ಹಣದಿಂದ ಜನರ ಪ್ರೀತಿಯನ್ನು ಖರೀದಿಸಲಾಗದು: ಬಿ.ನಾಗೇಂದ್ರ

Share and Enjoy !

Shares

ಬಳ್ಳಾರಿ :ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪ್ರೀತಿ, ಆಶೀರ್ವಾದ ಹಾಗೂ ಬೆಂಬಲವನ್ನು ಹಣ ಕೊಟ್ಟು ಖರೀದಿಸಲಾಗದು. 2023ರ ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಮತದಾರರು ಈ ಸಂದೇಶವನ್ನು ನೀಡಿದ್ದಾರೆಂದು ನನ್ನ ಭಾವನೆ. ವಿಶೇಷವಾಗಿ ನಾನು ಸ್ಪರ್ಧೆ ಮಾಡಿದ್ದ ನನ್ನ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಚುನಾವಣೆಯಲ್ಲಂತೂ ನನ್ನನ್ನು ಪರಾಜಯಗೊಳಿಸಲು ನನ್ನ ರಾಜಕೀಯ ವಿರೋಧಿಗಳು ಎಲ್ಲಿಲ್ಲದ ಕಸರತ್ತು ಮಾಡಿದರು. ಹೆಜ್ಜೆ ಹೆಜ್ಜೆಗೂ ತಡೆ ಒಡ್ಡುವ ಕೆಲಸ ಆಯಿತು. ಆದರೆ ನನ್ನ ಮೇಲೆ ಒತ್ತಡ ಬಂದಷ್ಟೂ ಜನರು ನನ್ನ ಪರ ಒಲವು ತೋರಿಸಿದರು. ಅದರ ಫಲವೇ ನನ್ನ ಗೆಲುವು ಆಗಿದೆ. ನನ್ನ ಈ ಗೆಲುವನ್ನು ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೆ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಲ್ಲಿಸುವೆ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ತಿಳಿಸಿದರು.

 

ಕಳೆದ ಮೂರು ಚುನಾವಣೆಗಳಿಗಿಂತ ಈ ಚುನಾವಣೆ ನನ್ನ ಪಾಲಿನ ಮಹತ್ವದ ಚುನಾವಣೆಯಾಗಿತ್ತು. ಕ್ಷೇತ್ರದಲ್ಲಿ ನಾನು ಮಾಡಿದ್ದ ಅಭಿವೃದ್ಧಿ ಕೆಲಸಗಳು, ಕಾಂಗ್ರೆಸ್ ಪಕ್ಷದ ಪರ ಅಲೆ, ಬಿಜೆಪಿ ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ನನ್ನ ವಿರುದ್ಧ ಭಾರೀ ಪೈಪೋಟಿ ನೀಡಲಾಯಿತು. ಜನರನ್ನು ಹಣ ಕೊಟ್ಟು ಖರೀದಿಸುವ ಪ್ರಯತ್ನ ನಡೆಯಿತು. ಆದರೆ ಜನರು ನನ್ನ ಮೇಲಿಟ್ಟಿದ್ದ ಪ್ರೀತಿಯ ಮುಂದೆ ಯಾವ ತಂತ್ರವೂ ಫಲಿಸಲಿಲ್ಲ. ವಿರೋಧಿಗಳ ನೂರು ತಂತ್ರಗಳ ಆಚೆಗೂ ಜನರು ನನ್ನ ಮೇಲೆ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ಪ್ರೀತಿಗೆ ಗೆಲುವಾಯಿತು ಎಂದು ನಾನು ಈ ಗೆಲುವನ್ನು ವ್ಯಾಖ್ಯಾನಿಸುತ್ತೇನೆ.

 

ಇನ್ನು ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಳ್ಳಾರಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್ ಬೆಂಬಲಕ್ಕೆ ನಿಂತು ನಮ್ಮ ಕೈ ಬಲಪಡಿಸಿದ್ದಾರೆ. ಜನರ ಈ ಋಣವನ್ನು ನೆನಪಿಟ್ಟು ಮುಂದಿನ ಐದು ವರ್ಷಗಳ ಕಾಲ ನಮ್ಮ ಸರ್ಕಾರ ಹಾಗೂ ನಾನು ಅಭಿವೃದ್ಧಿ ಕಾರ್ಯ ಮಾಡಲಿದ್ದೇವೆ. ಇನ್ನು ಮುಂದೆ ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ. ಪಕ್ಷ ಈಗಾಗಲೇ ಘೋಷಣೆ ಮಾಡಿರುವಂತೆ, ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರು ಹೇಳಿರುವಂತೆ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿಗಳನ್ನು ಈಡೇರಿಸುವ ತೀರ್ಮಾನ ಆಗಲಿದೆ.

