ವಿದ್ಯುತ್ ದರ ವಿರೋಧಿಸಿ ಇಂದು ಕರ್ನಾಟಕ ಬಂದ್ ಕರೆ

Share and Enjoy !

Shares
Listen to this article

ಬೆಂಗಳೂರುವಿದ್ಯುತ್ ದರ ಏರಿಕೆ ವಿರೋಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇಂದು (ಜೂ.22)  ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಘೋಷಿಸಿತ್ತು. ಅದರಂತೆ ಎಲ್ಲಾ ವ್ಯಾಪಾರ ಮತ್ತು ಉದ್ಯಮ ಸಂಸ್ಥೆಗಳಿಗೆ ಗುರುವಾರ ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದ್ದು, ಬೆಂಬಲ ಸೂಚಿಸುವಂತೆ ಕೇಳಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಸ್ವಲ್ಪ ಮಟ್ಟದಲ್ಲಿ ತೊಂದರೆಯಾಗುವ ನಿರೀಕ್ಷೆಯಿದ್ದು, ಜೊತೆಗೆ ಕರ್ನಾಟಕ ಬಂದ್‌ಗೆ ಸಿಪಿಎಂ ಕೂಡ ಬೆಂಬಲ ನೀಡಿದೆ.

ಇನ್ನು ಕರ್ನಾಟಕ ಬಂದ್​ ಕುರಿತು ಕೆಸಿಸಿಐ ಅಧ್ಯಕ್ಷ ವಿನಯ್ ಜವಳಿ ಮಾತನಾಡಿ, ‘ಬಂದ್ ಕರೆ ಕೇವಲ ವ್ಯಾಪಾರ ಸಂಸ್ಥೆಗಳಿಗೆ ಮತ್ತು ಸ್ವಯಂಪ್ರೇರಿತವಾಗಿದೆ. ಅಗತ್ಯ ಸೇವೆಗಳಿಗೆ, ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ದಿನದ ಬಂದ್‌ನಿಂದ ವ್ಯಾಪಾರ ಸಂಸ್ಥೆಗಳು ನಷ್ಟವನ್ನು ಅನುಭವಿಸುತ್ತವೆ. ಆದರೆ, ವಿದ್ಯುತ್ ದರದ ಹೆಚ್ಚಳದಿಂದ ಮುಂದೆ ಕೈಗಾರಿಕೆಗಳು ಉಳಿಯುವುದಿಲ್ಲ ಎಂದು ಹೇಳಿದರು.

ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ರವಿವಾರ ಪೇಟೆ ಬಂದ್ ವಿದ್ಯುತ್ ದರ​ ಏರಿಕೆ ಖಂಡಿಸಿ ಬೆಳಗಾವಿ ನಗರ ಬಂದ್​ಗೆ ಕರೆ ಕೊಟ್ಟಿದ್ದು ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳ ಬೆಂಬಲ ಸೂಚಿಸಿದ್ದಾರೆ. ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ರವಿವಾರ ಪೇಟೆ ಬಂದ್ ಆಗಿದ್ದು ನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆ ಖಾಲಿ ಖಾಲಿಯಾಗಿದೆ

ಬಳ್ಳಾರಿ, ವಿಜಯನಗರದಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್​ ಮಾಡಿದ ವರ್ತಕರು

ವಿದ್ಯುತ್ ದರ ಏರಿಕೆ ಖಂಡಿಸಿ ಬಳ್ಳಾರಿ, ವಿಜಯನಗರ ಬಂದ್​ಗೆ ಬಳ್ಳಾರಿಯ ಚೇಂಬರ್ ಆಫ್ ಕಾಮರ್ಸ್​ ಕರೆ ನೀಡಿದೆ. ಹೀಗಾಗಿ ಸ್ವಯಂಪ್ರೇರಿತವಾಗಿ ವರ್ತಕರು ಅಂಗಡಿಗಳನ್ನು ಬಂದ್​ ಮಾಡಿದ್ದಾರೆ. ವಿದ್ಯುತ್​ ದರ ಕಡಿಮೆ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಸದ್ಯ ಬಂದ್ ಹಿನ್ನೆಲೆ ಬಳ್ಳಾರಿ ನಗರದ ಬಹುತೇಕ ರಸ್ತೆಗಳು ಖಾಲಿ‌ ಖಾಲಿ ಹೊಡೆಯುತ್ತಿವೆ.

ಇಂದು ರಾಜ್ಯದ ಗದಗ, ಬಿಜಾಪುರ, ರಾಣೆಬೆನ್ನೂರು, ರಾಯಚೂರು, ತಾಳಿಕೋಟಿ, ವಿಜಯನಗರ, ಮೈಸೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಶಿರಸಿ, ಕಾರವಾರ, ಬೀದರ್, ಶಿವಮೊಗ್ಗ, ಕೋಲಾರ, ಮಂಡ್ಯ, ಚಿಕ್ಕಮಂಗಳೂರು, ಯಾದಗಿರಿ, ಚಿತ್ರದುರ್ಗ, ಕಲ್ಯಾಣ್ ಕಾಮತಕ, ಹಾವೇರಿ, ಕಾಮತಕ ಜಿಲ್ಲಾ ಚೇಂಬರ್‌ಗಳು ಮತ್ತು ಇತರೆ ಉದ್ಯಮ ಸಂಘಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಮೇ 12 ರಂದು ತನ್ನ ಸುಂಕದ ಆದೇಶದಲ್ಲಿ ಶುಲ್ಕವನ್ನು ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳಕ್ಕೆ ಅನುಮೋದಿಸಿದೆ. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸಲು, ಕಾಂಗ್ರೆಸ್ ಸರ್ಕಾರ ಹೊಸ ದರವನ್ನು ಹೆಚ್ಚಿಸಿದೆ ಎಂದು ಬಿಜೆಪಿ ಆರೋಪಿಸಿದ್ದರಿಂದ ಈ ವಿಷಯ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಇನ್ನು ರಾಜ್ಯದಲ್ಲಿ ಸಾವಿರಾರು ಜನರು, ಈ ತಿಂಗಳು ವಿಪರೀತ ಬಿಲ್ ಅನ್ನು ಪಡೆದಿದ್ದರು. ಈ ಕುರಿತು ಅದು ಕೆಲವು ದೋಷದಿಂದಾಗಿದೆ ಎಂದು ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್) ತಿಳಿಸಿತ್ತು.

 

Share and Enjoy !

Shares