ಬಳ್ಳಾರಿ:ಕೌಲ್ ಬಜಾರ್ 30ನೇ ವಾರ್ಡಿನ ಬಿಜೆಪಿ ಮುಖಂಡರಾದ ಮೊಹಮ್ಮದ್ ರಿಯಾಜ್ ಅವರು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ಅವರ ಸಮ್ಮುಖದಲ್ಲಿ ಕೆಲ ಬೆಂಬಲಿಗರೊಂದಿಗೆ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ವೇಳೆ ಬಿಜೆಪಿ ಮುಖಂಡರಾದ ಖಾಜಾ ಸಾಬ್, ಶೇಕ್ ಮಿಸುಬದ್ದೀನ್, ನಜೀರ್, ನವೀದ್, ಮುಕ್ತೈರ್, ಇಸ್ಮಾಯಿಲ್, ರಫೀಕ್, ಜಾಫರ್, ಮುನೀರ್, ಬಶೀರ್, ಶಾಫಿ, ಹಾದಿ, ಜಾಕೀರ್, ಸುಹೇಲ್, ಪಾಷಾ ಸೇರಿದಂತೆ ನೂರಾರು ಬಿಜೆಪಿ ಮುಖಂಡರನ್ನು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ತುಂಬು ಹೃದಯದಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದರು.
ನಂತರ ಮಾತನಾಡಿದ ಶಾಸಕ ಬಿ.ನಾಗೇಂದ್ರ ಅವರು ಗ್ರಾಮೀಣ ಕ್ಷೇತ್ರದ ವಾರ್ಡ್ ಗಳಲ್ಲಿ ಸ್ವಚ್ಛತೆ ಕಾಪಾಡುವುದು, ಶುದ್ಧ ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಮಾಡುವ ಮೂಲಕ ವಾರ್ಡ್ ಗಳ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ ಎಂದರು. ತಮಗೆ ಕಷ್ಟ ಬಂದಾಗ ಮಧ್ಯರಾತ್ರಿಯಲ್ಲಿ ಸಹ ನಾನು ನಿಮ್ಮ ಸೇವೆ ಮಾಡಲು ಸದಾ ಸಿದ್ದನಾಗಿರುತ್ತೇನೆ. ಸಮುದಾಯದ ಜನರಿಗೆ ಯಾರಾದರೂ ಭಯಪಡಿಸಿದರೆ ಹೆದರಬಾರದು ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದರು.*
ಚುನಾವಣೆ ಸಂದರ್ಭದಲ್ಲಿ ಆಮಿಷ ಒಡ್ಡುವವರು ಬರುತ್ತಾರೆ. ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎನ್ನುತ್ತಾರೆ ಯಾರೂ ಕೂಡ ವಿಚಲಿತರಾಗಬಾರದು. ಗೊಂದಲಕ್ಕೆ ಈಡಾಗಬಾರದು ಎಂದರು.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾನು ಶಾಸಕನಾದರೆ ನೀವೆಲ್ಲ ಶಾಸಕನಾದಂತೆ ಎಂದು ಹೇಳಿದ ಶಾಸಕ ನಾಗೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಆಗ ಕೌಲಬಜಾರ್ ಪ್ರದೇಶವನ್ನು, ಇಡೀ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು, ವಾರ್ಡಿನ ಪ್ರಮುಖರು ಹಾಗೂ ಶಾಸಕರ ಬೆಂಬಲಿಗರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.