ಬೆಂಗಳೂರು: ಇಂದು ಜಗತ್ತಿನಾದ್ಯಂತ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲೂ ಹಲವು ಕಡೆ ದಿನವನ್ನು ಆಚರಿಸಲಾಗಿದೆ. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 2022-23ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಖಂಡ್ರೆ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ 6 ಮಂದಿಗೆ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಸಿದ್ದರಾಮಯ್ಯ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪರಿಸರ ಕುರಿತು ಜಾಗೃತಿ ಮೂಡಿಸಲು ಪರಿಸರ ದಿನ ಆಚರಣೆ ಮಾಡಲಾಗುತ್ತೆ. ಪ್ರತಿಯೊಬ್ಬರಿಗೂ ನಮ್ಮ ಪರಿಸರವನ್ನ ಚೊಕ್ಕಟವಾಗಿ ಇಟ್ಟಿಕೊಳ್ಳುವ ಕೆಲಸ ಮಾಡ್ಬೇಕು. ಆ ಜವಾಬ್ದಾರಿ ಎಲ್ಲರಿಗೂ ಬರಬೇಕು. ನಾವು ಎಷ್ಟೇ ಆದೇಶ, ನಿಯಮಗಳ ಜಾರಿಗೊಳಿಸಿದ್ರೂ ಜನರಲ್ಲಿ ಜಾಗೃತಿ ಬರಬೇಕು. ನಾವು ಪ್ರಕೃತಿಯನ್ನ ಪ್ರೀತಿಸಬೇಕು, ಭೂಮಿ ತಾಯಿಯನ್ನ ಪ್ರೀತಿಸಬೇಕು. ಅದನ್ನ ಪ್ರತಿಯೊಬ್ಬರೂ ಕರ್ತವ್ಯ ಅಂತ ಭಾವಿಸಬೇಕು. ನಮಗೆಲ್ಲ ಜೀವನ ಕೊಟ್ಟಿರುವುದು ಪ್ರಕೃತಿ ಮತ್ತು ಭೂಮಿ. ಪ್ರಕೃತಿ ಮತ್ತು ಭೂಮಿ ಉಪಯೋಗದಿಂದ ನಾವು ಬದುಕುತಿದ್ದೇವೆ ಎಂದರು.
ಪ್ರಕೃತಿಯಿಂದ ನಾವು ತುಂಬಾ ಪಡೆದುಕೊಳ್ತಿದ್ದೇವೆ. ಪ್ರಕೃತಿಗೆ ನಾವೇನಾದ್ರೂ ಕೊಡಬೇಕಲ್ವಾ? ಇವತ್ತು ನಾವು ಪ್ರಕೃತಿ ವಿಕೋಪಕ್ಕೆ ಒಳಗಾಗುತ್ತಿದ್ದೇವೆ. ಮರ ಕಡೀತಿವಿ ಆದ್ರೆ ಗಿಡ ನೆಡುವುದಿಲ್ಲ. ಕಾಡು ಬೆಳೆಸುವುದು ಫಾರೆಸ್ಟ್ ಡಿಪಾರ್ಟ್ಮೆಂಟ್ ನದ್ದು ಮಾತ್ರವಲ್ಲ. ಪ್ರಕೃತಿಯಲ್ಲಾಗುವ ಅನಾಹುತವನ್ನ ನಾವು ತಪ್ಪಿಸಬೇಕು. 2016ರಲ್ಲಿ ನಾನು ಪ್ಲಾಸ್ಟಿಕ್ ನಿಷೇಧ ಮಾಡಿದ್ದೆ. ಮಳೆ ನೀರಿನ ಕೊಯ್ಲುನ್ನ ಎಷ್ಟು ಜನ ಅಳವಡಿಸಿಕೊಂಡಿದ್ದಾರೆ. ವಿರೋಧ ಪಕ್ಷದವರು ಅಪಪ್ರಚಾರ ಮಾಡ್ತಾ ಇದ್ದಾರೆ. ವರುಷದಲ್ಲಿ ಜನ ಎಷ್ಟು ವಿದ್ಯುತ್ ಬಳಕೆ ಮಾಡ್ತಿದ್ದಾರೆ. ವಾರ್ಷಿಕ ಸರಾಸರಿ ಮೇಲೆ 10% ವರೆಗೆ ಅವಕಾಶ ಕೊಟ್ಟಿದ್ದೇವೆ. ಅದರ ಮೇಲೆ ಹೆಚ್ಚುವರಿಯಾಗಿ ಬಳಸಿದ್ರೆ ಜನರೇ ಪಾವತಿಸಬೇಕು ಅಂತ ಹೇಳಿದ್ದೀವಿ.
ಇನ್ನು ಮತ್ತೊಂದೆಡೆ ಬ್ಯಾಟರಾಯನಪುರ ಬಳಿಯ ರಾಚೇನಹಳ್ಳಿಯಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಿಕೆ ಶಿವಕುಮಾರ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರ ದಿನವನ್ನು ಆಚರಿಸಿದರು.
ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರನ್ನು ಅಭಿವೃದ್ಧಿ ಮಾಡಬೇಕು ಅನ್ನೋದು ನನ್ನ ಉದ್ದೇಶ. ಸುಮ್ಮನೆ ತೋರಿಕೆಗೆ ಪರಿಸರ ದಿನ ಆಚರಣೆ ಮಾಡೋದು ಬಿಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿದರು. ನನ್ನ ಕೈಯಲ್ಲಿ ಗಿಡ ನೆಡಿಸಿದ್ದಾರೆ, ಅದು ಸಂಪೂರ್ಣ ಅವೈಜ್ಞಾನಿಕ. ಕೇವಲ ಫೋಟೋಗೆ ಪೋಸ್ ಕೊಡಲು ಗಿಡ ನೆಟ್ಟರೆ ಇಷ್ಟ ಇಲ್ಲ. ಮರ ಇರುವ ಕಡೆ ಗಿಡ ನೆಡುವುದಲ್ಲ, ಮರ ಇಲ್ಲದ ಕಡೆ ಗಿಡನೆಡಿ. ನಮ್ಮ ಊರಿನಲ್ಲಿ ನಾನು ಗಿಡಗಳನ್ನು ಬೆಳೆಸಿದ್ದೇನೆ ಎಂದರು.