ಬುದ್ಧನ ಪ್ರಬುದ್ಧತೆಯ ಪ್ರಭೆಯಲ್ಲಿ ಮಿಂದೆದ್ದ ಯುಗಾದಿ

Share and Enjoy !

Shares

   ಯುಗಾದಿಯ ಸಂಭ್ರಮದ ಭ್ರಮೆಯಲ್ಲಿ ದಿನವಿಡೀ ತಳ್ಳಿದ್ದಾಗಿತ್ತು ಸಂಜೆಗೆ ರಾಘವ ಕಲಾ ಮಂದಿರಕ್ಕೆ ಹೋಗುವ ವೇಳಾ ಪಟ್ಟಿ ಇತ್ತು. ಜಡದೇಹ ಹೊತ್ತು ರಾಘವ ಕಲಾ ಮಂದಿರಕ್ಕೆ ಬಂದಾಗ ಪಂಚಾಂಗ ಪಠಣದ ಪ್ರವಚನ ಸಾಗಿತ್ತು. ಕೆಲವೇ ಹಿರಿ(ನೆರೆ)ತಲೆಗಳು ಆಸೀನರಾಗಿ ತಮ್ಮ ಭವಿಷ್ಯದ  ಬಗ್ಗೆ ಕುತೂಹಲಿಗಳಾಗಿದ್ದರು. ಪಂಚಾಂಗ ಪಠಣ ಮುಗಿಯುತ್ತಲೇ ಕೆಲವರು ಹೊರಟೇ ಬಿಟ್ಟರು ಸಿದ್ಧಾರ್ಥ ಅರಮನೆ ತೊರೆದಂತೆ. ಉಳಿದವರು ಬೆರಳೆಣಿಕೆಯಷ್ಟು ಕುತೂಹಲಿಗರು .ಕೆಲವೇ ನಿಮಿಷಗಳಲ್ಲಿ ನಾಟಕ ಪ್ರಾರಂಭದ ಗಂಟೆ ಹೊಡೆಯುತ್ತಲೇ ನನ್ನಲ್ಲಿನ ಜಡತ್ವ ಜರಿದು ಆಸಕ್ತಿ ಅರಳಿ ಮುಂದಿನ ಸೀಟಿನಲ್ಲಿ ಆಸೀನನಾದೆ. ಕೆಲವೇ ನಿಮಿಷಗಳಲ್ಲಿ ಪ್ರಾರಂಭವಾಯಿತು ನೋಡಿ ಬುದ್ಧನ ಪ್ರಬುದ್ದ ನಾಟಕದ ಮೋಡಿ. ಸಮುದಾಯ ಧಾರವಾಡ ಇವರು ಸಾದರಪಡಿಸಿದ ಬುದ್ಧ ಪ್ರಬುದ್ಧ ನಾಟಕದ ಪ್ರಭೆಯಲ್ಲಿ ಪ್ರೇಕ್ಷಕ ಮಹಾಶಯನಿಗೆ ಯುಗಾದಿಯ ಬೇವು ಬೆಲ್ಲದ ಸಂಭ್ರಮ.

