ಡಾ.ಪುನೀತ್ ರಾಜ್ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

ಬೆಂಗಳೂರು: ದಿವಂಗತ ನಟ ಡಾ.ಪುನೀತ್ ರಾಜ್​ಕುಮಾರ್ ಅವರ ಹೆಸರಿನಲ್ಲಿ ಗೋವಿಂದರಾಜನಗರ ಕ್ಷೇತ್ರದ ನಾಯಂಡಹಳ್ಳಿಯಲ್ಲಿ ನಿರ್ಮಾಣ ಮಾಡಲಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು. ಇದೇ ವೇಳೆ ಆಸ್ಪತ್ರೆಯೊಳಗೆ ಸ್ಥಾಪಿಸಲಾಗಿರುವ ಪುನೀತ್ ಪುತ್ಥಳಿಯನ್ನು ಕೂಡ ಮುಖ್ಯಮಂತ್ರಿಯವರು ಅನಾವರಣಗೊಳಿಸಿದರು. ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಡಾ.ಪುನೀತ್ ರಾಜ್‌ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 209 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಘಾಟನೆ ವೇಳೆ ನಟ, ಪುನೀತ್ ಸಹೋದರ ರಾಘವೇಂದ್ರ ರಾಜ್​ಕುಮಾರ್ , ವಸತಿ ಸಚಿವ ವಿ. ಸೋಮಣ್ಣ, ಅಶ್ವಿನಿ ಪುನೀತ್ ರಾಜ್‍ಕುಮಾರ್, ಎಂ‌ಎಲ್‌ಸಿ ಅ ದೇವೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್.ಆರ್.ರಮೇಶ್ ಸೇರಿದಂತೆ ಮತ್ತಿತರರು ಇದ್ದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಎಲ್ಲರ ಸಹಕಾರದಿಂದ ಬೆಂಗಳೂರಿಗೆ ಉತ್ತಮ ಹೆಸರು ಬರಲಿದೆ. ಈಗಾಗಲೇ ಬೆಂಗಳೂರಿಗೆ ಬ್ರಾಂಡ್ ಹೆಸರಿದ್ದು, ಬ್ರ್ಯಾಂಡ್ ಬೆಂಗಳೂರು ಹೆಸರನ್ನು ಯಾರೂ ಕೆಡಿಸಲು ಆಗುವುದಿಲ್ಲ. ಬೇರೆ ನಗರಗಳಿಗೆ ಹೋಲಿಸಿಕೊಂಡರೆ ಬೆಂಗಳೂರು ಹತ್ತು ಪಟ್ಟು ಹೆಚ್ಚು ಅಭಿವೃದ್ಧಿ ಆಗಿದೆ ಎಂದರು. ಇದೇ ವೇಳೆ ಸೋಮಣ್ಣ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಅವರು, ಸೋಮಣ್ಣ ಅವರು ಅಧಿಕಾರದ ಕೆಲಸ ಮಾಡಿಲ್ಲ, ಅವರು ಸದಾ ಜನರ ಕೆಲಸ ಮಾಡಿದವರು. ಅದು ಇದು ಅಭಿವೃದ್ಧಿ ಅಂತ ಬಂದು ಹೋಗುತ್ತಿರುತ್ತಾರೆ. ಸ್ಲಂ ಜನಕ್ಕೆ ಮನೆ ಕೊಡಬೇಕು ಅಂತ ಬರುತ್ತಾರೆ. ಗೋವಿಂದರಾಜನಗರಕ್ಕೆ ಸೋಮಣ್ಣ ಬರುವ ಮುನ್ನ ಹೇಗಿತ್ತು? ಈಗ ಹೇಗಿದೆ ಅಂತ ನೋಡಬೇಕು ಎಂದರು.

Share and Enjoy !

Shares