ಬೆಂಗಳೂರು: ನೈಋತ್ಯ ಮುಂಗಾರು ಕೇರಳಕ್ಕೆ ಆಗಮಿಸಿದ ಎರಡು ದಿನಗಳ ನಂತರ ಇಂದು ಜೂನ್ 10 ರಂದು ಕರ್ನಾಟಕಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ.
ಈ ವರ್ಷ ಜೂನ್ 4 ರ ವೇಳೆಗೆ ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗಲಿದೆ ಎಂದು ಊಹಿಸಲಾಗಿದ್ದು, 4 ದಿನ ತಡವಾಗಿ ಆಗಮಿಸಿದ್ದು ಇದರಿಂದ ರಾಜ್ಯದಲ್ಲಿಯೂ ಮುಂಗಾರು ವಿಳಂಬವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ 1971 ಮತ್ತು 2020 ರ ನಡುವೆ ಲೆಕ್ಕಹಾಕಿದ 83 ಸೆಂ.ಮೀ ದೀರ್ಘಾವಧಿಯ ಸರಾಸರಿ (LPA) 92 ರಿಂದ 96 ಪ್ರತಿಶತದಷ್ಟು ಮಳೆಯ ಶೇಕಡಾ 42ರಷ್ಟು ಸಂಭವನೀಯತೆಯನ್ನು ಊಹಿಸುತ್ತದೆ. ಬೆಂಗಳೂರು ನಗರದಲ್ಲಿ ತಿಂಗಳಿಗೆ 11 ಸೆಂ.ಮೀ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರಿನ ಹವಾಮಾನ ಇಲಾಖೆ ವಿಜ್ಞಾನಿ ಎ ಪ್ರಸಾದ್, ಹಲವಾರು ಅಂಶಗಳಿಂದ ಮಾನ್ಸೂನ್ ಆಗಮನದಲ್ಲಿ ಸ್ವಲ್ಪ ವಿಳಂಬವಾಗಿದೆ. ಪಶ್ಚಿಮ ಮಾರುತಗಳನ್ನು ಸಮುದ್ರ ಮಟ್ಟದಿಂದ 4.5 ಕಿಮೀ ಎತ್ತರದಲ್ಲಿ ನೋಡಬೇಕು. ಅವುಗಳ ವೇಗವು 15-20 ಕಿಲೋ ಮೀಟರ್ ಗಳಾಗಬೇಕಿದ್ದು ಜೂನ್ 6ರವರೆಗೆ ಬಂದಿರಲಿಲ್ಲ ಎಂದರು.
ಕೇರಳದಲ್ಲಿ ನಾವು ಹೊಂದಿರುವ 14 ಮೇಲ್ವಿಚಾರಣಾ ಕೇಂದ್ರಗಳ ಪೈಕಿ, ಕನಿಷ್ಠ ಎಂಟರಿಂದ ಒಂಬತ್ತು ಕೇಂದ್ರಗಳಲ್ಲಿ ಎರಡು ದಿನಗಳ ಕಾಲ ನಿರಂತರವಾಗಿ ಕನಿಷ್ಠ 2.5 ಮಿಮೀ ಮಳೆಯನ್ನು ನಾವು ಗಮನಿಸಬೇಕಾಗಿದೆ ”ಎಂದು ಪ್ರಸಾದ್ ಹೇಳಿದರು.
ಇಂದಿನಿಂದ ರಾಜ್ಯದಲ್ಲಿ 5 ದಿನ ಭಾರೀ ಮಳೆ: ರಾಜ್ಯದಲ್ಲಿ ಇಂದಿನಿಂದ ಐದು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆ ಆಗುವ ಸಾಧ್ಯತೆಗಳಿದ್ದು, ಇಂದು ಸಂಜೆಯಿಂದ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿ ಸಾಧ್ಯತೆಯಿದೆ. ಬಿಫರ್ ಜಾಯ್ ಸೈಕ್ಲೋನ್ ಎಫೆಕ್ಟ್ನಿಂದಾಗಿ ಭಾರೀ ಮಳೆಯಾಗುತ್ತದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆಯಾಗಲಿದೆ.ರಕ್ಷಣಾ ಕಾರ್ಯಕ್ಕೆ ಸಜ್ಜಾಗಿರುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.