 

ಇನ್ನು ಬಳ್ಳಾರಿಯ ಪ್ರಚಾರ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರು ಭರವಸೆ ನೀಡಿರುವಂತೆ ಬಳ್ಳಾರಿಯನ್ನು ದೇಶದ ಜೀನ್ಸ್ ರಾಜಧಾನಿಯನ್ನಾಗಿಸಲು ನಾನು ಹಗಲಿರುಳು ಶ್ರಮಿಸಲಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ಸಾರ್ವಜನಿಕರ, ಪರಿಣಿತರ ಸಲಹೆ, ಸಹಕಾರ ನಿರೀಕ್ಷಿಸುತ್ತೇನೆ.

ನನ್ನ ಈ ವೀರೋಚಿತ ಗೆಲುವಿಗೆ ಕಾರಣರಾದ- ಎಐಸಿಸಿಯ ಅಗ್ರಗಣ್ಯರಾದ ಶ್ರೀಮತಿ ಸೋನಿಯಾ ಗಾಂಧಿ, ದೇಶದ ಯುವಚೇತನರಾದ ಶ್ರೀ ರಾಹುಲ್ ಗಾಂಧಿ, ಶ್ರೀಮತಿ ಪ್ರಿಯಾಂಕಾ ಗಾಂಧಿ, ಅನುಭವಿ ನೇತಾರ ಎಐಸಿಸಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿಗಳಾದ ಶ್ರೀ ರಣದೀಪ್‍ಸಿಂಗ್ ಸುರ್ಜೇವಾಲ, ಸಂಘಟನಾ ಚತುರ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್, ರಾಜ್ಯ ಕಂಡ ಸಮಾಜವಾದಿ ನೇತಾರ ಮಾಜಿ ಸಿಎಂ, ಶ್ರೀ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ್ ಖಂಡ್ರೆ, ಶ್ರೀ ಸಲೀಂ ಅಹ್ಮದ್, ಶ್ರೀ ಸತೀಶ್ ಜಾರಕಿಹೊಳಿ ಅವರು ಸೇರಿದಂತೆ ಪಕ್ಷದ ಎಲ್ಲ ರಾಜ್ಯ ನಾಯಕರು, ಬಳ್ಳಾರಿ ಗ್ರಾಮೀಣ ಕ್ಷೇತ್ರ ಹಾಗೂ ಜಿಲ್ಲೆಯ ಎಲ್ಲ ನಾಯಕರು. ಡಿಸಿಸಿ, ಪಕ್ಷದ ಎಲ್ಲ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಬೂತ್ ಮಟ್ಟದ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ ಸಲ್ಲಿಸುವೆ.

ಚುನಾವಣೆ ಪ್ರಕ್ರಿಯೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಿದ ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ.

ನಾವು ನೀವೆಲ್ಲ ನಡೆದು ಬಂದ ದಾರಿ ಸ್ವಲ್ಪ, ನಡೆಯಬೇಕಿರುವ ದಾರಿ ದೂರ. ಅಭಿವೃದ್ಧಿಯ ಪಥದಲ್ಲಿ ನಾವೆಲ್ಲರೂ ಜೊತೆಯಾಗಿ ಹೆಜ್ಜೆ ಹಾಕೋಣ. ಬಳ್ಳಾರಿ ಗ್ರಾಮೀಣ ಕ್ಷೇತ್ರ ಸೇರಿದಂತೆ ಇಡೀ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದು ಈ ಸಂದರ್ಭ ಮನವಿ ಮಾಡುತ್ತೇನೆ.

ನಿಮ್ಮೆಲ್ಲರ ಈ ಪ್ರೀತಿ ಎಂದಿಗೂ ಹೀಗೆ ಇರಲಿ ಎಂದು ಆಶಿಸುತ್ತೇನೆ.

Share and Enjoy !

Shares