ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ಗಳಿಗೆ ಮರು ಜೀವ ಸಿಕ್ಕಂತಾಗಿದೆ. ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ ಸಿಗುವಂತೆ ಮಾಡಿದ್ದ ಇಂದಿರಾ ಕ್ಯಾಂಟೀನ್ನಲ್ಲಿ(Egg) ಇದೀಗ ಮೊಟ್ಟೆ ಕೂಡ ಸಿಗಲಿದೆ. ಇಂದಿರಾ ಕ್ಯಾಂಟೀನ್ನಲ್ಲಿ ಇನ್ನುಮುಂದೆ ಮೊಟ್ಟೆ ನೀಡುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ.
ಇಂದಿರಾ ಕ್ಯಾಂಟೀನ್ನಲ್ಲಿ ಪೌಷ್ಠಿಕಾಂಶ ಆಹಾರ ನೀಡಬೇಕು ಎಂದು ಸಿಎಂ ಸೂಚನೆ ಬೆನ್ನಲ್ಲೇ ಅನೇಕ ತಜ್ಞರು ಕಡಿಮೆ ಬೆಲೆಯಲ್ಲಿ ಉತ್ತಮ ಆಹಾರಕ್ಕೆ ಕೋಳಿ ಮೊಟ್ಟೆ ಬೆಸ್ಟ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಡ, ಶ್ರಮಿಕ ವರ್ಗದವರಿಗೆ ಕೋಳಿ ಮೊಟ್ಟೆ ಉತ್ತಮ ಪೌಷ್ಟಿಕಾಂಶ. ಹೀಗಾಗಿ ಕಾಂಗ್ರೆಸ್, ಬಿಬಿಎಂಪಿಯ ಮಾಜಿ ಸದಸ್ಯರು ಕೋಳಿ ಮೊಟ್ಟೆಗೆ ಒತ್ತಾಯಿಸಿದ್ದಾರೆ. ವಾರದಲ್ಲಿ ಮೂರು ದಿನವಾದ್ರೂ ಕೋಳಿ ಮೊಟ್ಟೆ ನೀಡುವಂತೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡಾ ಇಂದಿರಾ ಕ್ಯಾಂಟೀನ್ ನಲ್ಲಿ ಪೌಷ್ಠಿಕಾಂಶ ಆಹಾರಕ್ಕೆ ಸಲಹೆ ನೀಡಿದ್ದರು. ಇಂದಿರಾ ಕ್ಯಾಂಟೀನ್ ಫುಡ್ ಮೆನು ಬದಲಾವಣೆಗೆ ಸಾರ್ವಜನಿಕರು ಒತ್ತಾಯ ಮಾಡಿದ್ದರು. ಈ ಹಿನ್ನಲೆ ಸಿಎಂ ಸಿದ್ದರಾಮಯ್ಯನವರೇ ಪುಡ್ ಮೆನು ನಿರ್ಧಾರಕ್ಕೆ ಮುಂದಾಗಿದ್ದರು. ಸದ್ಯ ಈಗ ಅಪೌಷ್ಟಿಕತೆ ಹೋಗಲಾಡಿಸಲು ಕಡಿಮೆ ಬೆಲೆಯಲ್ಲಿ ಮೊಟ್ಟೆ ವಿತರಿಸುವಂತೆ ಮಾಜಿ ಸದಸ್ಯ ಅಬ್ದುಲ್ ವಾಜೀದ್ ಸಿಎಂಗೆ ಪತ್ರ ಬರೆದು ಮನವಿಗೆ ಮುಂದಾಗಿದ್ದಾರೆ.