ಕಥೆಯೊಳಗಿನ ನಾಟಕ

 ಪಟ್ಟಾಭಿಷಿಕ್ತನಾದ ಮಹಾರಾಜ ಸಿದ್ದಾರ್ಥ ನಗರ ಸಂಚಾರಕ್ಕೆಂದು ಹೊರಟಾಗ ಅಲ್ಲಿ ಕಂಡ ವೃದ್ಧ, ರೋಗಿ ಹಾಗೂ ಸಾವಿನ ದೃಶ್ಯಗಳು ಸಿದ್ದಾರ್ಥನ ಮನ ಕಲಕುತ್ತವೆ ! ಅಷ್ಟೇ ಅಲ್ಲ ಅವನು ಅರಮನೆಯನ್ನು ತೊರೆದು ಜ್ಞಾನದಾಹಿಯಾಗಿ ತಪವನ್ನಾಚರಿಸಿ ಬುದ್ಧನನ್ನಾಗಿಸುವವರೆಗೂ  ಈ ಕಲಕುವಿಕೆ ನಿಲ್ಲುವುದಿಲ್ಲ, ನಂತರ ಬುದ್ದ ಪ್ರಬುದ್ಧನಾಗುವ ಪರಿಯನ್ನು ಲೇಖಕರು ಅತ್ಯಂತ ಕುಶಲತೆಯ ಕುಂಚದಲಿ ಬಹು ಜಾಣ್ಮೆಯಿಂದ ಚಿತ್ರಿಸಿದ್ದಾರೆ. ಬೌದ್ಧ ಭಿಕ್ಕುಗಳಿಗೆ ಬುದ್ದ ನೀಡುವ ಉಪದೇಶ ಇಡೀ ಮಾನವ ಕುಲಕ್ಕೇ ನೀಡುವ ಶಾಂತಿ ಸಂದೇಶದಂತಿದೆ. ಅಂಗುಲಿಮಾಲನ ಮನಃ ಪರಿವರ್ತನೆ ಸಂದರ್ಭ ಇಂದಿನ ಕ್ರೌರ್ಯದ ಜಗತ್ತು ಬದಲಾಗಬೇಕಾದ ಜರೂರತ್ತನ್ನು ಒತ್ತಿ ಹೇಳುತ್ತದೆ. ಜಗದ ಯಾವ ಮಾನವನೂ ಕ್ರೂರಿಯಲ್ಲ ಅವನಿಗೊದಗಿದ ಸಂದರ್ಭ ಹಾಗು ಸನ್ನಿವೇಶಗಳು ಅವನನ್ನು ಕ್ರೂರಿಯಾಗಿಸುತ್ತವೆ. ಹಾಗಾಗಿ ಕ್ರೂರಿಯೊಳಗಿನ ನೋವನ್ನು ಅರ್ಥೈಸಿಕೊಂಡು ಅದಕ್ಕೆ ಪರಿಹಾರವನ್ನು ನೀಡುವುದರಿಂದ ಬುದ್ಧ ಪ್ರಬುದ್ದನಾದ. ಸಿದ್ಧ ಜ್ಞಾನದಿಂದ ಬುದ್ದನಾದ, ಶಾಂತಿಯಿಂದ ಪ್ರಬುದ್ಧನಾದ ಎಂಬ ಸಂದೇಶ ಸಾರುವುದು ಈ ನಾಟಕ ರೂಪದ ಕಥೆಯ ಜೀವಾಳವಾಗಿದೆ. ಇಂತಹ ಒಂದು ಸುಂದರ ಕಥಾಹಂದರವನ್ನು ಡಾ.ಶ್ರೀಶೈಲ ಹುದ್ದಾರ ತಮ್ಮ ಕೃತಿಯ ಮೂಲಕ ಕಟ್ಟಿ ಕೊಟ್ಟಿದ್ದಾರೆ.

