ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಮೇ 20 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಶನಿವಾರ ಮಧ್ಯಾಹ್ಮ 12.30 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಅಂತಿಮ ಹಂತದ ಸಿದ್ದತೆಗಳು ಭರದಿಂದ ಸಾಗುತ್ತಿದೆ.
ಒಟ್ಟು ಮೂರು ವೇದಿಕೆಗಳು ತಯಾರಾಗಿದ್ದು, ಜನರಿಗೆ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಣೆಗೆ ಎಲ್ ಇ ಡಿ ಪರದೆಯನ್ನು ಅಳವಡಿಸಲಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ.
ಮೇ 20 ರಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್, ಹಿಮಾಚಲ ಪ್ರದೇಶ ಸಿಎಂ ಸುಕ್ವಿಂದರ್ ಸಿಂಗ್, ಪುದುಚೇರಿ ಸಿಎಂ ಎಂ ರಂಗಸ್ವಾಮಿ,ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಭಾಗಿಯಾಗಲಿದ್ದಾರೆ.
ಇನ್ನು ಶನಿವಾರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಸಿದ್ದತೆ ಪರಿಶೀಲನೆ ನಡೆಸಿದರು.
ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದವರು ತಿಳಿಸಿದ್ದಾರೆ.
ರಾಜ್ಯದ ನೂತನ ಸರಕಾರದ ಪದಗ್ರಹಣದ ಜತೆಗೇ ರಾಷ್ಟ್ರಮಟ್ಟಕ್ಕೆ ಮಹತ್ವದ ಸಂದೇಶ ನೀಡುವ ಬೃಹತ್ ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಅದೇ ಸ್ಥಳದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಸಮಾರಂಭಕ್ಕೆ ನಾನಾ ರಾಜ್ಯಗಳಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರತಾದ ಪಕ್ಷಗಳ ಸಿಎಂಗಳು ಹಾಗೂ ಸಮಾನ ಮನಸ್ಕ ಪಕ್ಷಗಳ ಪ್ರಮುಖರನ್ನು ಆಹ್ವಾನಿಸಲಾಗಿದೆ. ಅವರ ಸಮ್ಮುಖದಲ್ಲಿ‘ಗ್ಯಾರಂಟಿ’ ಯೋಜನೆಗಳ ಸಾಕಾರದ ಘೋಷಣೆಯೊಂದಿಗೆ ಸಮಾವೇಶ ನಡೆಸಲಾಗುತ್ತಿದೆ.
ರಾಜ್ಯಪಾಲರು ನೂತನ ಸಿಎಂ ಹಾಗೂ ಸಂಪುಟ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಅಲ್ಲಿಂದ ನಿರ್ಗಮಿಸಿದ ಬಳಿಕ, ಪಕ್ಷದ ಈ ಸಮಾವೇಶ ನಡೆಯಲಿದೆ. ಪಕ್ಷದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬದ್ಧತೆಯ ಸಂದೇಶ ನೀಡಿ ಬೆಲೆ ಏರಿಕೆ ವಿರುದ್ಧ ಜನಾಕ್ರೋಶಕ್ಕೆ ನಿದರ್ಶನವಾಗಿ ಕರ್ನಾಟಕದ ಸ್ಪಷ್ಟ ಜನಾದೇಶವನ್ನು ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವುದು ಈ ಸಮಾವೇಶದ ಉದ್ದೇಶವಾಗಿದೆ.
ನಿರೀಕ್ಷೆ ಮೀರಿ ಗೆಲುವು ತಂದುಕೊಟ್ಟ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್‌ನ ಆತ್ಮವಿಶ್ವಾಸಕ್ಕೆ ದೊಡ್ಡ ಪ್ರಮಾಣದಲ್ಲಿ ಬೂಸ್ಟ್ ನೀಡಿದ್ದು, ಮುಂದಿನ ಲೋಕಸಭೆ ಚುನಾವಣೆಗೆ ಈ ಗೆಲುವು ಟಾನಿಕ್ ಎಂದು ಭಾವಿಸಿದೆ. ಅದಕ್ಕಾಗಿ ನಾನಾ ರಾಜ್ಯಗಳ ಆಹ್ವಾನಿತ ಪ್ರಮುಖರ ಸಮ್ಮುಖದಲ್ಲಿಈ ಸಮಾವೇಶಕ್ಕೆ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.