ಬಳ್ಳಾರಿ: ಬಳ್ಳಾರಿ ನಗರವನ್ನು ಸ್ವಚ್ಛ-ಹಸಿರು-ನವ ನಗರವನ್ನಾಗಿಸಲು ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಮಹಾನಗರ ಪಾಲಿಕೆಯ ಮೇಯರ್ ತ್ರಿವೇಣಿ ಅವರು ಹಸಿರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಮತ್ತು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಸಾರ್ವಜನಿಕರಲ್ಲಿ ತ್ಯಾಜ್ಯದ ಪ್ರಮಾಣ ತಗ್ಗಿಸುವಿಕೆ, ಮರು ಬಳಕೆ ಹಾಗೂ ಸಂಸ್ಕರಣ (RRR – Reduce, Re-use and Recycle) ಪರಿಕಲ್ಪನೆ ಮತ್ತು ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯದಿರುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಬಳ್ಳಾರಿ ನಗರದ ಎ.ಪಿ.ಎಂ.ಸಿ ವೃತ್ತದಿಂದ ಕಾಲ್ನಡಿಗೆಯಲ್ಲಿ ಜಾಥಾ ಮೂಲಕ ಗಡಿಗಿ ಚೆನ್ನಪ್ಪ (ರಾಯಲ್ ವೃತ್ತ)ದವರೆಗೆ ಎಲ್ಲ ಅಂಗಡಿ ಮಾಲೀಕರಿಗೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡಲಾಯಿತು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಅನುಪಸ್ಥಿತಿಯಲ್ಲಿ ಅವರ ಸೋದರ, ಕಾಂಗ್ರೆಸ್ ಮುಖಂಡ ನಾರಾ ಶರತ್ ರೆಡ್ಡಿ ಅವರು ಜಾಥಾದಲ್ಲಿ ಪಾಲ್ಗೊಂಡರು.
ಈ ವೇಳೆ ಅಧಿಕಾರಿಗಳೊಂದಿಗೆ ಹಾಗೂ ಜಾಥಾದಲ್ಲಿ ಭಾಗವಹಿಸಿದವರನ್ನು ಉದ್ಧೇಶಿಸಿ ಮಾತನಾಡಿದ ನಾರಾ ಶರತ್ ರೆಡ್ಡಿ ಅವರು; ಬಳ್ಳಾರಿಯಲ್ಲಿ ಹಸಿರು ಹಾಗೂ ಸ್ವಚ್ಛತೆಯ ಕೊರತೆ ಬಹಳ ಇದೆ. ಶಾಸಕ ನಾರಾ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ಬಳ್ಳಾರಿಯ ಸ್ವಚ್ಛತೆಗೆ ಸಂಬಂಧಿಸಿ ಇರುವ ಸಮಸ್ಯೆಗಳನ್ನು ಪರಿಹರಿಸಿ ನಗರವನ್ನು ಸುಂದರ, ಸ್ವಚ್ಛ ಹಾಗೂ ಹಸಿರು ನಗರವನ್ನಾಗಿಸಬೇಕಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಅಂಗಡಿ ಮಾಲೀಕರು, ಗ್ರಾಹಕರು, ಜನಪ್ರತಿನಿಧಿಗಳು, ಅಧಿಕಾರಿಗಳೆಲ್ಲರ ಪಾತ್ರ ಪ್ರಮುಖವಾದುದು ಎಂದು ಅಭಿಪ್ರಾಯಪಟ್ಟರು.
ಮೈಸೂರಿನಂತಹ ನಮ್ಮಷ್ಟೇ ದೊಡ್ಡ ನಗರಗಳು ಈಗಾಗಲೇ ಸ್ವಚ್ಛತೆ ಕ್ಷೇತ್ರದಲ್ಲಿ ಸಾಧನೆ ಮಾಡಿವೆ. ಪ್ರಯತ್ನ ಪಟ್ಟರೆ ನಮಗೂ ಕೂಡ ಇದು ಸಾಧ್ಯ ಇದೆ. ನಾವೆಲ್ಲ ಈ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಶರತ್ ರೆಡ್ಡಿ ಹೇಳಿದರು.
ಜಾಥಾದಲ್ಲಿ ಭಾಗಿಯಾಗಿದ್ದ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು, ಮೇಯರ್, ಉಪಮೇಯರ್, ಅಧಿಕಾರಿಗಳು ಹಾಗೂ ಸಾರ್ವಜನಿಕರು ಬಳ್ಳಾರಿಯನ್ನು ಸ್ವಚ್ಛ-ಹಸಿರು-ನವ ನಗರವನ್ನಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.