ನಾಟಕದ ಬುತ್ತಿಯನ್ನು ಪ್ರೇಕ್ಷಕನಿಗೆ ಉಣಿಸಿದ ರೀತಿ

ಕಥೆಗಾರ ನಾಟಕ ಕೃತಿ ಬರೆದು ನಿರ್ದೇಶಕನ ಕೈಗಿತ್ತು ಸುಮ್ಮನಾಗುತ್ತಾನೆ. ಮುಂದಿನ ಪಾತ್ರವೆಲ್ಲವೂ ನಿರ್ದೇಶಕನದ್ದೆ, ನಾಟಕದ ಕಥಾ ಬುತ್ತಿ ಎಷ್ಟೇ ರುಚಿಕಟ್ಟಾಗಿದ್ದರೂ ಅದನ್ನು ಪ್ರೇಕ್ಷಕನಿಗೆ ಉಣಬಡಿಸುವ ಬಹುಮುಖ್ಯ ಜಾಣ್ಮೆ ನಿರ್ದೇಶಕನಿ ಗಿರಬೇಕಾದುದು ಅತ್ಯಗತ್ಯ. ಈ ನಾಟಕದ ನಿರ್ದೇಶಕರಾದ-ಶ್ರೀವಾಸುದೇವ ಗಂಗೇರ ಇವರು ಬಹು ಜಾಣ್ಮೆ ಹಾಗೂ ಪ್ರಜ್ಞಾವಂತಿಕೆಯಿಂದ ಈ ನಾಟಕಕ್ಕೆ ವಿಶೇಷ ಮೆರಗನ್ನು ನೀಡಿದ್ದಾರೆ. ನಮ್ಮ ಜನಪದ ಕಲೆಯಾದ ಬಯಲಾಟದ ಮಾದರಿಯಲ್ಲಿ ಕಥೆಯನ್ನು ಪ್ರೇಕ್ಷಕನಿಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಅಂದರೆ ಕಥೆಯಲ್ಲಿ ಬರುವ ಪಾತ್ರಗಳನ್ನು ಸಾರಥಿ ಮಾತನಾಡಿಸಿ ಅವರನ್ನು ತಾವು ಯಾರು ಬಂದ ಕಾರಣ ತಿಳಿಸಿ ಎಂದು ಕೇಳುವುದು ಅದಕ್ಕೆ ಉತ್ತರವಾಗಿ ಪಾತ್ರಗಳು ಪೀಠಿಕೆಯ ಮಾತಿನಲ್ಲೇ ತಮ ಇತಿವೃತ್ತ ಹೇಳಿಕೊಳ್ಳುವ ವಿನೂತನ ಮಾದರಿ ತಂದಿದ್ದಾರೆ. ಆದರೆ ಅದೇಕೋ ಈ ಪ್ರಯೋಗ ಈ ನಾಟಕಕ್ಕೆ ಅಷ್ಟೇನೂ ಹೊಂದಿಕೊಂಡಂತೆ  ಕಾಣುವುದಿಲ್ಲ, ಆದರೂ ನಿರ್ದೇಶಕರ ಪ್ರಯತ್ನ ಪ್ರಶಂಸಾರ್ಹ. ವಿಸ್ತಾರವಾದ ಕಥಾಹಂದರವನ್ನು ಮೊಟಕುಮಾಡಿ ಮುಖ್ಯ ಘಟನೆಗಳನ್ನು ಮುನ್ನೆಲೆಗೆ ತಂದು ಕಥೆಯ ಆಶಯಕ್ಕೆ ನ್ಯಾಯ ಒದಗಿಸಿದ್ದಾರೆ. ಸಿದ್ಧಾರ್ಥ ಬುದ್ದನಾಗುವ ಪರಿಯನ್ನು ಸಾಂಕೇತಿಕವಾಗಿಸಿ ಬುದ್ದ ಪ್ರಬುದ್ಧನಾಗುವ ಪ್ರಸಂಗವನ್ನು ಪ್ರೇಕ್ಷಕನ ಕಣ್ಣರಳುವಂತೆ ಹೃದಯ ಮಿಡಿಯುವಂತೆ ವಿನ್ಯಾಸಗೊಳಿಸಿದ್ದಾರೆ. ಬುದ್ಧನ ಪ್ರಬುದ್ಧತೆಯಲ್ಲಿ ನಿರ್ದೇಶಕನ ಬದ್ಧತೆ ಎದ್ದು ಕಾಣುತ್ತದೆ. ಒಂದು ಸುಂದರ ಕಲಾಕೃತಿಯನ್ನು ತಮ್ಮ ಕಲ್ಪನೆಯ ವಿಲಾಸದಲಿ ವಿನ್ಯಾಸಗೊಳಿಸಿದ್ದಾರೆ. ಸುಮಾರು ೧೨ ದೃಶ್ಯಗಳಲ್ಲಿ ಈ ನಾಟಕದ ಹರವಿದೆ, ಪ್ರತಿ ದೃಶ್ಯದಲ್ಲಿ ನಾಟಕದ ಜೀವಂತಿಕೆ ಇದೆ. ಕೊನೆಯ ದೃಶ್ಯದಲ್ಲಿ  ಬುದ್ಧನ ಪ್ರಬುದ್ಧ ಮನಸ್ಸಿನ ಅಭಿವ್ಯಕ್ತಿ ಅನಾವರಣೆಗೊಂಡು ನಾಟಕದ ಶೀರ್ಷಿಕೆಯನ್ನು ಸಾಕ್ಷೀಕರಿಸಿದೆ

