ಬೆಂಗಳೂರು: ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆ, ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅವರಿಗೆ ಅಗತ್ಯ ನೆರವನ್ನು ಒದಗಿಸಲು ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯೋಜಿಸಿದ್ದಾರೆ. ಅದರಂತೆ ಘಟನೆಯಲ್ಲಿ ಗಾಯಗೊಂಡ ಅಥವಾ ಇತರೆ ಯಾವುದೇ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ರಕ್ಷಣೆಗೆ ಸಂಪೂರ್ಣ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ‘ ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ‘ವಿಶೇಷ ಏರ್ ಕ್ರಾಫ್ಟ್ ಮೂಲಕ ಮಧ್ಯಾಹ್ನ 2.30 ಕ್ಕೆ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳ ಜೊತೆ ಭುವನೇಶ್ವರಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ಥಳಕ್ಕೆ ತೆರಳಬೇಕಾಗಿದೆ. ಸಂಜೆ 6-7 ಗಂಟೆಗೆ ನಾನು ದುರಂತ ಸ್ಥಳಕ್ಕೆ ತಲುಪಬಹುದು. ಅಲ್ಲಿ ಹೋದ ಮೇಲೆ ವ್ಯವಸ್ಥೆಗೆ ಏನು ಲಭ್ಯ ಇದೆ ಅಂತಾ ನೋಡಬೇಕಾಗುತ್ತದೆ. ಕನ್ನಡಿಗರಿಗೆ ಯಾವುದೇ ತೊಂದರೆ ಇದ್ದರೆ ಚಿಕಿತ್ಸೆ, ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ ಆಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕನ್ನಡಿಗರಿಗೆ ಈಗ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಯಾವ ರೀತಿ ಕರೆತರುವುದು ಎಂಬ ಬಗ್ಗೆ ಅಲ್ಲಿನ ಪರಿಸ್ಥಿತಿ ನೋಡಿ ನಿರ್ಧಾರ ಮಾಡುತ್ತೇನೆ. ದುರಂತ ಸ್ಥಳದಲ್ಲಿರುವ ಕನ್ನಡಿಗರು ನನ್ನ ಮೊಬೈಲ್ ಸಂಖ್ಯೆಗೆ 9845739999 ಸಂಪರ್ಕಿಸಬಹುದು. ನಾನು ವೈಯಕ್ತಿಕವಾಗಿ ಅಲ್ಲಿ ಅವರನ್ನು ಅಟೆಂಡ್ ಮಾಡುತ್ತೇನೆ ಎಂದರು.
ನೂತನ ಸ್ಪೀಕರ್ ಯು.ಟಿ.ಖಾದರ್:ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ನಡುವೆ ಅಪಘಾತಕ್ಕೆ ಸಂಬಂಧಿಸಿದಂತೆ ‘ರೈಲು ಅಪಘಾತ ಅತ್ಯಂತ ನೋವಿನ ಸಂಗತಿ ಎಂದು ನೂತನ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಈ ಅಪಘಾತ ಎಲ್ಲಾ ಇಲಾಖೆಗಳ ಕಣ್ಣು ತೆರೆಸುವಂತೆ ಮಾಡಿದೆ. ರೈಲು ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮುಂದೆ ಈ ರೀತಿಯ ಅಪಘಾತ ಆಗದಂತೆ ತಡೆಯಬೇಕಿದೆ ಎಂದರು.