ಬೆಂಗಳೂರು (ಮಾ.21) : ರಾಜ್ಯ ಸರ್ಕಾರವು ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ಥಾಪಿಸಿರುವ ‘ಶೂನ್ಯ ಬಜೆಟ್’ ಮಾದರಿಯ ಏಳು ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳನ್ನು ನೇಮಿಸಿ ಸೋಮವಾರ ಆದೇಶ ಹೊರಡಿಸಿದೆ.
ಪ್ರತಿ ವಿವಿಗೂ ಕುಲಪತಿಗಳನ್ನು ನೇಮಿಸಿ ಪ್ರತ್ಯೇಕ ಆದೇಶ ಹೊರಡಿಸಲಾಗಿದ್ದು, ಆ ಪ್ರಕಾರ ಬೆಂಗಳೂರು ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ. ರವಿ ಅವರನ್ನು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಲಾಗಿದೆ. ಅದೇ ರೀತಿ ಬಾಗಲಕೋಟೆ ತೋಟಗಾರಿಕೆ ವಿವಿಯ ಪ್ರಾಧ್ಯಾಪಕ ಡಾ.ಅಶೋಕ ಸಂಗಪ್ಪ ಆಲೂರುಅವರನ್ನು ಕೊಡಗು ವಿವಿ ಕುಲಪತಿಯಾಗಿ, ಮೈಸೂರು ವಿವಿ ಮಾನವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಆರ್.ಗಂಗಾಧರ ಅವರನ್ನು ಚಾಮರಾಜನಗರ ವಿವಿ ಕುಲಪತಿಯಾಗಿ, ಬೆಳಗಾವಿಯ ಕೆ.ಎಸ್.ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಆನಂದ್ ಶರದ್ ದೇಶಪಾಂಡೆ ಅವರನ್ನು ಬಾಗಲಕೋಟೆ ವಿವಿ ಕುಲಪತಿಯಾಗಿ, ಕುವೆಂಪು ವಿವಿಯ ಡಾ.ಬಿ.ಎಸ್. ಬಿರಾದಾರ್ ಅವರನ್ನು ಬೀದರ್ ವಿವಿ ಕುಲಪತಿಯಾಗಿ, ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಡಾ.ಸುರೇಶ್ ಎಚ್. ಜಂಗಮಶೆಟ್ಟಿಅವರನ್ನು ಹಾವೇರಿ ವಿವಿ ಕುಲಪತಿಯಾಗಿ ಮತ್ತು ಧಾರವಾಡದ ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಸಿ. ತಾರಾನಾಥ್ ಅವರನ್ನು ಹಾಸನ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಿಸಲಾಗಿದೆ.
ಶೂನ್ಯ ಬಜೆಟ್ ವಿವಿ?:
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಇರಬೇಕೆಂಬ ತತ್ವದಡಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್‌ನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಈ ಏಳು ವಿವಿಗಳ ಸ್ಥಾಪನೆಯ ವಿಧೇಯಕಗಳಿಗೆ ಅಂಗೀಕಾರ ಪಡೆದಿತ್ತು. ಬಳಿಕ ಅಧಿಕೃತವಾಗಿ ವಿವಿಗಳನ್ನು ಸ್ಥಾಪಿಸಿ ಅವುಗಳ ಆಡಳಿತ ಕೇಂದ್ರ ಸ್ಥಾನಗಳನ್ನು ಸೂಚಿಸಿ ಆದೇಶ ಮಾಡಿತ್ತು. ಇವುಗಳ ವಿಶೇಷವೆಂದರೆ ಹೊಸ ವಿವಿಗಳಿಗೆ ನೂರಾರು ಎಕರೆ ಕ್ಯಾಂಪಸ್ ಆಗಲಿ, ಹೊಸ ಕಟ್ಟಡ, ಹೊಸ ನೇಮಕಾತಿ, ನೂರಾರು ಕೋಟಿ ಅನುದಾನ ಯಾವುದೂ ಇಲ್ಲ. ಜಿಲ್ಲೆಯಲ್ಲಿ ಇರುವ ಪ್ರಮುಖ ಕಾಲೇಜೊಂದನ್ನೇ ಆಡಳಿತ ಕೇಂದ್ರವಾಗಿಸಿ ಅದಕ್ಕೆ ಜಿಲ್ಲೆಯ ಕಾಲೇಜುಗಳನ್ನು ಸಂಯೋಜನೆ ನೀಡಿ ಶೂನ್ಯ ಹೂಡಿಕೆ ಮಾದರಿಯಲ್ಲಿ ವಿವಿಗಳನ್ನು ರಚಿಸಲಾಗಿದೆ.