ಕೂಡ್ಲಿಗಿ: ಬಿಜೆಪಿಯವರು ಮೀಸಲಾತಿ ನೀಡಿರುವುದು ಕ್ರಾಂತಿಕಾರಕ ನಿರ್ಧಾರ ಎಂದು ಹೇಳುತ್ತಿರುವುದು ನಾಚಿಗೇಡು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದರು. ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಡಾ. ಎನ್.ಟಿ. ಶ್ರೀನಿವಾಸ್ ಅವರ ಪರವಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಮೀಸಲಾತಿ ಹೆಸರಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೋಸ ಮಾಡುತ್ತಿದೆ. ಮೀಸಲಾತಿಯನ್ನು ಜಾರಿ ತಂದ ಬಿಜೆಪಿಯವರು ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲದಂತೆ ಮಾಡಿದೆ. ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಬೇಕಾಗಿದೆ. ಪ್ರಿಯಾಂಕ ಖರ್ಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾಗ ಮಾಗಮೋಹನ್ ದಾರ್ಸ್ ಆಯೋಗ ರಚನೆ ಮಾಡಿದ್ದೇವೆ. ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಕಾಲ ಸುಮ್ಮನಿದ್ದ ಬಿಜೆಪಿ ಸರ್ಕಾರ ಚುನಾವಣೆ ಹತ್ತಿರಕ್ಕೆ ಬಂದಾಗ ಮೀಸಲಾತಿಯನ್ನು ಘೋಷಣೆ ಮಾಡುವ ಮೂಲಕ ಚುನಾವಣಾ ಗಿಮಿಕ್ ಮಾಡಿದೆ. ಈ ಮೀಸಲಾತಿಯನ್ನು 9 ಶೆಡುಲ್ ನಲ್ಲಿ ಸೇರಿಸಬೇಕಿತ್ತು. ಆದರೆ ಅದನ್ನು ಮಾಡಿಲ್ಲ ಎಂದು ದೂರಿದರು.
ಎಸ್ಸಿಪಿ ಟಿಎಸ್ಪಿ ಕಾನೂನನ್ನು ನಾನು ಮುಖ್ಯ ಮಂತ್ರಿಯಾಗಿದ್ದಾಗ ಜಾರಿ ಮಾಡಿದ್ದೆ. ಆದರೆ ಆಂದ್ರಪ್ರದೇಶ ಹೊರತು ಪಡಿಸಿ ದೇಶದಲ್ಲಿ ಯಾವ ರಾಜ್ಯವೂ ಕೂಡ ಇದನ್ನು ಜಾರಿ ಮಾಡಿಲ್ಲ. ಕಳೆದ 15 ವರ್ಷಗಳಿಂದ ಸ್ಥಳೀಯರಿಗೆ ಟಿಕೆಟ್ ನೀಡಿಲ್ಲ ಎಂದು, ಈಗ ಸ್ಥಳೀಯರಾದ ಎನ್.ಟಿ. ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಅವರನ್ನು ಗೆಲ್ಲಿಸುವ ಹೊಣೆ ನಿಮ್ಮ ಮೇಲಿದೆ ಎಂದರು.
ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್,ಅಲಂ ವೀರಭದ್ರಪ್ಪ, ಬಿ.ವಿ.ಶಿವಯೋಗಿ, ಸಿರಾಜ್ ಶೇಕ್, ಉಗ್ರಪ್ಪ,ಮುಂಡ್ರಿಗಿ ನಾಗರಾಜ್, ರಘು ಗುಜ್ಜಲ್, ನಾಗಮಣಿಜಿಂಕಾಲ್,ಗುರುಸಿದ್ದನ ಗೌಡ, ನರಸಿಂಹಗಿರಿ ವೆಂಕಟೇಶ್, ಗುರುರಾಜ ನಾಯಕ,ಉದಯ್ ಜನ್ನು,ಕಾವಲಿ ಶಿವಪ್ಪನಾಯಕ ಸೇರಿದಂತೆ ಅನೇಕ ಮುಖಂಡರು ಇದ್ದರು. ಇದೇ ಸಂಧರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಟಿ.ಜಿ.ಮಲ್ಲಿಕಾರ್ಜುನ ಗೌಡ,ಶೋಭ,ರಾಘವೇಂದ್ರ, ವೆಂಕಟೇಶ್ ಸೇರಿದಂತೆ ಅನೇಕರು ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
29ಕೆಡಿಎಲ್1: ಕೂಡ್ಲಿಗಿ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು