ಬೆಂಗಳೂರು: ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರನ್ನು ಕೋಟ್ಯಂತರ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಅಪ್ಪು ಜನ್ಮದಿನ ಆಚರಿಸಲಾಯಿತು. ಒಂದು ವೇಳೆ ಅವರು ಭೌತಿಕವಾಗಿ ನಮ್ಮ ಜೊತೆ ಇದ್ದಿದ್ದರೆ ಖಂಡಿತವಾಗಿಯೂ ಬರ್ತ್ಡೇ ಪ್ರಯುಕ್ತ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿದ್ದವು. ಆದರೆ ಈಗ ಅವರಿಲ್ಲ ಎಂಬ ನೋವಿನಲ್ಲೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲಾಗಿದೆ. ಆಕಾಶದಲ್ಲಿನ ನಕ್ಷತ್ರವೊಂದಕ್ಕೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಾಗಿದೆ. ‘ದಿ ಬಿಗ್ ಲಿಟ್ಲ್’ ಸಂಸ್ಥೆಯ ಈ ಕಾರ್ಯವನ್ನು ತಿಳಿಸಲು ವಿಶೇಷ ವಿಡಿಯೋ ಹಂಚಿಕೊಳ್ಳಲಾಗಿದೆ. ಅದಕ್ಕೆ ವಿಕ್ರಮ್ ರವಿಚಂದ್ರನ್ ಅವರು ಧ್ವನಿ ನೀಡಿದ್ದಾರೆ.
ಆಗಸದಲ್ಲಿ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿವೆ. ಅವುಗಳಲ್ಲಿ ಒಂದು ತಾರೆಗೆ ಅಧಿಕೃತವಾಗಿ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಹೆಸರು ರಿಜಿಸ್ಟರ್ ಮಾಡಿಸಿರುವ ಪ್ರಮಾಣಪತ್ರವನ್ನು ‘ದಿ ಬಿಗ್ ಲಿಟ್ಲ್’ ಸಂಸ್ಥೆ ಹಂಚಿಕೊಂಡಿದೆ. ಆ ಮೂಲಕ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಲಾಗಿದೆ. ಅಪ್ಪು ಹೆಸರನ್ನು ಶಾಶ್ವತವಾಗಿಸುವ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ವಿಕ್ರಮ್ ರವಿಚಂದ್ರನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಪುನೀತ್ ರಾಜ್ಕುಮಾರ್ ಅವರಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ತೊಡಗಿಸಿಕೊಳ್ಳಲು ನನಗೆ ತುಂಬಾ ಸಂತೋಷ ಆಗುತ್ತದೆ. ನಾನು ಚಿಕ್ಕ ವಯಸ್ಸಿನಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಸಿನಿಮಾದ ಆಚೆಗಿನ ಅವರ ಜೀವನ ನನಗೆ ಸ್ಫೂರ್ತಿ. ಅವರಿಗಾಗಿ ಮಾಡುತ್ತಿರುವ ಈ ಒಳ್ಳೆಯ ಕೆಲಸದಲ್ಲಿ ನಾನು ಭಾಗಿ ಆಗಿರೋದು ತುಂಬಾ ಖುಷಿ ಕೊಟ್ಟಿದೆ’ ಎಂದು ಅವರು ಹೇಳಿದ್ದಾರೆ.
ವಿಕ್ರಮ್ ರವಿಚಂದ್ರನ್, ಕಾವ್ಯ ಶಂಕರೇಗೌಡ ‘ದಿ ಬಿಗ್ ಲಿಟ್ಲ್’ ಕಂಪನಿಯ ಸಂಸ್ಥಾಪಕಿ ಕಾವ್ಯ ಶಂಕರೇಗೌಡ ಅವರು ಈ ಕುರಿತು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಪುನೀತ್ ರಾಜ್ಕುಮಾರ್ ಅವರು ಎಲ್ಲರಿಗೂ ಸ್ಫೂರ್ತಿ. ನಮ್ಮ ಕಂಪನಿ ಕೂಡ ಅವರಿಂದ ತುಂಬ ಕಲಿತಿದೆ. ನನ್ನಂತಹ ಸಾಮಾನ್ಯ ವ್ಯಕ್ತಿಗಳು ಸೂಪರ್ ಸ್ಟಾರ್ಗಳ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಅವರು ಬದಲಾಯಿಸಿದ್ದಾರೆ. ನಕ್ಷತ್ರಗಳು ನಮ್ಮ ಮಾರ್ಗದರ್ಶಿ ಶಕ್ತಿಯಾಗಿರುತ್ತವೆ. ಆ ಕಲ್ಪನೆಯಡಿ ನಾವು ಮಾಡಿರುವ ಕಾನ್ಸೆಪ್ಟ್ ಮೂಡಿಬಂದಿದೆ. ನಮ್ಮ ಆಪ್ತರು ನಿಧನರಾದಾಗ ನಕ್ಷತ್ರಗಳಾಗುತ್ತಾರೆ ಅಂತ ನಾವು ನಂಬಿದ್ದೇವೆ. ಅಪ್ಪು ನಮಗೆಲ್ಲ ಸ್ಟಾರ್ ಆಗಿದ್ದರು. ಅವರ ಹೆಸರಲ್ಲಿ ಒಂದು ನಕ್ಷತ್ರ ಇರಬೇಕೆಂದು ನಾವು ಬಯಸುತ್ತೇವೆ. ನಮ್ಮೆಲ್ಲರ ಅತ್ಯುತ್ತಮ ಸ್ಫೂರ್ತಿಯ ಶಕ್ತಿಗೆ ಇದು ನಮ್ಮ ಚಿಕ್ಕ ಕೊಡುಗೆ’ ಎಂದು ಕಾವ್ಯ ಶಂಕರೇಗೌಡ ಹೇಳಿದ್ದಾರೆ