.

ಪ್ರತಿ ಬಾರಿಯೂ ಒಂದಿಲ್ಲ ಒಂದು ಸಮಸ್ಯೆಯಿಂದ ರೈತರು ಬಳಲುತ್ತಲೇ ಇದ್ದಾರೆ. ಒಂದು ಬಾರಿ ಅತಿವೃಷ್ಟಿಯಾದರೆ ಮತ್ತೊಮ್ಮೆ ಅನಾವೃಷ್ಟಿ. ಬೆಲೆ ಚೆನ್ನಾಗಿ ಇಲ್ಲ ಅನ್ನೋ ಕಾರಣಕ್ಕೆ ರೈತರು ನಿಸ್ಸಾಹಯಕರಾಗಿ ಹತ್ತಿ ಕಿತ್ತದೇ ಬಿಟ್ಟಿದ್ದಾರೆ. ಇದರಿಂದಾಗಿ ಅದು ಅಲ್ಲಿಯೇ ಹಾಳಾಗಿ ಹೋಗುತ್ತಿದ್ದು, ಮತ್ತೆ ರೈತರಿಗೆ ಹೊರೆಯಾಗೋದಂತೂ ಸತ್ಯ.

 

 

 

 

Share and Enjoy !

Shares