ಕಲಾವಿದರೊಳಗಿನ  ಅಭಿನಯದ  ಪ್ರತಿಭಾ ವಿನಯತೆ

      ನಿರ್ದೇಶಕನ ಎಲ್ಲ ಕನಸನ್ನು ಸಾಕಾರಗೊಳಿಸುವವರೆಂದರೆ ಕಲಾವಿದರು. ಇವರಲ್ಲಿ ರಂಗಶಿಸ್ತು ವಿನಯತೆ ಹಾಗು ಬದ್ಧತೆ ಇದ್ದಾಗ ಮಾತ್ರ ಕಲಾವಿದ ಪ್ರಜ್ಞಾವಂತ ನಟನಾಗಿ ಬೆಳೆಯಲು ಸಾಧ್ಯ ಬಹುಶಃ ಇವರೆಲ್ಲರೂ ಸಮುದಾಯದ ಗರಡಿಯಲ್ಲಿ ಪಳಗಿ ಬೆಳೆದವರಾಗಿರುವುದರಿಂದ ಎಲ್ಲ ನಟರಲ್ಲಿ ಪ್ರತಿಭಾ ಸಂಪನ್ನತೆ ಶಿಸ್ತು ಎದ್ದು ಕಾಣುತಿತ್ತು. ಬುದ್ದನ ಪಾತ್ರ ನಿರ್ವಹಿಸಿದ ಜೋಸೆಫ್ ಮಲ್ಲಾಡಿ, ಒಬ್ಬ ಪ್ರಬುದ್ದ ನಟ, ಬಹು ತೂಕದ ಬುದ್ದನ ಪಾತ್ರ ನಿರ್ವಹಿಸಬೇಕಾದರೆ ಅದಕ್ಕೆ ಅಭಿನಯದ ಗಟ್ಟಿತನ ಬೇಕು. ಆ ಗಟ್ಟಿತನ ಈ ಕಲಾವಿದನಲ್ಲಿ ಹರಳುಗಟ್ಟಿದೆ ಆದರೆ ಪ್ರಾರಂಭದ ಸಿದ್ದಾರ್ಥನ ಅಭಿನಯ ಇನ್ನಷ್ಟು ಬೇಯಬೇಕಿತ್ತೆನಿಸುತ್ತದೆ, ಹಾಗೆಯೇ ಅಂಗುಲಿಮಾಲನ ಪಾತ್ರಕ್ಕೆ ಜೀವ ತುಂಬಿದ ಈರಣ್ಣ ಐನಾಪೂರರ ನಟನೆ ಗಮನ ಸೆಳೆಯಿತು, ಹಾವ ಭಾವ ವೇಷಭೂಷಣ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು. ಅಂಗುಲಿಮಾಲ  ಹೆಚ್ಚು ಕ್ರೂರವಾಗಿ ವರ್ತಿಸಿದಷ್ಟೂ ಬುದ್ಧನ ಪಾತ್ರ ಕಳೆ ಕಟ್ಟುತ್ತದೆ, ಬುದ್ದನ ಪಾತ್ರಕ್ಕೆ ಮೆರಗು ಬರುತ್ತದೆ. ಬಿಸಿ ಹೆಚ್ಚಾದಾಗಲೇ ತಂಪಿಗೆ ಬೆಲೆ ಅಲ್ಲವೆ! ಹಾಗೆ ಬುದ್ದ ಶಾಂತನಾದಷ್ಟೂ ಅಂಗುಲಿಮಾಲನ ಪಾತ್ರಕ್ಕೆ ನೆಲೆ, ತಂಪು ಹೆಚ್ಚಾದಾಗಲೆ ಬಿಸಿಗೆ ಬೆಲೆ ಅಲ್ವೆ!. ಈ ಇಬ್ಬರು ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸ್ಪಷ್ಟ ಉಚ್ಛಾರಣೆ ಧ್ವನಿಯ ಏರಿಳಿತ ಆಂಗಿಕ ಅಭಿನಯ  ದೃಷ್ಟಿ ಚಲನೆ ಮುಂತಾದ ಕ್ರಿಯೆಗಳ ಮೂಲಕ ಈ ಇಬ್ಬರೂ ಪಾತ್ರಧಾರಿಗಳು  ನೋಡುಗರ ಚಿತ್ತವನ್ನು ತಮ್ಮತ್ತ ಸೆಳೆದರು. ಉಳಿದಂತೆ ಭಿಕ್ಷುಗಳಾಗಿ ಪಾತ್ರ ನಿರ್ವಹಿಸಿದ  ರಶ್ಮಿ ಹಣಸಿ, ಪೂಜಾ ಕಿಲ್ಲೆದಾರ್  ಧೀರಜ್ ಓಂಕಾರ್  ಸಮೀಕ್ಷಾ ಅಶ್ವನಿ ಬಿ. ಇವರು ತಮ್ಮ ಪಾಲಿನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ನಾಟಕದ ಓಘಕ್ಕೆ ಮೆರುಗು ತಂದರು, ಹಾಗೆಯೇ ಸೈನಿಕರಾಗಿ ನಟಿಸಿದ ಮಂಜುನಾಥ ಅವರಾದಿ,  ಮಂಜುನಾಥ ಮಂಡಲಗೇರಿ ಇವರು ತಮ್ಮ  ಸಹಜಾಭಿನಯದ ಮೂಲಕ ಗಮನ ಸೆಳೆದರು. ಪ್ರಶಂಜೀತ್ ರಾಜನ ಪಾತ್ರ ನಿರ್ವಹಿಸಿದ ಡಾ.ಪ್ರತಾಪ್ ಬಹುರೂಪಿ ಇವರು ಪ್ರಾರಂಭದಲ್ಲಿ ಸ್ಪಲ್ಪ ಅತಿಯಾದ ಹಾಸ್ಯದಿಂದ ನಿರಾಶೆ ಮೂಡಿಸಿದರೂ, ಕೊನೆಯಲ್ಲಿ ತುಂಬ ಚೆನ್ನಾಗಿ ಅಭಿನಯಿಸಿ ತಮ್ಮ ಲೋಪವನ್ನು ಸರಿಪಡಿಸಿಕೊಂಡರು. ಸುಮಾರು ೨೫ ಜನ ಕಲಾವಿದರು ತಂತ್ರಜ್ಞರನ್ನೊಳಗೊಂಡ ಈ ಸಮುದಾಯ ತಂಡವನ್ನು  ಬಿ.ಇ ಈಳಿಗೇರ ಇವರು ಮುನ್ನಡೆಸುತ್ತಿದ್ದಾರೆ. ಇವರ ಕಲಾ ಸೇವೆಯು ಕೂಡ ಗಮನಾರ್ಹ. ಈಗಾಗಲೇ ಈ ನಾಟಕ ಸುಮಾರು ೭೫ ಪ್ರಯೋಗಗಳನ್ನು ಕಂಡಿರುವುದು ಈ ನಾಟಕದ ಯಶಸ್ಸಿಗೆ ಸಾಕ್ಷಿಯಾಗಿದೆ.

