ವಿಜಯನಗರವಾಣಿ ಸುದ್ದಿ
ಕುರುಗೋಡು:ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಯುವಚೈತನ್ಯ ಸಮಾವೇಶಕ್ಕೆ ಬಳ್ಳಾರಿ ರಸ್ತೆಯ ಇಕ್ಕೆಲಗಳಲ್ಲಿ ಹಾಕಿದ್ದ ಬಿಜೆಪಿ ಬಾವುಟ ಹಾಗೂ ಬ್ಯಾನರ್ ಗಳನ್ನು ತಹಶಿಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಏಕಾಏಕಿ ತೆರವುಗೊಳಿಸಿದ ಘಟನೆ ಸೋಮವಾರ ರಾತ್ರಿ 8 ಗಂಟೆಯ ಹೊತ್ತಿಗೆ ಜರುಗಿತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಕೆಂಡಕಾರಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಫ್ಲಕ್ಸ್ ಹಾಕುತ್ತಿದ್ದು ಮನೆ ಮನೆಗೆ ಕಾರ್ಡ್ ಹಂಚುವ ಮೂಲಕ ಮತದಾರರಿಗೆ ಆಮಿಷ ಒಡ್ಡುತ್ತಿದೆ ಇದಕ್ಕೆ ತಹಶಿಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ.ಮೊದಲು ಅವುಗಳನ್ನು ತೆರವುಗೊಳಿಸಿ.
ಈಗ ಬಿಜೆಪಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವುದನ್ನು ನೋಡಿದರೆ ಶಾಸಕ ಗಣೇಶ್ ರವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ತಹಶಿಲ್ದಾರ್
ಗುರುರಾಜ ಎಂ.ಛಲವಾದಿ
ರಸ್ತೆ ಬದಿ ಬ್ಯಾನರ್ ಕಟ್ಟಲು ಯಾವುದೇ ಪರವಾನಿಗೆ ನಾನು ನೀಡಿಲ್ಲ,ಡಿಸಿ ಆದೇಶದ ಮೇಲೆ ತೆರೆವು ಕಾರ್ಯ ಮಾಡುತ್ತಿದ್ದೇವೆ ಎಂದರು.
ಇದಕ್ಕೆ ರೊಚ್ಚಿಗೆದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಗೌಡ ಹಾಗೂ ಕಾರ್ಯಕರ್ತರು ಗ್ಯಾರಂಟಿ ಕಾರ್ಡ್ ಬ್ಯಾನರ್ ತೆರವು ಮಾಡದಿದ್ದರೆ ನಾವೂ ಬ್ಯಾನರ್ ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.
ಆಗ ಮಧ್ಯ ಪ್ರವೇಶಿಸಿದ ಪಿಎಸ್ಐ ಸಣ್ಣ ಈರೇಶ ಹಾಗೂ
ಪೋಲಿಸರ ತಂಡ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಈ ಸಂದರ್ಭದಲ್ಲಿ ಸಿಪಿಐ ಜಯಪ್ರಕಾಶ್ ಮಾತನಾಡಿ ಚುನಾವಣೆ ನಿಯಮಗಳನ್ನು ಯಾರೂ ಮೀರಬಾರದು ಎಂದು ತಿಳಿ ಹೇಳಿದರು.ಡಿಸಿಯವರ ಆದೇಶದಂತೆ ಸದ್ಯ ಹಾಕಿರುವ ಬ್ಯಾನರ್ ಗಳನ್ನು ತೆರೆವುಗೊಳಿಸಲು ಮುಂದಾಗುತ್ತೇವೆ ಎಂದರು.
ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಸುರೇಶ್ ಬಾಬು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಬೇಡಿ ಎಂದು ಕಾರ್ಯಕರ್ತರಿಗೆ ಕರೆ ತಿಳಿ ಹೇಳಿ ಅಲ್ಲಿಂದ ತೆರಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು,ಪೋಲಿಸ್ ಇಲಾಖೆ, ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.