 ಸಂಗೀತ, ರಂಗ ವಿನ್ಯಾಸ, ಬೆಳಕು,  ಪರಿಕರ ಮತ್ತು ಪ್ರಸಾಧನ

ಒಂದು ನಾಟಕದ ಜೀವಾಳ  ಹಿನ್ನಲೆ ಸಂಗೀತ! ಈ ನಾಟಕದಲ್ಲಿ ಹಿನ್ನೆಲೆ ಸಂಗೀತ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ ಮೊದಲೇ ಧ್ವನಿ ಮುದ್ರಿತ ಸಂಗೀತವಾಗಿರುವುದರಿಂದ ನಾಟಕದ ಜೀವಂತಿಕೆಗೆ ತಡೆಯೊಡ್ಡಿತು. ನಾಟಕದ ಕೊನೆಯಲ್ಲಿ ಬಳಸಿದ

ಹಾಲು ಹಳ್ಳ ಹರಿಯಲಿ

ಬೆಣ್ಣೆ ಬೆಟ್ಟವಾಗಲಿ

ಜೇನ ಮಳೆಯು ಸುರಿಯಲಿ

ಜಗದಲಿ ಶಾಂತಿಯು ಬೆಳೆಯಲಿ

ಸನ್ನಿವೇಶಕ್ಕೆ ಒಪ್ಪುವಂತಿತ್ತು – ಈ ಹಾಡು ಸನ್ನಿವೇಶವನ್ನು ಅಪ್ಪಿತ್ತು.

 ರಂಗ ನಿರ್ವಹಣೆ  ಅಚ್ಚುಕಟ್ಟಾಗಿದ್ದು, ನಾಟಕದ ರಸಾಭಿವ್ಯಕ್ತಿಗೆ ಪೂರಕವಾಗಿತ್ತು. ರಂಗ ಪರಿಕರ ಅವುಗಳನ್ನು ಕಲಾವಿದರು ಬಳಸಿದ ರೀತಿ ಸಮಾಧಾನಕರ, ಕೆಲವೊಂದು ಕಡೆಯ ಓಡಾಟ ಅನಗತ್ಯವೆನಿಸಿತು. ದೃಶ್ಯದಿಂದ ದೃಶ್ಯಕ್ಕೆ ಸ್ವಲ್ಪ ಅಂತರವೂ ಇತ್ತು . ತೀರ ವೈಭವವಲ್ಲದ ಹಾಗಂತ ಕಳಪೆಯೂ ಅಲ್ಲದ ಸರಳ ರೀತಿಯಲ್ಲಿ ರಂಗ ವಿನ್ಯಾಸ ರೂಪಿಸಿದ್ದುದು ನಿರ್ದೇಶಕರ  ಪ್ರತಿಭಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು.

ಪಾತ್ರಕ್ಕೆ ತಕ್ಕ ವೇಷ ಭೂಷಣ ತೊಡಿಸಿ ಮುಖಕ್ಕೆ ಬಣ್ಣ ಹಚ್ಚಿದ ಪ್ರಸಾಧನ ತಜ್ಞ ಹಾಗೂ ಪ್ರಸಾಧನ ಕಲೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಸಂತೋಷ ಮಹಾಲೆಯವರ ಕೈಚಳಕ ಗಮನ ಸೆಳೆಯಿತು.  ಅಂಗುಲಿಮಾಲನ ಪಾತ್ರದ ಮೇಕಪ್ ಇನ್ನಷ್ಟು ಪರಿಣಾಮಕಾರಿಯಾಗಿರಬೇಕಾಗಿತ್ತೆನಿಸಿತು. ಸಹಜ-ಸುಂದರ ಬುದ್ಧನ ಮೇಕಪ್ ಚಿತ್ತಾಕರ್ಷಕವಾಗಿತ್ತು.

ರಂಗ ಪರಿಕರಗಳು ಬಹಳಷ್ಟು ಸರಳವಾಗಿದ್ದವು ನಾಲ್ಕು ಇಳಿಬಿಟ್ಟ ಬಟ್ಟೆಯ ಕರ್ಟನ್ ಅರಮನೆಯಂತೆ ಕಂಡರೆ ಬೋಧಿವೃಕ್ಷ ಬುದ್ದನ ತಪಸ್ಸಿಗೆ ಮೆರಗಿನ ನೆರಳೀಯಿತು. ಕೊನೆಯಲ್ಲಿ ತಂದ ಬುದ್ದನ ಪ್ರತಿಮೆ ಮಾತಿಗಿಂತ ಮೌನವೇ ಪ್ರಬುದ್ಧತೆ ಎನ್ನುವ ಸಂದೇಶ ಸಾರುವಂತಿತು.

ಧ್ವನಿ ಹಾಗು ಬೆಳಕು ನಾಟಕದ ಯಶಸ್ವಿನ ಸೋಪಾನಗಳು.  ಕಲಾವಿದರ ಧ್ವನಿಯೇನೋ ಸುಸ್ಪಷ್ಟ ಹಾಗು ಅಸ್ಖಲಿತವಾಗಿತ್ತು ಆದರೆ ಬೆಳಕಿನ ಆಟ ಸನ್ನಿವೇಶಕ್ಕೆ ಅಷ್ಟೊಂದು ಪೂರಕವಾಗಿರಲಿಲ್ಲವೆನಿಸಿತು. ಬೆಳಕಿನ ವಿನ್ಯಾಸವನ್ನು ಇನ್ನಷ್ಟು ಪರಿಣಾಮ ಕಾರಿಯಾಗಿಸಿದ್ದರೆ ನಾಟಕ ಮತ್ತಷ್ಟು ರುಚಿಸುತ್ತಿತ್ತೆನಿಸಿತು.

ಕೆಲವೊಂದು ನ್ಯೂನತೆ ಹೊರತು ಪಡಿಸಿದರೆ ಇದೊಂದು ಉತ್ತಮ ಕಲಾಕೃತಿ ಎನ್ನುವುದರಲಿ ಯಾವ ಸಂದೇಹವಿಲ್ಲ.

ಮುಗಿಸುವ ಮುನ್ನ…

ನಮ್ಮ ಸುತ್ತಲಿನ ವಾತಾವರಣದಲ್ಲಿ ಹಿಂಸೆ ಕ್ರೌರ್ಯ ದ್ವೇಷದ ಕರಾಳತೆ ಹಬ್ಬಿ ಜನರಲ್ಲಿ ಭಯ ಆತಂಕ ನಿರಾಸೆ ಸೃಷ್ಟಿಯಾಗುತ್ತಿರುವ ಇಂದಿನ ಸಾಮಾಜಿಕ ಸಂದರ್ಭದಲ್ಲಿ ಈ ನಾಟಕ ಸಾರುವ ಹಿಂಸೆಗಿಂತ ಶಾಂತಿ ಕ್ರೌರ್ಯಕಿಂತ ಪ್ರೀತಿ ಮುಖ್ಯ ಎಂಬ ಸಂದೇಶ ತುಂಬಾ ಪ್ರಸ್ತುತವೆನಿಸಿತು. ಇಂತಹ ನಾಟಕಗಳು ಮತ್ತೆ ಮತ್ತೆ ಪ್ರದರ್ಶನಗೊಂಡಂತೆಲ್ಲ ಜನರಲ್ಲಿ ಕಿಂಚಿತ್ತಾದರೂ ಕ್ರೌರ್ಯ ಕಡಿಮೆಯಾದೀತು ಎನ್ನುವ ಆಶಾ ಭಾವನೆ ನನ್ನದು.  ಆದರೆ ನಿನ್ನೆ ಪ್ರದರ್ಶನಗೊಂಡ ಈ ನಾಟಕ ನೋಡಲು ಬಂದವರೆಲ್ಲಾ 45-50ರ ಆಸು ಪಾಸಿನಲ್ಲಿದ್ದವರು. ಇವರಿಗಿಂತಲೂ ಹೆಚ್ಚಾಗಿ ಯುವ ಸಮೂಹ ಈ ನಾಟಕವನ್ನು ನೋಡುವಂತಾಗಬೇಕು. ಆಯೋಜಕರ ಪ್ರಚಾರದ ಕೊರತೆಯೋ ಅಥವಾ ಯುಗಾದಿ ಹಬ್ಬ ಇದ್ದದ್ದರಿಂದಲೋ ಏನೋ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಇರುವ ಬೆರಳೆಣಿಕೆಯಷ್ಟು ಪ್ರೇಕ್ಷಕರು ಈ ಬುದ್ದನ ಪ್ರಬುದ್ದತೆಯಲ್ಲಿ ಮುಳುಗೆದ್ದದ್ದು ಮಾತ್ರ ಸತ್ಯ. ಬುದ್ಧ ಪ್ರಬುದ್ದತೆಯ ಪ್ರಭಾವಳಿಯಲ್ಲಿ ನಿನ್ನೆಯ ಯುಗಾದಿ ಮುಳುಗೆದ್ದಿತು, ಅದೇ ಗುಂಗಿನಲ್ಲಿ ಹೋಳಿಗೆ ಉಂಡು ಮಲಗಿದೆ.

ಲೇಖಕರು:- ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ                                                 ಹವ್ಯಾಸಿ ಬರಹಗಾರರು.೯೦೦೮೫೨೭೭೦೮.

Share and Enjoy !

Shares